ಭುವನೇಶ್ವರ : ಭಾರೀ ವಿನಾಶಕಾರಿ ಫೋನಿ ಚಂಡಮಾರುತ ಒಡಿಶಾ ಕರಾವಳಿಗೆ ನಿಕಟವಾಗುತ್ತಿರುವಂತೆಯೇ ಅದರಿಂದ ಬಾಧಿತವಾಗಲಿರುವ ಕೆಳ ಮಟ್ಟದ ಪ್ರದೇಶಗಳ ಸುಮಾರು 8 ಲಕ್ಷ ಜನರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸುವ ಕಾರ್ಯ ಇದೀಗ ಸಮರೋಪಾದಿಯಲ್ಲಿ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆಯ ತಾಜಾ ಬುಲೆಟಿಟನ್ ಪ್ರಕಾರ ಫೋನಿ ಚಂಡಮಾರುತವು ಪ್ರಕೃತ ಬಂಗಾಲ ಕೊಲ್ಲಿಯ ಪಶ್ಚಿಮ ಮಧ್ಯದಲ್ಲಿ, ಒಡಿಶಾದ ಪುರಿಯಿಂದ ಸುಮಾರು 430 ನೈಋತ್ಯದಲ್ಲಿ, ಆಂಧ್ರ ಪ್ರದೇಶದ ವಿಶಾಖಪಟ್ಟಣದಿಂದ ಸುಮಾರು 225 ಕಿ.ಮೀ. ಆಗ್ನೇಯದಲ್ಲಿ ಮತ್ತು ಪಶ್ಚಿಮ ಬಂಗಾಲದ ದಿಘಾ ದಿಂದ ಸುಮಾರು 650 ಕಿ.ಮೀ. ನೈಋತ್ಯದಲ್ಲಿ ಇದೆ.
ಮೇ 3ರಂದು ಶುಕ್ರವಾರ ಫೋನಿ ಚಂಡಮಾರುತ ಒಡಿಶಾ ಕರಾವಳಿಯ ಪುರಿ ಸಮೀಪ ಭೂಮಿಗೆ ಅಪ್ಪಳಿಸುವ ನಿರೀಕ್ಷೆ ಇದೆ. ಚಂಡಮಾರುತದ ಅಂದಾಜು ವೇಗವು ಗಂಟೆಗೆ 170ರಿಂದ 180 ಕಿ.ಮೀ. ಇದ್ದು ತೀವ್ರ ಮಟ್ಟದಲ್ಲಿ ಇದು 200 ಕಿ.ಮೀ. ವೇಗವನ್ನು ಪಡೆದುಕೊಳ್ಳಲಿದೆ ಎಂದು ವಿಶೇಷ ಪರಿಹಾರ ಆಯುಕ್ತ ಬಿ ಪಿ ಸೇಥಿ ತಿಳಿಸಿದ್ದಾರೆ.
ಫೋನಿ ಚಂಡಮಾರುತದ ಬೀಸು ಪಥದ ವಿಚಕ್ಷಣೆಯನ್ನು ಚೆನ್ನೈ, ವಿಶಾಖಪಟ್ಟಣ ಮತ್ತು ಮಚಲೀಪಟ್ಟಣದಲ್ಲಿನ ಡೋಪ್ಲರ್ ಹವಾಮಾನ ರೇಡಾರ್‌ಗಳು ಮಾಡುತ್ತಿವೆ ಎಂದವರು ಹೇಳಿದರು.
ಚಂಡಮಾರುತದಿಂದ ಬಾಧಿತರಾಗುವ ಜನರನ್ನು 880 ಸೈಕ್ಲೋನ್ ಸೆಂಟರ್‌ಗಳು, ಶಾಲೆಗಳು ಮತ್ತು ಕಾಲೇಜು ಕಟ್ಟಡಗಳು ಹಾಗೂ ಇತರ ಕಟ್ಟಡಗಳಿಗೆ ಸ್ಥಳಾಂತರಿಸಲಾಗುತ್ತಿದೆ ಎಂದವರು ಹೇಳಿದರು.