Advertisement

ಮಹಾ: ನಿಸರ್ಗ ನಿಟ್ಟುಸಿರು; ಮೂವರ ಸಾವು

01:11 AM Jun 04, 2020 | Sriram |

ಹೊಸದಿಲ್ಲಿ: “ಅಂಫಾನ್‌’ಚಂಡಮಾರುತದ ರೀತಿಯಲ್ಲೇ ಅಬ್ಬರಿಸುವ ಆತಂಕ ಹುಟ್ಟಿಸಿದ್ದ “ನಿಸರ್ಗ’ ಚಂಡಮಾರುತ ಮುಂಬಯಿಗರಿಗೆ ಕೊಂಚ ಸಮಾಧಾನ ತಂದಿದೆ.

Advertisement

ಮುಂಬಯಿಯಿಂದ ಸುಮಾರು 94 ಕಿ.ಮೀ. ದೂರದ ಅಲಿಭಾಗ್‌ ( ರಾಯಗಢ)ನಲ್ಲಿ ಮಧ್ಯಾಹ್ನ 12.30ರ ವೇಳೆಗೆ ಗಂಟೆಗೆ 110 ಕಿ.ಮೀ. ವೇಗದಲ್ಲಿ ಬಂದು ಅಪ್ಪಳಿಸಿದೆ. ಆದರೆ ಅಪರಾಹ್ನ 2.30ರ ವೇಳೆಗೆ ಚಂಡಮಾರುತ ಪ್ರಭಾವ ಇಳಿಯಿತು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮೊದಲೇ ಕೋವಿಡ್-19 ಭೀತಿಯಲ್ಲಿದ್ದ ಮುಂಬಯಿಗೆ “ನಿಸರ್ಗ’ಭಾರೀ ಭೀತಿ ಸೃಷ್ಟಿಸಿತ್ತು. ಬುಧವ ರದ ಚಂಡಮಾರುತ ಭಾರೀ ಮಳೆ ಮತ್ತು ಗಾಳಿಗೆ ಸಾಕ್ಷಿಯಾ ಯಿತು.ಪುಣೆಯಲ್ಲಿ ಇಬ್ಬರು,ರಾಯಭಾಗ್‌ನಲ್ಲಿ ಓರ್ವ ಸಾವನ್ನಪ್ಪಿದ್ದಾರೆ. ಗುಜರಾತ್‌ನಲ್ಲೂ ಹೆಚ್ಚಿನ ಪ್ರಮಾಣದ ಹಾನಿಯಾಗಿಲ್ಲ.

ಧರೆಗುರುಳಿದ ಮರ,ವಿದ್ಯುತ್‌ ಕಂಬ
ರಾಯ್‌ಭಾಗ್‌ ಭಾಗದಲ್ಲಿ ಸುಮಾರು 100 ಬೃಹತ್‌ ಗಾತ್ರದ ಮರಗಳು ಧರೆಗುರುಳಿವೆ. ಕೆಲವು ಮರಗಳು,ವಿದ್ಯುತ್‌ ಕಂಬಗಳು ಮನೆಗಳ ಮೇಲೆ ಬಿದ್ದಿವೆ.ಹಲವು ಕಡೆ ಮೇಲ್ಛಾವಣಿಗಳು ಹಾರಿ ಹೋಗಿವೆ.ಸಹಸ್ರಾರು ಮನೆಗಳ ವಿದ್ಯುತ್‌ ಸಂಪರ್ಕ ಕಡಿತವಾಗಿದೆ.

ಗಾಳಿಯ ರಭಸಕ್ಕೆ ಮುಂಬಯಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮರಗಳು,ಕಂಬಗಳು ಬಿದ್ದ ಪರಿ ಣಾಮ ವಾಹನಗಳು, ಮನೆಗಳು ಜಖಂಗೊಂಡಿವೆ. ಮುಂಬಯಿಯ ಸಾಂತಾಕ್ರೂಸ್‌ನಲ್ಲಿ ಸಿಮೆಂಟ್‌ ಇಟ್ಟಿಗೆ ಬಿದ್ದು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಚಂಡಮಾರುತದ ಪ್ರಭಾವದಿಂದ ಮುಂಬಯಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಜೆ 7ರ ವರೆಗೆ ವಿಮಾನ ಟೇಕಾಫ್, ಲ್ಯಾಂಡಿಂಗ್‌ ಸ್ಥಗಿತಗೊಳಿಸಲಾಗಿತ್ತು. ಬಳಿಕ ವಿಮಾನ ಸಂಚಾರ ಪುನರಾರಂಭಿಸಲಾಯಿತು.

