ಕೋಲ್ಕತ್ತಾ: ಪಶ್ಚಿಮ ಬಂಗಾಲದಲ್ಲಿ ದೀಪಾವಳಿ ಹಾಗೂ ಕಾಳಿ ಪೂಜೆಯ ಸಡಗರವನ್ನು ಸಿತ್ರಂಗ್ ಚಂಡಮಾರುತ ಕಿತ್ತುಕೊಂಡಿದೆ.
ಚಂಡಮಾರುತವು ಸೋಮವಾರ ಗಂಟೆಗೆ 33 ಕಿ.ಮೀ. ವೇಗದಲ್ಲಿ ಉತ್ತರ-ಈಶಾನ್ಯ ದಿಕ್ಕಿನತ್ತ ಸಂಚರಿಸಲು ಆರಂಭಿಸಿದ್ದು, ಮುಂದೆ ಸಾಗಿದಂತೆ ಅದರ ತೀವ್ರತೆ ಹೆಚ್ಚಾಗಿದೆ. ಪರಿಣಾಮವೆಂಬಂತೆ, ಪ.ಬಂಗಾಲ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಭಾರೀ ಮಳೆ ಆರಂಭವಾಗಿದೆ.
ಮಂಗಳವಾರ ಚಂಡಮಾರುತವು ಬಾಂಗ್ಲಾ ಕರಾವಳಿಗೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬಂಗಾಲ ಮಾತ್ರವಲ್ಲದೇ ಅಸ್ಸಾಂ, ತ್ರಿಪುರ, ಮೇಘಾಲಯ ಮತ್ತು ಮಿಜೋರಾಂನಲ್ಲೂ ಧಾರಾಕಾರ ಮಳೆಯಾಗಲಿದೆ. ಚಂಡಮಾರುತದ ಅಬ್ಬರವೇನಾದರೂ ಹೆಚ್ಚಾದರೆ, ಉಂಟಾಗಬಹುದಾದ ಅನಾಹುತವನ್ನು ಸಮರ್ಥವಾಗಿ ನಿಭಾಯಿಸಲು ಎಲ್ಲ ರಾಜ್ಯ ಸರಕಾರಗಳೂ ಮುನ್ನೆಚ್ಚರಿಕ ಕ್ರಮಗಳನ್ನು ಕೈಗೊಂಡಿವೆ.
ಪೆಂಡಾಲ್ ಕುಸಿದುಬಿತ್ತು: ಸೋಮವಾರ ಪ.ಬಂಗಾಲದ ಕೂಚ್ ಬೆಹಾರ್‌ನಲ್ಲಿ ಭಾರೀ ಬಿರುಗಾಳಿಗೆ ಪೂಜಾ ಪೆಂಡಾಲ್‌ವೊಂದು ಕುಸಿದುಬಿದ್ದಿದೆ. ಬಖಾಲಿ ಬೀಚ್‌ನಲ್ಲಿ ಎನ್‌ಡಿಆರ್‌ಎಫ್ ತಂಡ ನಿಯೋಜನೆಗೊಂಡಿದ್ದು, ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.