Advertisement

ಡಿ. 22 ರಿಂದ 30ರವರೆಗೆ ಕರಾವಳಿ ಉತ್ಸವ

10:48 AM Oct 28, 2017 | |

ಮಹಾನಗರ: ಈ ಬಾರಿಯ ಕರಾವಳಿ ಉತ್ಸವವು ಡಿ.22ರಿಂದ 30ರ ವರೆಗೆ ನಡೆಸಲು ತೀರ್ಮಾನಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌, ಶಾಸಕ ಜೆ.ಆರ್‌. ಲೋಬೋ ನೇತೃತ್ವದಲ್ಲಿ ಸಮಾಲೋಚನ ಸಭೆ ನಡೆಯಿತು. 

Advertisement

ಅಪರ ಜಿಲ್ಲಾಧಿಕಾರಿ ಕುಮಾರ್‌ ಮಾತನಾಡಿ, ಕರಾವಳಿ ಉತ್ಸವಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಒಂದು ಸಭೆ ಕರೆದಿದ್ದೆವು. ಕರಾವಳಿ ಉತ್ಸವ ನಡೆಯುವ ಮೈದಾನಕ್ಕೆ ಟೆಂಡರ್‌ ಕರೆದಿದ್ದೇವೆ. ಉತ್ಸವಗಳ ಸಮಿತಿಗೆ ಕ್ರಿಯಾಶೀಲ ವ್ಯಕ್ತಿಗಳನ್ನು ಸೇರಿಸಿಕೊಂಡಿಲ್ಲ ಎಂದು ಕಳೆದ ಬಾರಿ ದೂರು ಬಂದಿದ್ದು, ಈ ಬಾರಿ ಸರಿಪಡಿಸಿಕೊಂಡಿದ್ದೇವೆ ಎಂದರು.

ಕಳೆದ ಬಾರಿಯಂತೆಯೇ ಈ ಬಾರಿ ಕರಾವಳಿ ಗೌರವ ಪ್ರಶಸ್ತಿಯನ್ನು ನೀಡಲಾಗುವುದು. ಕರಾವಳಿ ಉತ್ಸವ
ನಡೆಸಲು ಸರಕಾರದಿಂದ ಈಗಾಗಲೇ 30 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದೆ. ಈ ಬಾರಿಯ ಮೆರವಣಿಗೆಯು ನೆಹರೂ ಮೈದಾನದಿಂದ ಹೊರಟು ಕರಾವಳಿ ಮೈದಾನಕ್ಕೆ ತಲುಪಲಿದೆ. ಕದ್ರಿಪಾರ್ಕ್‌ನಲ್ಲಿ ನಡೆಯುವ ಅನೇಕ ಕಾರ್ಯಕ್ರಮಗಳು ಕರಾವಳಿ ಮೈದಾನಕ್ಕೆ ಸ್ಥಳಾಂತರಗೊಳ್ಳಲಿವೆ ಎಂದು ವಿವರಿಸಿದರು.

ಸಾಂಸ್ಕೃತಿಕ ಸಮಿತಿ ಸದಸ್ಯರು ಮಾತನಾಡಿ, ಕರಾವಳಿ ಉತ್ಸವದ ವೇಳೆ ಕದ್ರಿಪಾರ್ಕ್‌ನಲ್ಲಿ ಪ್ರತಿದಿನ ಎರಡು ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತೇವೆ. ತುಳು, ಕೊಂಕಣಿ, ಬ್ಯಾರಿ ಅಕಾಡೆಮಿಯಿಂದ ಕಾರ್ಯಕ್ರಮ,
ಯಾವುದಾದರೂ ಒಂದು ದಿನ ನಗರದ ಪತ್ರಿಕೋದ್ಯಮಿಗಳ ಮುಖಾಂತರ ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮ
ನಡೆಸಲಾಗುವುದು. ಈ ಬಾರಿ ಕದ್ರಿಪಾರ್ಕ್‌ನಲ್ಲಿ ನಡೆಯುವ ಬಹುತೇಕ ಕಾರ್ಯಕ್ರಮಗಳು ಕರಾವಳಿ ಮೈದಾನಕ್ಕೆ
ಸ್ಥಳಾಂತರವಾಗುತ್ತದೆ ಎಂದರು.

ಬೀಚ್‌ ಉತ್ಸವ ಸಮಿತಿ ಸದಸ್ಯರು ಮಾತನಾಡಿ, ಈ ಬಾರಿ ಮೂರು ದಿನಗಳ ಕಾಲ ಆಹಾರಮೇಳ, ಸಾಂಪ್ರದಾಯಿಕ ಉತ್ಸವ ವನ್ನು ನಡೆಸಲಾಗುವುದು. ಅಲ್ಲದೆ, ಈ ಬಾರಿ 50 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಂದ ಸಾಸ್ಕೃತಿಕ ಕಾರ್ಯಕ್ರಮ ನಡೆಸಲು ಯೋಚಿಸಲಾಗಿದೆ ಎಂದರು.

Advertisement

ಹೆಚ್ಚಿನ ಅನುದಾನದ ಭರವಸೆ
ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಮಾತನಾಡಿ, ಕರಾವಳಿ ಉತ್ಸವಕ್ಕೆ ರಾಜ್ಯ ಸರಕಾರದಿಂದ ಈಗಾಗಲೇ 30 ಲಕ್ಷ ರೂ. ಬಿಡುಗಡೆ ಮಾಡಿದ್ದು, ಇನ್ನೂ ಹೆಚ್ಚಿನ ಅನುದಾನ ಬಿಡುಗಡೆಗೆ ಪ್ರಯತ್ನ ನಡೆಸುತ್ತೇನೆ. ಆರ್ಥಿಕ ಸಮಿತಿಯ
ಸದಸ್ಯರು ಸ್ಥಳೀಯವಾಗಿರುವ ಅನೇಕ ಸಂಸ್ಥೆಗಳಿಗೆ ಭೇಟಿ ನೀಡಿ ಪ್ರಾಯೋಜಕತ್ವದ ವಿಚಾರಕ್ಕೆ ಸಂಬಂಧಪಟ್ಟಂತೆ ಕೆಲಸ ನಡೆಸಲಿ. ಕರಾವಳಿ ಉತ್ಸವ ನಡೆಯುವ ಸಂದರ್ಭದಲ್ಲಿಯೇ ಪಿಲಿಕುಳದಲ್ಲಿ ನಡೆಸಲು ಕಂಬಳ ಸಮಿತಿ ಜತೆ ಚರ್ಚೆ ನಡೆಸಿ ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ಸಮನ್ವಯದಿಂದ ಕೆಲಸ
ಈ ಬಾರಿಯ ಕರಾವಳಿ ಉತ್ಸವಕ್ಕೆ ಯಾವುದಾದರೊಂದು ಥೀಮ್‌ ಇಟ್ಟುಕೊಂಡರೆ ಒಳ್ಳೆಯದು. ಪ್ರತಿಯೊಂದು ಸಮಿತಿಗಳು ಸಮನ್ವಯದಿಂದ ಕೆಲಸ ನಿರ್ವಹಿಸಬೇಕು.
ಶಶಿಕಾಂತ್‌ ಸೆಂಥಿಲ್‌,ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next