ಗದಗ: ರಾಜ್ಯದಲ್ಲಿ ಮೊದಲ ಬಾರಿಗೆ ರಾಷ್ಟ್ರ ಮಟ್ಟದ ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್‌ಶಿಪ್ ಸ್ಪರ್ಧೆ ನಡೆಯುತ್ತಿದೆ. ಸ್ಪರ್ಧೆ ಆತಿಥ್ಯ ವಹಿಸಿಕೊಳ್ಳುವುದರೊಂದಿಗೆ ಬಿಂಕದಕಟ್ಟಿಯ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ನಿರ್ಮಾಣ ಗೊಂಡಿರುವ ರಾಷ್ಟ್ರೀಯ ಮಟ್ಟದ ಎಂಟಿಬಿ ಟ್ರ್ಯಾಕ್ ಹೊಂದಿರುವ ರಾಜ್ಯದ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆಗೂ ಗದಗ ಪಾತ್ರವಾಗಲಿದೆ.
ಫೆ.18ರಿಂದ 21ರವರೆಗೆ ತಾಲೂಕಿನ ಬಿಂಕದಕಟ್ಟಿಯ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ 17ನೇ ರಾಷ್ಟ್ರೀಯ ಸೀನಿಯರ್, ಜ್ಯೂನಿಯರ್ ಮತ್ತು ಸಬ್ ಜ್ಯೂನಿಯರ್ ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್‌ಶಿಪ್ ಸ್ಪರ್ಧೆ ಆಯೋಜಿಸಿದೆ. ಅದಕ್ಕಾಗಿ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಮಧ್ಯಪ್ರದೇಶ, ಸಿಕ್ಕಿಂ, ಮಿಜೋರಾಂ, ಕೇರಳ ಸೇರಿದಂತೆ ದೇಶದ ವಿವಿಧೆಡೆಯಿಂದ ಸುಮಾರು 600 ಸ್ಪ ರ್ಧಿಗಳು ಆಗಮಿಸುತ್ತಿದ್ದಾರೆ. ಆ ಪೈಕಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಅನೇಕ ಸೈಕ್ಲಿಸ್ಟ್‌ಗಳು ಆಗಮಿಸಲಿದ್ದಾರೆ ಎನ್ನಲಾಗಿದೆ.
ಎಂಟಿಬಿ ಸೈಕ್ಲಿಂಗ್ ವಿಶೇಷತೆ ಏನು?: ಇಂಡಿಯನ್ ಒಲಿಂಪಿಕ್ ಅಥ್ಲೆಟಿಕ್ ಅಸೋಸಿಯೇಷನ್ ಪ್ರಕಾರ ಸೈಕಿಂಗ್‌ನಲ್ಲಿ ಮೂರು ವಿಧಗಳಿವೆ. ಆ ಪೈಕಿ ಕ್ರೀಡಾಂಗಣದ ಟ್ರ್ಯಾಕ್ ಸೈಕ್ಲಿಂಗ್, ರೋಡ್ ಹಾಗೂ ಮೌಂಟೇನ್ ಬೈಕ್ (ಗುಡ್ಡಗಾಡು ಪ್ರದೇಶ) ಸೈಕ್ಲಿಂಗ್. ಈವರೆಗೆ ರಾಜ್ಯದಲ್ಲಿ ಐದಾರು ಬಾರಿ ರಾಷ್ಟ್ರೀಯ ಮಟ್ಟದ ರೋಡ್ ಸೈಕ್ಲಿಂಗ್ ಹಾಗೂ ಹಲವೆಡೆ ರಾಜ್ಯ ಮಟ್ಟದ ಮೌಂಟೇನ್ ಸೈಕ್ಲಿಂಗ್ ಸ್ಪರ್ಧೆ ಯಶಸ್ವಿಯಾಗಿ ಸಂಘಟಿಸಲಾಗಿದೆ. ಆದರೆ, ರಾಜ್ಯದಲ್ಲಿ ಸುಸಜ್ಜಿತ ಹಾಗೂ ನೈಸರ್ಗಿಕ ಬೆಟ್ಟಗುಡ್ಡಗಳು ಪತ್ತೆಯಾಗಿಲ್ಲ. ಆದರೆ, ಕಪ್ಪತ್ತಗುಡ್ಡದ ಭಾಗವಾಗಿರುವ ಬಿಂಕದಕಟ್ಟಿಯ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ ಎಂಟಿಬಿ ಸ್ಪರ್ಧೆಗೆ ಹೇಳಿ ಮಾಡಿಸಿದಂತಿದೆ ಎನ್ನುತ್ತಾರೆ ಜಿಲ್ಲಾ ಸೈಕ್ಲಿಂಗ್ ಫೆಡರೇಷನ್ ಕಾರ್ಯದರ್ಶಿ ಎಂ.ಐ. ಕಣಕಿ.
