ಭುವನೇಶ್ವರ/ಹೈದರಾಬಾದ್: ತಿತ್ಲಿ ಚಂಡಮಾರುತ ಒಡಿಶಾ ಕರಾವಳಿಗೆ ಗುರುವಾರ ಬೆಳಗ್ಗಿನ ಜಾವ ಅಪ್ಪಳಿಸಿದೆ. ಅದರ ಪರಿಣಾಮವಾಗಿ ಆಂಧ್ರ ಮತ್ತು ಒಡಿಶಾದಲ್ಲಿ ಧಾರಾಕಾರ ಮಳೆಯಾಗಿದೆ. ಆಂಧ್ರಪ್ರದೇಶದಲ್ಲಿ ಎಂಟು ಜನ ಸಾವನ್ನಪ್ಪಿದ್ದಾರೆ. ಒಡಿಶಾದಲ್ಲಿ 3 ಲಕ್ಷಕ್ಕೂ ಹೆಚ್ಚು ಜನರನ್ನು ಬುಧವಾರವೇ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ವಿಪರೀತ ವೇಗದಿಂದ ಗಾಳಿ ಬೀಸುತ್ತಿದ್ದು, ಭಾರಿ ಮಳೆ ಸುರಿಯುತ್ತಿದೆ. ಆಂಧ್ರದ ಶ್ರೀಕಾಕುಳಂ ಮತ್ತು ವಿಜಯನಗರಂ ಜಿಲ್ಲೆಯಲ್ಲಿ ಭಾರಿ ಪ್ರಮಾಣದ ಹಾನಿಯಾಗಿದೆ. ಚಂಡಮಾರುತದಿಂದ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ.
ಸಮುದ್ರಕ್ಕಿಳಿದಿದ್ದ ಆರು ಮೀನುಗಾರರು ಸಾವನ್ನಪ್ಪಿದ್ದಾರೆ. ಇನ್ನೊಂದೆಡೆ ಮೀನುಗಾರಿಕೆಗೆ ತೆರಳಿದ್ದ ಎರಡು ಬೋಟ್ ವಾಪಸಾಗಿಲ್ಲ. ಈ ಬಗ್ಗೆ ಶೋಧ ಕಾರ್ಯ ನಡೆದಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಶ್ರೀಕಾಕುಳಂನಲ್ಲಿ ರಸ್ತೆ ಸಂಪರ್ಕ ಕಡಿಗೊಂಡಿದ್ದು, ಸುಮಾರು 2 ಸಾವಿರ ವಿದ್ಯುತ್ ಕಂಬಗಳು ಉರುಳಿವೆ.
ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ವಹಿಸಿರುವ ಸಿಎಂ ಚಂದ್ರಬಾಬು ನಾಯ್ಡು, ಇಸ್ರೋ ಹಾಗೂ ಇತರ ಏಜೆನ್ಸಿಗಳಿಂದ ಮಾಹಿತಿಯನ್ನು ಪಡೆದು ಸೂಕ್ತ ಮುನ್ಸೂಚನೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ. ಅಲ್ಲದೆ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆಯನ್ನೂ ಅವರು ವಹಿಸಿದ್ದಾರೆ. ಗುರುವಾರ ಬೆಳಗೆ 5.30ಕ್ಕೆ ಚಂಡಮಾರುತ ಆಂಧ್ರ ಕರಾವಳಿಯನ್ನು ದಾಟಿ ಸಾಗಿದ್ದು, ಬೆಳಗ್ಗೆ 8 ಗಂಟೆಗೆ ನಿಯಂತ್ರಣಕ್ಕೆ ಬಂದಿದೆ. ಒಡಿಶಾದ ಗೋಪಾಲಪುರಕ್ಕೆ ಬಡಿದ ಚಂಡಮಾರುತದ ವೇಗ ಗಂಟೆಗೆ 126 ಕಿ.ಮೀ ವರೆಗೂ ಇತ್ತು.