Advertisement

ಮುಂಬಯಿಯ ಬೈಖುಲಾ ಮೃಗಾಲಯದಲ್ಲಿನ ಹುಲಿ, ಚಿರತೆ ಮತ್ತಿತರ ವನ್ಯ ಜೀವಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಮೃಗಾಲಯದ ಸರೀಸೃಪ ಸೇರಿದಂತೆ 300 ಪ್ರಾಣಿಗಳನ್ನು ಹೊಲ್ಡಿಂಗ್‌ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.

ಲಕ್ಷ ಮಂದಿ ಸ್ಥಳಾಂತರ
ಮುನ್ನೆಚ್ಚರಿಕೆ ಕ್ರಮವಾಗಿ ಮಹಾರಾಷ್ಟ್ರ ಕರಾವಳಿ ತೀರದ 40 ಸಾವಿರ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿತ್ತು. ಇದೇ ರೀತಿ ಗುಜರಾತ್‌ನಲ್ಲಿ 50 ಸಾವಿರ ಮಂದಿ ಹಾಗೂ ಕೇಂದ್ರಾಡಳಿತ ಪ್ರದೇಶ ದಮನ್‌ನಿಂದ 4 ಸಾವಿರ ಮಂದಿಯನ್ನು ಸ್ಥಳಾಂತರ ಮಾಡಲಾಗಿತ್ತು.

ರಕ್ಷಣಾ ಕಾರ್ಯಾಚರಣೆ
ಮುಂಬಯಿ ಸಹಿತ ಹಲವು ಜಿಲ್ಲೆಗಳಲ್ಲಿ ಮರಗಳು, ವಿದ್ಯುತ್‌ ಕಂಬಗಳು ಬಿದ್ದ ಪರಿಣಾಮ ರಸ್ತೆ ಸಂಪರ್ಕ ಕಡಿತವಾಗಿತ್ತು. ಮಹಾರಾಷ್ಟ್ರದಲ್ಲಿ 21 ಎನ್‌ಡಿಆರ್‌ಎಫ್ ತಂಡಗಳು ಹಾಗೂ ರಾಜ್ಯ ತಂಡಗಳು ಬಿರುಸಿನಿಂದ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿವೆ. ಗುಜರಾತ್‌ನಲ್ಲಿ 16 ಎನ್‌ಡಿಆರ್‌ಎಫ್ ತಂಡಗಳು ಪರಿಹಾರ ಕಾರ್ಯದಲ್ಲಿ ನಿರತವಾಗಿವೆ.

ಇಂದೂ ಭಾರೀ ಮಳೆ ಸಾಧ್ಯತೆ
ಚಂಡಮಾರುತದಿಂದ ಮಹಾರಾಷ್ಟ್ರ ಕರಾವಳಿ ಪ್ರದೇಶ, ವಾಣಿಜ್ಯ ನಗರಿ ಮುಂಬಯಿ ಹಾಗೂ ಉಪ ನಗರಗಳು, ಥಾಣೆ, ಪಾಲ^ರ್‌, ರಾಯಗಢ, ಸಿಂಧುದುರ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಗುರುವಾರ ಕೂಡ ಈ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ. ಅಲ್ಲದೆ ದಕ್ಷಿಣ ಗುಜರಾತ್‌, ಕರ್ನಾಟಕ, ಕೇರಳ, ಕೊಂಕಣ, ಗೋವಾ, ಮಧ್ಯಪ್ರದೇಶದ ವಿವಿಧ ಭಾಗಗಳಲ್ಲಿ ಮಳೆಯಾಗಿದೆ. ಈ ನಡುವೆ ಕರ್ನಾಟಕದ ದಕ್ಷಿಣ ಒಳನಾಡು ಹಾಗೂ ಕರಾವಳಿಯಲ್ಲೂ ಗುರುವಾರ ಮಳೆಯಾಗುವ ಸಾಧ್ಯತೆ ಇದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next