ಹೊಸದಿಲ್ಲಿ : ತನ್ನ ಪ್ರಚಂಡ ಶಕ್ತಿಯೊಂದಿಗೆ ಸಾಗರದಲ್ಲೇ ಮುನ್ನುಗ್ಗುತ್ತಿರುವ ವಾಯು ಚಂಡಮಾರುತ ತನ್ನ ಪಥ ಬದಲಾಯಿಸಿರುವ ಕಾರಣ ಅದಿನ್ನು ಗುಜರಾತ್ ಕರಾವಳಿಗೆ ಅಪ್ಪಳಿಸುವುದಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಹಾಗಿದ್ದರೂ ಗುಜರಾತ್ ಸಹಿತ ದೇಶದ ಪಶ್ಚಿಮ ಕರಾವಳಿಯ ಉದ್ದಕ್ಕೂ ಭಾರೀ ಮಳೆ, ಮತ್ತು ಗಂಟೆಗೆ 155 ರಿಂದ 165 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ ಕಟ್ಟೆಚ್ಚರ ವಹಿಸಲಾಗಿದೆ.
ರಕ್ಷಣಾ ತಂಡಗಳನ್ನು ಜಾಗೃತ ಸ್ಥಿತಿಯಲ್ಲಿ ಇರಿಸಲಾಗಿದೆ. ಹೆಲ್ಪ್ ಲೈನ್‌ಗಳನ್ನು ಸಜ್ಜುಗೊಳಿಸಲಾಗಿದೆ; ಭಾರತೀಯ ಕರಾವಳಿ ಕಾವಲು ಪಡೆ, ನೌಕಾ ಪಡೆ, ಭೂ ಸೇನೆ ಮತ್ತು ವಾಯು ಪಡೆಯನ್ನು ಕೂಡ ಯಾವುದೇ ಕ್ಷಣದಲ್ಲಿ ರಕ್ಷಣಾ ಕಾರ್ಯಕ್ಕೆ ನೆರವಾಗುವುದಕ್ಕಾಗಿ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ವಾಯು ಚಂಡಮಾರುತ ತನ್ನ ಪಥವನ್ನು ಬದಲಿಸಿರುವ ಹೊರತಾಗಿಯೂ ಸೌರಾಷ್ಟ್ರ ಕರಾವಳಿಯಾಗಿ ಸಾಗುತ್ತಿರುವುದರಿಂದ ಅಮ್ರೇಲಿ, ಗಿರ್, ಸೋಮನಾಥ್, ದೀವ್, ಜುನಾಗಢ, ದೇವಭೂಮಿ, ದ್ವಾರಕಾ ಮತ್ತು ಕಚ್ ಜಿಲ್ಲೆಗಳಲ್ಲಿ ಭಾರೀ ಮಳೆ ಮತ್ತು ಬಲವಾದ ಗಾಳಿ ಬೀಸುತ್ತಿದ್ದು ಇವು ತೀವ್ರವಾಗಿ ಬಾಧಿತವಾಗಿವೆ.
ನಿನ್ನೆ ಬುಧವಾರ ಗುಜರಾತ್ ಮತ್ತು ದೀವ್ ನ ತಗ್ಗು ಪ್ರದೇಶಗಳ ಸುಮಾರು 3.1 ಲಕ್ಷ ಮಂದಿಯನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿತ್ತು.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಂಕಜ್ ಕುಮಾರ್ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ, ವಾಯು ಚಂಡ ಮಾರುತ ತನ್ನ ಪಥವನ್ನು ಬದಲಾಯಿಸಿದೆ ಎಂದು ಐಎಂಡಿ ಹೇಳಿರುವ ಹೊರತಾಗಿಯೂ ಬಲವಾಗಿ ಬೀಸುತ್ತಿರುವ ಗಾಳಿ ಮತ್ತು ಭಾರೀ ಮಳೆಯಿಂದಾಗಿ ವ್ಯಾಪಕ ಅನಾಹುತಗಳಾಗುವ ಸಾಧ್ಯತೆಗಳಿವೆ ಎಂದು ಹೇಳಿದರು.