ಒಡಿಶಾದಲ್ಲಿ ಭಾರಿ ಮಳೆ: ಇನ್ನೊಂದೆಡೆ ಒಡಿಶಾದಲ್ಲಿ ಚಂಡಮಾರುತದಿಂದ ಯಾರೂ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿಲ್ಲ. ಗಂಜಂ ಹಾಗೂ ಗಜಪತಿ ಜಿಲ್ಲೆಗಳಲ್ಲಿ ಭಾರಿ ಪ್ರಮಾಣದಲ್ಲಿ ಆಸ್ತಿ ಪಾಸ್ತಿ ಹಾನಿಯಾಗಿದೆ. ಗಂಜಂ, ಗಜಪತಿ ಹಾಗೂ ಪುರಿ ಜಿಲ್ಲೆಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗಿದ್ದು, ವಿದ್ಯುತ್ ವ್ಯತ್ಯಯ ಹಾಗೂ ಟೆಲಿಕಾಂ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿದೆ. ಒಟ್ಟು ಎಂಟು ಜಿಲ್ಲೆಗಳು ತಿತ್ಲಿ ಚಂಡಮಾರುತದಿಂದ ಬಾಧಿತವಾಗಿವೆ.
ಆದರೆ ಯಾವುದೇ ಗಂಭೀರ ಪ್ರಮಾಣದ ಹಾನಿ ಒಡಿಶಾದಲ್ಲಿ ಆಗಿರುವುದು ವರದಿಯಾಗಿಲ್ಲ. ವಿದ್ಯುತ್ ಕಂಬಗಳು ಉರುಳಿದ್ದು, ಅವುಗಳ ಸರಿಪಡಿಸುವ ಪ್ರಕ್ರಿಯೆ ಆರಂಭಿಸಲಾಗಿದೆ. ಇನ್ನೊಂದೆಡೆ, ರಸ್ತೆಯ ಮೇಲೆ ಮರಗಳು ಬಿದ್ದಿದ್ದು, ಇವುಗಳನ್ನು ತೆರವುಗೊಳಿಸುವ ಪ್ರಕ್ರಿಯೆಯನ್ನೂ ಆರಂಭಿಸಲಾಗಿದೆ. ಒಡಿಶಾದಲ್ಲಿ 13 ಎನ್‌ಡಿಆರ್‌ಎಫ್ ಮತ್ತು 9 ಒಡಿಆರ್‌ಎಎಫ್ ತಂಡಗಳನ್ನು ನಿಯೋಜಿಸಲಾಗಿದೆ. ಚಂಡಮಾರುತದ ಪರಿಣಾಮ ಪಶ್ಚಿಮ ಬಂಗಾಳದಲ್ಲೂ ಕಾಣಿಸಿಕೊಂಡಿದ್ದು, ರಾಜ್ಯದ ದಕ್ಷಿಣಭಾಗದಲ್ಲಿ ವ್ಯಾಪಕ ಮಳೆಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಚಂಡಮಾರುತದ ಪ್ರಭಾವದಿಂದ ಗುರುವಾರ ತಡರಾತ್ರಿಯಿಂದ ಧಾರಾಕಾರ ಮಳೆಯಾಗುತ್ತಿದೆ.
ಪ್ಲೋರಿಡಾದಲ್ಲಿ ಸುಂಟರಗಾಳಿ
ಅಮೆರಿಕದ ಫ್ಲೋರಿಡಾದಲ್ಲಿ ಮಿಶೆಲ್ ಸುಂಟರಗಾಳಿ ಅಟ್ಟಹಾಸ ಮೆರೆದಿದೆ. ಗಂಟೆಗೆ 250 ಕಿ.ಮೀ ವೇಗದಲ್ಲಿ ಗಾಳಿ ಬೀಸಿದ್ದು, ಇದು ಈ ಭಾಗದಲ್ಲಿ ನೂರಕ್ಕೂ ಹೆಚ್ಚು ವರ್ಷ ಗಳಿಂದೀಚೆಗೆ ಬೀಸಿದ ಭೀಕರ ಸುಂಟರಗಾಳಿ ಎಂದು ಹೇಳಲಾಗಿದೆ. ಚಂಡಮಾರುತ ದೊಟ್ಟಿಗೆ ಸುರಿದ ವಿಪರೀತ ಮಳೆಯಿಂದಾಗಿ ರಸ್ತೆಗಳು ಮುಳುಗಿವೆ. ಪನಾಮಾ ನಗರದಲ್ಲಿ ಭಾರಿ ಪ್ರಮಾಣದ ಹಾನಿಯಾಗಿದೆ.