Advertisement

ಅಸಾನಿ ಚಂಡಮಾರುತ: ವಿವಿಧೆಡೆ ಉತ್ತಮ ಮಳೆ

10:34 AM May 12, 2022 | Team Udayavani |

ಕುಂದಾಪುರ: ನಗರದಲ್ಲಿ ಬುಧವಾರ ದಿನವಿಡೀ ಸುರಿದ ಭಾರೀ ಮಳೆ ಯಿಂದಾಗಿ ಹಲವೆಡೆ ಕೃತಕ ನೆರೆ ಉಂಟಾಗಿತ್ತು. ರಸ್ತೆಗಳು ಜಲಾವೃತಗೊಂಡು ಸಂಚಾರಕ್ಕೆ ತೊಂದರೆಯಾಯಿತು.

Advertisement

ಎಲ್ಲೆಲ್ಲಿ

ಮಳೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಕಲ್ಪಿಸದ ಕಾರಣ ರಾಷ್ಟ್ರೀಯ ಹೆದ್ದಾರಿ 66ರ ಕುಂದಾಪುರ -ಬಸ್ರೂರು- ಮೂರುಕೈ ಬಳಿಯ ಸರ್ವಿಸ್‌ ರಸ್ತೆ ತೋಡಿನಂತಾಗಿ ಕೃತಕ ನೆರೆ ಸೃಷ್ಟಿಯಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ರಾಷ್ಟ್ರೀಯ ಹೆದ್ದಾರಿ 66 ರ ಬಸ್ರೂರು ಮೂರು ಕೈ ಅಂಡರ್‌ಪಾಸ್‌, ಸಬ್‌ಸ್ಟೇಶನ್‌ ಬಳಿ, ಕೆಎಸ್‌ಆರ್‌ ಟಿಸಿ ಡಿಪೊ ಬಳಿ, ಟಿಟಿ ರಸ್ತೆ ಕಡೆಗೆ ಸಂಚರಿಸುವ ಅಂಡರ್‌ಪಾಸ್‌, ವಿನಾಯಕ -ಕೋಡಿ ಜಂಕ್ಷನ್‌, ಸಹನಾ ಹಾಲ್‌ವರೆಗೆ ಮಳೆ ನೀರು ರಸ್ತೆಯಲ್ಲಿಯೇ ನಿಂತು ಕೆರೆಯಂತಾಗಿತ್ತು. ಕೃತಕ ನೆರೆ ಸೃಷ್ಟಿಯಾಗಿ ರಿಕ್ಷಾ ಚಾಲಕರು, ಸ್ಥಳೀಯ ಅಂಗಡಿ ಮಾಲಕರು, ವಾಹನ ಚಾಲಕರು ಹೆದ್ದಾರಿಯ ಅವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಂಕಷ್ಟ

ನಿರಂತರವಾಗಿ ಸುರಿದ ಮಳೆಯಿಂದಾಗಿ ಸರ್ವಿಸ್‌ ರಸ್ತೆಯಲ್ಲಿ ನೀರು ಹರಿದು ಸರಾಗವಾಗಿ ಚರಂಡಿ ಸೇರಲು ಸಾಧ್ಯವಾಗದೇ ಬೆಳಗ್ಗೆಯಿಂದಲೇ ಸರ್ವಿಸ್‌ ರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಬಸ್‌, ಇತರೆ ವಾಹನಗಳಲ್ಲಿ ಕೆಲಸಕ್ಕೆ ಹೋಗುವವರು ಇದರಿಂದ ಸಂಕಷ್ಟ ಅನುಭವಿಸುವಂತಾಯಿತು.

Advertisement

ಹಿಂದೊಮ್ಮೆ

ಎರಡು ವರ್ಷಗಳ ಹಿಂದೆ ಸರ್ವಿಸ್‌ ರಸ್ತೆಯೇ ಹೆದ್ದಾರಿಯಾಗಿತ್ತು. ಫ್ಲೈಓವರ್‌ ಕಾಮಗಾರಿ ಕುಂಟುತ್ತಾ ಸಾಗಿತ್ತು. 2020 ಆ. 8ರಂದು ಇದೇ ರೀತಿ ಅವ್ಯವಸ್ಥೆಯಾಗಿದ್ದಾಗ ಹೆದ್ದಾರಿ ಹೋರಾಟ ಸಮಿತಿ ಹಾಗೂ ಊರವರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಕಾರು ಅಡ್ಡಗಟ್ಟಿ ಅವರು ಜಿಲ್ಲಾಧಿಕಾರಿಗೆ ದುರಸ್ತಿಗೆ ಸೂಚಿಸಿದ ಪ್ರಸಂಗ ನಡೆದಿತ್ತು.

