ಮುಂಬೈ: ಮಹದೇವ್ ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಮಾಲೀಕರು ಮತ್ತು ಪ್ರಚಾರಕರಿಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಡಿ-ಕಂಪನಿಯೊಂದಿಗೆ ಸಂಪರ್ಕ ಇರುವುದು ಇಡಿ ವಿಚಾರಣೆಯಿಂದ ಬಹಿರಂಗವಾಗಿದೆ.
ಬೆಟ್ಟಿಂಗ್ ಆ್ಯಪ್‌ನ ಸೌರಭ್ ಚಂದ್ರಶೇಖರ್‌ನೊಂದಿಗೆ ದಾವುದ್ ಸಹೋದರ ಮಸ್ತಾಕೀಮ್ ಅಲಿ ಕಸ್ಕರ್ ಸಂಪರ್ಕ ಹೊಂದಿದ್ದ. ಅಲ್ಲದೇ ಇದೇ ರೀತಿಯ ಆ್ಯಪ್ ಅನ್ನು ಪಾಕಿಸ್ತಾನಕ್ಕೂ ಮಾಡಿಕೊಡುವಂತೆ ಹೇಳಿದ್ದ. ಇದೇ ವೇಳೆ ಸೌರಭ್ ವಿರುದ್ಧ ಉಗ್ರ ನಿಗ್ರಹ ಕಾಯ್ದೆ ಅಡಿ ಪ್ರಕರಣ ದಾಖಲಿಸಲು ಇಡಿ ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನ ಕರೆನ್ಸಿಯಲ್ಲಿ ಕಾರ್ಯನಿರ್ವಹಿಸುವ ಬೆಟ್ಟಿಂಗ್ ಆ್ಯಪ್ ಒಂದನ್ನು ಅಭಿವೃದ್ಧಿಪಡಿಸುವಂತೆ ಕಸ್ಕರ್, ಸೌರಭ್‌ಗೆ ಆರ್ಡರ್ ನೀಡಿದ್ದ. ಅಲ್ಲದೇ ಸೌರಭ್ ದುಬೈ ಭೇಟಿ ವೇಳೆ ಸುಮಾರು 30 ಮಂದಿ ಬಾಡಿಗಾರ್ಡ್‌ಗಳನ್ನು ಕಸ್ಕರ್ ಒದಗಿಸಿದ್ದ.
ಆ್ಯಪ್‌ನಲ್ಲಿ ಬಂದ ಹಣವನ್ನು ಕನಿಷ್ಠ 500 ಮಂದಿ ಹವಾಲಾ ಏಜೆಂಟರು ಹಾಗೂ ಸುಮಾರು 70 ಶೆಲ್ ಕಂಪನಿಗಳ ಮೂಲಕ ಅಕ್ರಮವಾಗಿ ದುಬೈ ಸೇರಿದಂತೆ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ವರ್ಗಾಯಿಸಲಾಗುತ್ತಿತ್ತು. ಅಲ್ಲದೇ ಥಾಯ್ಲೆಂಡ್‌ನಲ್ಲಿ ಹೂಡಿಕೆ ಮಾಡಲಾಗುತ್ತಿತ್ತು. ಪಾಕಿಸ್ತಾನದಲ್ಲಿರುವ ಅಪರೇಟರ್‌ಗಳು ಇದನ್ನು ನಿರ್ವಹಿಸುತ್ತಿದ್ದರು. ಇದರಲ್ಲಿ ಹಿರಿಯ ರಾಜಕಾರಣಿಗಳು, ಅಧಿಕಾರಿಗಳು, ಸೆಲೆಬ್ರೆಟಿಗಳು, ಉದ್ಯಮಿಗಳು ಭಾಗಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಮುಖವಾಗಿ ಭಾರತದ ವಿರುದ್ಧ ಕೃತ್ಯಗಳು ನಡೆಸಲು ಈ ಹಣವನ್ನು ಬಳಸಲಾಗುತ್ತಿತ್ತು. ಇದಕ್ಕೆ ಪೂರಕವಾಗಿ ಅನೇಕ ದಾಖಲೆಗಳು, ಸಾಕ್ಷ್ಯಗಳು ಲಭ್ಯವಿದೆ ಎಂದು ಇಡಿ ಮೂಲಗಳು ಮಾಹಿತಿ ನೀಡಿವೆ.