ಮಂಗಳೂರು: ಕರಾವಳಿ ಭಾಗದಲ್ಲಿ ಯಾವಾಗಲೂ ಯಥೇಚ್ಛವಾಗಿ ಮಳೆ ಸುರಿಯುತ್ತಿದೆ. ಅದರಲ್ಲಿಯೂ ಚಂಡಮಾರುತ ಪರಿಣಾಮ ಬಿದ್ದರೆ ಗುಡುಗು ಸಹಿತ ಭಾರೀ ಮಳೆಯಾಗುತ್ತದೆ. ಕರಾವಳಿ ಭಾಗಕ್ಕೆ ಕಳೆದ ವರ್ಷದಂತೆ ಈ ವರ್ಷವೂ ಮೂರು ಚಂಡಮಾರುತ ಪರಿಣಾಮ ಬೀರಿದ್ದವು. ಈಗ ಮತ್ತೂಮ್ಮೆ ಅರಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಅದರ ಸಾಂದ್ರತೆ ಜಾಸ್ತಿಯಾದರೆ, ಕರಾವಳಿಗೆ ಮತ್ತೂಂದು ಚಂಡಮಾರುತ ಪರಿಣಾಮ ಬೀರುವ ಸಾಧ್ಯತೆ ಇದೆ.
ಆರು ಚಂಡಮಾರುತ
ಕಳೆದ ಎರಡು ವರ್ಷಗಳಲ್ಲಿ ಒಟ್ಟಾರೆ ಆರು ಚಂಡಮಾರುತಗಳು ಕರಾವಳಿಯಲ್ಲಿ ಪ್ರಭಾವ ಬೀರಿದ್ದವು. ಕಳೆದ ಡಿಸೆಂಬರ್‌ನಿಂದ ಮೇ ವರೆಗೆ ರಾಜ್ಯದ ಪಾಲಿಗೆ ಒಟ್ಟು ಮೂರು ಪ್ರಬಲ ಚಂಡಮಾರುತ ಪರಿಣಾಮಗಳು ಬೀರಿವೆ. ಡಿಸೆಂಬರ್ ಕೊನೆಯಲ್ಲಿ “ಓಖೀ’ ಚಂಡಮಾರುತ ದಕ್ಷಿಣ ಭಾರತದ ಕರಾವಳಿಗೆ ಅಪ್ಪಳಿಸಿತ್ತು. ನಿರಂತರ ಮಳೆ, ಗಾಳಿ ಪರಿಣಾಮ ಕರಾವಳಿ ಭಾಗದಲ್ಲಿ ಸಾಕಷ್ಟು ಬೆಳೆನಾಶ ಹಾಗೂ ಪ್ರಾಣ ಹಾನಿಯಾಗಿತ್ತು.
ಮೇ ತಿಂಗಳಲ್ಲಿ “ಸಾಗರ್’ ಚಂಡಮಾರುತದ ಪರಿಣಾಮ ಕರಾವಳಿ ತೀರದಲ್ಲಿ ಗಾಳಿ, ಮಳೆಯಾಗಿತ್ತು. ಬಳಿಕ “ಮೆಕುನು’ ಎಂಬ ಪ್ರಬಲ ಚಂಡಮಾರುತ ಅರಬಿ ಸಮುದ್ರದಲ್ಲಿ ಸೃಷ್ಟಿಯಾಗಿ ಒಮಾನ್ ದೇಶದಲ್ಲಿ ಸಾಕಷ್ಟು ನಷ್ಟ-ಹಾನಿಯುಂಟು ಮಾಡಿತ್ತು.
ಈ ಬಾರಿ ಎಪ್ರಿಲ್ ಕೊನೆಯಲ್ಲಿ (ಪೂರ್ವ ಮುಂಗಾರು) ಬಂಗಾಲ ಕೊಲ್ಲಿಯಲ್ಲಿ ರೂಪು ಗೊಂಡ “ಫೋನಿ’ ಎಂಬ ಚಂಡ ಮಾರುತದ ಪರಿಣಾಮ ಕರಾವಳಿಯಲ್ಲಿ ಉತ್ತಮ ಮಳೆಯಾಗಿತ್ತು. ಬಳಿಕ ಜೂನ್ ತಿಂಗಳಲ್ಲಿ “ವಾಯು’ ಚಂಡಮಾರುತ ಕರಾವಳಿ ಭಾಗಕ್ಕೆ ಪರಿಣಾಮ ಬೀರಿತ್ತು. ಕೆಲ ದಿನಗಳ ಹಿಂದೆ “ಕ್ಯಾರ್’ ಎಂಬ ಚಂಡಮಾರುತ ಪರಿಣಾಮ ಕರಾವಳಿ ಭಾಗಗಳಲ್ಲಿ ಭಾರೀ ಮಳೆಯಾಗಿತ್ತು.
ಚಂಡಮಾರುತದ ಪರಿಣಾಮದಿಂದ ಕಳೆದ ವರ್ಷ ಕರಾವಳಿಯಲ್ಲಿ ಪೂರ್ವ ಮುಂಗಾರು ಉತ್ತಮವಾಗಿತ್ತು. ವಾಡಿಕೆ ಮಳೆ ಪ್ರಮಾಣದಲ್ಲಿ ಶೇ. 87ರಷ್ಟು ಹೆಚ್ಚಳವಾಗಿದ್ದರೆ ಈ ವರ್ಷ ಶೇ. 75ರಷ್ಟು ಕಡಿಮೆ ಇತ್ತು. ಮುಂಗಾರು ಋತುವಿನಲ್ಲಿ ಈ ವರ್ಷ ಶೇ. 22ರಷ್ಟು ಹೆಚ್ಚಳವಾಗಿತ್ತು. ಕಳೆದ ವರ್ಷ ಹಿಂಗಾರು ಮಳೆ ಶೇ. 31ರಷ್ಟು ಕಡಿಮೆಯಾಗಿದ್ದರೆ ಈ ವರ್ಷ ಈಗಾಗಲೇ ವಾಡಿಕೆ ಗುರಿ ತಲುಪಿದೆ.
ಲಕ್ಷದ್ವೀಪ-ಕೇರಳ ನಡುವೆ ಅರಬಿ ಸಮುದ್ರದಲ್ಲಿ ನಿಮ್ನ ಒತ್ತಡ ಸೃಷ್ಟಿಯಾಗಿದ್ದು, ಮುಂದಿನ ದಿನಗಳಲ್ಲಿ ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆ ಇದೆ. ಪರಿಣಾಮ ಮುಂದಿನ ಎರಡು ದಿನ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗಬಹುದು.
– ಸುನಿಲ್ ಗವಾಸ್ಕರ್, ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