ಅದಾದ ಬಳಿಕ ಆ.11ರಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರು ಖುದ್ದು ನಾಲ್ಕು ಗಂಟೆಗಳ ಕಾಲ ರಸ್ತೆಬದಿಯಲ್ಲೇ ನಿಂತು ಕೆಲಸ ಮಾಡಿಸಿ ಸಮಸ್ಯೆಗಳನ್ನು ಸರಿಪಡಿಸಿದ್ದರು. ರಸ್ತೆಯಿಂದ ನೀರು ಹರಿದುಹೋಗಲು ಚರಂಡಿಗಳಿಗೆ ಸಂಪರ್ಕ ಕಲ್ಪಿಸಲಾಗಿತ್ತು.

ಮತ್ತೆ ಸಮಸ್ಯೆ

ಹೆದ್ದಾರಿ ಕಾಮಗಾರಿ ಪೂರ್ಣಗೊಂಡು ಸರ್ವಿಸ್‌ ರಸ್ತೆಯಾಗಿ ಪೂರ್ಣಪ್ರಮಾಣದಲ್ಲಿ ಕಳೆದ ವರ್ಷದಿಂದ ಬಳಕೆಯಾಗುತ್ತಿದ್ದು ಈಗ ಮತ್ತೆ ಸಮಸ್ಯೆ ಉದ್ಭವವಾಗಿದೆ. ಸಹಾಯಕ ಕಮಿಷನರ್‌ ಕೆ. ರಾಜು ಅವರು ಅನೇಕ ಬಾರಿ ರಾಷ್ಟ್ರೀಯ ಹೆದ್ದಾರಿ ಎಂಜಿನಿಯರ್‌, ಗುತ್ತಿಗೆದಾರರ ಬಳಿ ಸರ್ವಿಸ್‌ ರಸ್ತೆಯ ಚರಂಡಿ ಸಮಸ್ಯೆ ಸರಿಪಡಿಸುವಂತೆ ಮೀಟಿಂಗ್‌ನಲ್ಲೇ ಸೂಚಿಸಿದ್ದಾರೆ. ಈವರೆಗೂ ಸರಿಪಡಿಸಿಲ್ಲ. ಪುರಸಭೆಯಲ್ಲೂ ಅನೇಕ ಬಾರಿ ಈ ಬಗ್ಗೆ ಚರ್ಚೆಯಾಗಿದೆ. ಯಾವುದೇ ಪರಿಹಾರ ದೊರೆಯಲಿಲ್ಲ. ಇನ್ನೇನು ಚಂಡಮಾರುತದ ಎಲ್ಲ ಲಕ್ಷಣಗಳೂ ಮುಗಿದು ಪೂರ್ಣಾವಧಿ ಮಳೆಗಾಲ ಆಗಮಿಸಲು ಹೆಚ್ಚು ದಿನಗಳಿಲ್ಲ. ಸರ್ವಿಸ್‌ ರಸ್ತೆಯ ಚರಂಡಿ ಸಮಸ್ಯೆ ಹಾಗೆಯೇ ಮುಂದುವರಿದರೆ ಮಳೆಗಾಲದ ಅಷ್ಟೂ ದಿನ ತೊಂದರೆ ತಪ್ಪಿದ್ದಲ್ಲ. ಇದೊಂದು ಎಚ್ಚರಿಕೆಯಂತೆ ಈ ದಿನ ರಸ್ತೆ ಹೊಳೆಯಾಗುವ ಮೂಲಕ ಸೂಚನೆ ನೀಡಿದಂತಾಗಿದೆ.

ಕಡಲಬ್ಬರವೂ ಬಿರುಸು

‘ಅಸಾನಿ’ ಚಂಡಮಾರುತದಿಂದಾಗಿ ಎಲ್ಲ ಕಡೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಇದರಿಂದಾಗಿ ಕಡಲ ಅಲೆಗಳ ಅಬ್ಬರವೂ ಜೋರಾಗಿತ್ತು. ಕಡಲಬ್ಬರ ಜೋರಿರುವುದರಿಂದ ಕೋಡಿ, ಬೀಜಾಡಿ, ಗಂಗೊಳ್ಳಿ, ಮರವಂತೆ, ಸೋಮೇಶ್ವರ ಸಹಿತ ಎಲ್ಲ ಕಡೆಗಳ ಬೀಚ್‌ಗಳಲ್ಲಿಯೂ ಪ್ರವಾಸಿಗರು ನೀರಿಗೆ ಇಳಿಯದಂತೆ ಎಚ್ಚರ ವಹಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next