Advertisement

ತೌಕ್ತೆ ಅಬ್ಬರ: ಕರಾವಳಿ ಸಿದ್ಧ : ಕೇರಳ ಸಹಿತ ಹಲವೆಡೆ ಮಳೆ ಆರಂಭ

03:51 AM May 15, 2021 | Team Udayavani |

ಮಂಗಳೂರು : ಅರಬಿ ಸಮುದ್ರದಲ್ಲಿ ಲಕ್ಷದ್ವೀಪದ ಬಳಿ ಉಂಟಾಗಿರುವ ವಾಯುಭಾರ ಕುಸಿತವು ಮುಂದಿನ ಒಂದೆರಡು ದಿನಗಳಲ್ಲಿ ಬಲಗೊಂಡು ತೌಕ್ತೆ ಚಂಡಮಾರುತವಾಗಲಿದೆ. ಇದು ಸಮುದ್ರದಲ್ಲಿಯೇ ಉತ್ತರಾಭಿಮುಖವಾಗಿ ಸಾಗಿ ಗುಜರಾತ್‌ ಕರಾವಳಿಗೆ ಅಪ್ಪಳಿಸಲಿದೆ. ಚಂಡಮಾರುತ ರಾಜ್ಯದ ಕರಾವಳಿಗೆ ಅಪ್ಪಳಿಸದೆ ಇದ್ದರೂ ಅದರ ಪರಿಣಾಮವಾಗಿ ಶನಿವಾರದಿಂದ ಕರಾವಳಿ, ದಕ್ಷಿಣ ಒಳನಾಡುಗಳಲ್ಲಿ ಬಿರುಸಾದ ಗಾಳಿ ಸಹಿತ ಭಾರೀ ಮಳೆ ಸುರಿಯಲಿದ್ದು, ಅಗತ್ಯ ಮುಂಜಾಗ್ರತೆ ಕೈಗೊಳ್ಳಲಾಗಿದೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶನಿವಾರ “ರೆಡ್‌ ಅಲರ್ಟ್‌’ ಘೋಷಿಸಿದ್ದು, ಕರಾವಳಿ ಭಾಗದಲ್ಲಿ 20 ಸೆಂ.ಮೀ.ಗಿಂತ ಅಧಿಕ ಮಳೆ ಸುರಿಯಬಹುದು ಎಂದಿದೆ. ಮೇ 16 ಮತ್ತು 17ರಂದು ಆರೆಂಜ್‌ ಅಲರ್ಟ್‌, ಮೇ 18ರಂದು ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಸಮುದ್ರ ಪ್ರಕ್ಷುಬ್ಧವಾಗಿರಲಿದ್ದು, ಮೀನು ಗಾರರು ಕಡಲಿಗಿಳಿಯದಂತೆ ಎಚ್ಚರಿಕೆ ನೀಡಲಾಗಿದೆ.

Advertisement

ಕಡಲ್ಕೊರೆತ ತೀವ್ರ
ವಾಯುಭಾರ ಕುಸಿತದ ಪರಿಣಾಮವಾಗಿ ಶುಕ್ರವಾರವೇ ಕಡಲು ಪ್ರಕ್ಷುಬ್ಧಗೊಂಡಿದೆ. ಕರ್ನಾಟಕ ಕರಾವಳಿಯಲ್ಲಿ ಭಾರೀ ಅಲೆಗಳು ಕಿನಾರೆಗೆ ಅಪ್ಪಳಿಸುತ್ತಿವೆ. ಸುರತ್ಕಲ್‌, ಉಳ್ಳಾಲದ ಸೋಮೇಶ್ವರ, ತಣ್ಣೀರುಬಾವಿ, ಪಣಂಬೂರು, ಮಲ್ಪೆ, ಕುಂದಾಪುರ, ಬೈಂದೂರು ಮತ್ತು ಉತ್ತರ ಕನ್ನಡ ದಲ್ಲಿಯೂ ಕಿನಾರೆಗಳಿಗೆ ದೈತ್ಯ ಅಲೆ ಗಳು ಅಪ್ಪಳಿಸಲಾರಂಭಿಸಿದೆ. ಹಲವೆಡೆ ಕಡಲ್ಕೊರೆತ ತೀವ್ರವಾಗಿದೆ. ಬೀಚ್‌ ಪ್ರವೇಶಕ್ಕೆ ಸಾರ್ವಜನಿಕರಿಗೆ ನಿರ್ಬಂಧ ಇದ್ದು, ಮುನ್ನೆಚ್ಚರಿಕೆ ವಹಿಸಲಾಗಿದೆ. ಮಂಗಳೂರಿಗೆ ಎನ್‌ಡಿಆರ್‌ಎಫ್ ತಂಡ ಆಗಮಿಸಿದೆ.

ಕಂಟ್ರೋಲ್‌ ರೂಂ ಆರಂಭ
ಮುನ್ನೆಚ್ಚರಿಕೆಯಿಂದ ದಕ್ಷಿಣ ಕನ್ನಡ, ಉಡುಪಿ ಜಿಲ್ಲಾಡಳಿತಗಳು ಕಂಟ್ರೋಲ್‌ ರೂಂ. ತೆರೆದಿವೆ. ಪ್ರಾಕೃತಿಕ ವಿಕೋಪ ಸಂಬಂಧಿ ಯಾವುದೇ ಸಮಸ್ಯೆಗಳ ತುರ್ತುಸೇವೆಗೆ ಈ ದೂರವಾಣಿಗಳನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಡಳಿತಗಳು ತಿಳಿಸಿವೆ.

ದ.ಕ. : 1077, 9483908000
ಉಡುಪಿ : 1077, 0820 257480

ಯಾವಾಗ, ಎಷ್ಟು ವೇಗ?
ಮೇ 15ರಂದು ಬೆಳಗ್ಗೆ 6ಕ್ಕೆ ಚಂಡ ಮಾರುತ ತಾಸಿಗೆ 80-90ರಿಂದ 100 ಕಿ.ಮೀ. ವೇಗ ಇರುವ ಸಾಧ್ಯತೆ ಇದೆ. ಸಂಜೆ 6ರ ವೇಳೆಗೆ 105-135ರಿಂದ 150 ಕಿ.ಮೀ. ಹೊಂದಿರಲಿದೆ. ಮೇ 16ರ ಬೆಳಗ್ಗೆ 125-135ರಿಂದ 150 ಕಿ.ಮೀ. ವೇಗದಲ್ಲಿ ಬೀಸಲಿದ್ದು, ಮತ್ತಷ್ಟು ಪ್ರಬಲವಾಗಲಿದೆ. ಸಂಜೆ 135-145ರಿಂದ 160 ಕಿ.ಮೀ. ಮತ್ತು ಮೇ 17ರಂದು ಬೆಳಗ್ಗೆ 6 ಗಂಟೆಗೆ 150-160ರಿಂದ 175 ಕಿ.ಮೀ. ವೇಗ ಪಡೆದು ಸೂಪರ್‌ ಸೈಕ್ಲೋನ್‌ ಆಗುವ ಸಾಧ್ಯತೆ ಇದೆ ಎಂದು ಐಎಂಡಿ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next