ಭುವನೇಶ್ವರ: ಪ್ರಬಲ ಚಂಡಮಾರುತ ಯಾಸ್ ಒಡಿಶಾದ ಭದ್ರಕ್ ಜಿಲ್ಲೆಯ ಧಾಮ್ರ ಬಂದರು ಸಮೀಪದಲ್ಲಿ ಬುಧವಾರ(ಮೇ 26) ಮಧ್ಯಾಹ್ನ ಭೂಪ್ರದೇಶಕ್ಕೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದು, ಏತನ್ಮಧ್ಯೆ ಒಡಿಶಾ ಮತ್ತು ಪಶ್ಚಿಮಬಂಗಾಳ ಕರಾವಳಿ ಪ್ರದೇಶದಲ್ಲಿ ಭಾರೀ ಗಾಳಿ, ಮಳೆ ಆರಂಭವಾಗಿರುವುದಾಗಿ ವರದಿ ಹೇಳಿದೆ.
ಇದನ್ನೂ ಓದಿ:ವಾಟ್ಸಾಪ್, ಫೇಸ್ ಬುಕ್, ಟ್ವಿಟ್ಟರ್ ಬ್ಲಾಕ್ ? ಸಂಸ್ಥೆಗಳು ಹೇಳುವುದೇನು ?
ಯಾಸ್ ಚಂಡಮಾರುತದ ಪರಿಣಾಮ ಪಶ್ಚಿಮಬಂಗಾಳದ ಪೂರ್ವ ಮಿಡ್ನಾಪುರ್ ದ ನ್ಯೂ ಡಿಘಾ ಸಮುದ್ರದಲ್ಲಿ ಭಾರೀ ಗಾತ್ರದ ಅಲೆಗಳು ಮೇಲಕ್ಕೆದ್ದಿದ್ದು, ಜನವಸತಿ ಇರುವ ಸ್ಥಳಕ್ಕೆ ನೀರು ನುಗ್ಗಿರುವುದಾಗಿ ವರದಿ ವಿವರಿಸಿದೆ. ಒಡಿಶಾದ ಬಾಲಾಸೋರ್ ನಲ್ಲಿ ಪ್ರಬಲ ಯಾಸ್ ಚಂಡಮಾರುತ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಯಾಸ್ ಚಂಡಮಾರುತ ಮೂರರಿಂದ ನಾಲ್ಕು ಗಂಟೆಗಳ ಕಾಲ ಅಬ್ಬರಿಸಲಿದೆ ಎಂದು ವರದಿ ಹೇಳಿದೆ. ಮುಂಜಾಗ್ರತಾ ಕ್ರಮವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಲು ಎನ್ ಡಿಆರ್ ಎಫ್ ತಂಡ ಸನ್ನದ್ಧವಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪಶ್ಚಿಮಬಂಗಾಳದ ಕರಾವಳಿ ಪ್ರದೇಶದಲ್ಲಿ ಪ್ರಬಲ ಅಲೆಗಳು ಮೇಲಕ್ಕೇಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ. ಯಾಸ್ ಚಂಡಮಾರುತ ಅಪ್ಪಳಿಸಲಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಒಡಿಶಾ ಮತ್ತು ಬಂಗಾಳ ಕರಾವಳಿ ಪ್ರದೇಶದಿಂದ ಸುಮಾರು 20 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ.