Advertisement

ನಿವಾರ್ ಚಂಡಮಾರುತದ ಅಬ್ಬರ: ಚೆನ್ನೈ,ಪಾಂಡಿಚೇರಿಯಲ್ಲಿ ಭಾರೀ ಗಾಳಿ-ಮಳೆ; ಜನಜೀವನ ಅಸ್ತವ್ಯಸ್ತ

11:30 AM Nov 26, 2020 | Nagendra Trasi |

ಚೆನ್ನೈ/ಪಾಂಡಿಚೇರಿ: ನಿವಾರ್ ಚಂಡಮಾರುತದ ಹೊಡೆತಕ್ಕೆ ತಮಿಳುನಾಡು, ಆಂಧ್ರಪ್ರದೇಶ ತತ್ತರಿಸಿ ಹೋಗಿದ್ದು, ಭಾರೀ ಗಾಳಿ ಮಳೆಗೆ 80ಕ್ಕೂ ಅಧಿಕ ಮರಗಳು ಧರೆಗುರುಳಿ ಬಿದ್ದಿದೆ. ನಿವಾರ್ ಚಂಡಮಾರುತ ಗಂಟೆಗೆ 16 ಕಿಲೋ ಮೀಟರ್ ವೇಗದಲ್ಲಿ ತನ್ನ ಕೇಂದ್ರ ಸ್ಥಾನದ ದಿಕ್ಕನ್ನು ಬದಲಿಸಿದ್ದು, ಕಡಲೂರು ಪ್ರದೇಶಕ್ಕೆ 50 ಕಿಲೋ ಮೀಟರ್ ವೇಗದಲ್ಲಿ ಕರಾವಳಿ ಪ್ರದೇಶಕ್ಕೆ ಬಡಿದಪ್ಪಳಿಸಿರುವುದಾಗಿ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

Advertisement

ಚಂಡಮಾರುತದ ಅಬ್ಬರ ಮುಂದುವರಿಯಲಿದ್ದು, ನಿವಾರ್ ಚಂಡಮಾರುತ ಪಾಂಡಿಚೇರಿ ಕರಾವಳಿ ಪ್ರದೇಶದಲ್ಲಿ 120/130 ಕಿಲೋ ಮೀಟರ್ ವೇಗದಲ್ಲಿ ಹಾದುಹೋಗಲಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು ಮತ್ತು ಪಾಂಡಿಚೇರಿಯಲ್ಲಿ ಭಾರೀ ಮಳೆ ಸುರಿದಿದ್ದು, ಹಲವು ಪ್ರದೇಶ ಜಲಾವೃತವಾಗಿದೆ. ತಮಿಳುನಾಡಿನಲ್ಲಿ ದಾಖಲೆಯ 227 ಮಿ.ಮೀಟರ್ ಮಳೆಯಾಗಿದೆ. ನೆರೆಯ ಆಂಧ್ರಪ್ರದೇಶದಲ್ಲಿಯೂ ಭಾರೀ ಗಾಳಿ ಮಳೆಯಾಗಿದೆ ಎಂದು ವರದಿ ತಿಳಿಸಿದೆ.

ಪಾಂಡಿಚೇರಿಯಲ್ಲಿ ಕಳೆದ 20ಗಂಟೆಗಳಲ್ಲಿ 20 ಸೆಂಟಿ ಮೀಟರ್ ನಷ್ಟು ದಾಖಲೆಯ ಮಳೆ ಸುರಿದಿದ್ದು, ಹಲವು ಪ್ರದೇಶಗಳು ಜಲಾವೃತವಾಗಿದೆ. ನೂರಾರು ಮರಗಳು ಧರೆಗುರುಳಿದ್ದು, ಹಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯವಾಗಿರುವುದಾಗಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ತಿಳಿಸಿದ್ದಾರೆ.

ಇದನ್ನೂ ಓದಿ:ಕಾರ್ಮಿಕ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ; ಪಶ್ಚಿಮಬಂಗಾಳದಲ್ಲಿ ಬಂದ್ ಗೆ ವಿರೋಧ, ಘರ್ಷಣೆ

ನಿವಾರ್ ಚಂಡಮಾರುತದ ಪರಿಣಾಮ ಕರ್ನಾಟಕದಲ್ಲಿಯೂ ಬೀರಿದ್ದು, ಚಿಕ್ಕಬಳ್ಳಾಪುರದಲ್ಲಿ ಭಾರೀ ಮಳೆಯಾಗಿದೆ. ಬೆಂಗಳೂರು, ಕೋಲಾರ, ಚಿತ್ರದುರ್ಗ, ದಾವಣಗೆರೆಯಲ್ಲಿ ಮಳೆಯಾಗುವ ಸಾಧ್ಯತೆ ಇದ್ದಿರುವುದಾಗಿ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

Advertisement

ನಿವಾರ್ ಚಂಡಮಾರುತದ ಭೀತಿಯ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಸಾರ್ವತ್ರಿಕ ರಜೆ ಘೋಷಿಸಿದೆ. ಅಗತ್ಯವಸ್ತುಗಳ ಸೇವೆ ಮಾತ್ರ ಲಭ್ಯವಿರುವುದಾಗಿ ತಮಿಳುನಾಡು ಸರ್ಕಾರ ತಿಳಿಸಿದೆ. ಮುಂಜಾಗ್ರತಾ ಕ್ರಮವಾಗಿ ತಮಿಳುನಾಡು ಕರಾವಳಿ ಪ್ರದೇಶದಲ್ಲಿದ್ದ 1.25 ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಈವರೆಗೂ ಯಾವುದೇ ಸಾವು, ನೋವು ಪ್ರಕರಣದ ಬಗ್ಗೆ ವರದಿಯಾಗಿಲ್ಲ.

ಹವಾಮಾನ ಇಲಾಖೆಯ ಪ್ರಕಾರ, ನಿವಾರ್ ಚಂಡಮಾರುತ ಸಂಜೆಯ ವೇಳೆ ದುರ್ಬಲವಾಗುವ ಸಾಧ್ಯತೆ ಇದ್ದಿರುವುದಾಗಿ ತಿಳಿಸಿದೆ. ಶುಕ್ರವಾರದ 5.30ರ ಹೊತ್ತಿಗೆ ವಾಯುಭಾರ ಕುಸಿತದ ತೀವ್ರತೆ ಕೂಡಾ ಇಳಿಕೆಯಾಗಲಿದೆ ಎಂದು ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next