ಸಸ್ಯೋದ್ಯಾನದಲ್ಲಿ ಸ್ಪರ್ಧೆ ಆರಂಭಿಕ ಹಾಗೂ ಮುಕ್ತಾಯದ ಪಾಯಿಂಟ್ ಹೊರತುಪಡಿಸಿ ಇನ್ನುಳಿದಂತೆ ಎಲ್ಲೆಡೆ ಒಟ್ಟೊಟ್ಟಿಗೆ ಕೇವಲ ಎರಡೇ ಸೈಕಲ್‌ಗಳು ಚಲಿಸುವಂತೆ ಟ್ರ್ಯಾಕ್ ಮಾಡಲಾಗಿದೆ. ಟ್ರ್ಯಾಕ್ ಸಂಪೂರ್ಣ ಕಾಲುದಾರಿಯಂತಿದ್ದು, ಟ್ರ್ಯಾಕ್ಗೆ ಹೊಂದಿಕೊಂಡಿದ್ದ ಜಾಲಿ ಕಂಟಿ ಮಾತ್ರ ತೆರವುಗೊಳಿಸಲಾಗಿದೆ.
ಇದನ್ನೂ ಓದಿ :ರೋಣ; ಚೈತನ್ಯ ರಥಯಾತ್ರೆಗೆ ಅದ್ಧೂರಿ ಸ್ವಾಗತ
ಅರಣ್ಯದಲ್ಲಿ ಯಾವುದೇ ಮರಕ್ಕೆ ಧಕ್ಕೆಯಾಗದಂತೆ ಅಚ್ಚುಕಟ್ಟಾಗಿ ಟ್ರ್ಯಾಕ್ ಗುರುತು ಮಾಡಲಾಗಿದೆ. ಹಚ್ಚಹಸಿರಿನಿಂದ ಕೂಡಿರುವ ಉದ್ಯಾನದಲ್ಲಿ ಒಟ್ಟು 5 ಕಿ.ಮೀ. ಉದ್ದದ ಸೈಕಲ್ ಟ್ರ್ಯಾಕ್ ನಿರ್ಮಿಸಲಾಗಿದೆ. ಹತ್ತಾರು ಕಡೆ ಬೃಹತ್ ತಗ್ಗು, ದಿನ್ನೆಗಳಿಂದ ಕೂಡಿದೆ. ಬೆಟ್ಟದ ಇಳಿಜಾರಿನೊಂದಿಗೆ ಭೂ ಪ್ರದೇಶದ ಏರಿಳಿತಗಳು ಸೈಕ್ಲಿಸ್ಟ್‌ಗಳನ್ನು ರೋಮಾಂಚನಗೊಳಿಸುತ್ತದೆ. ಕಡಿದಾದ ಮತ್ತು ಎದುಸಿರಿನೊಂದಿಗೆ ದಿನ್ನೆಗಳಿಂದ ಮೇಲೆ ಬರುವ ಸೈಕ್ಲಿಸ್ಟ್‌ಗಳ ಸಾಹಸ ಬೆರಗು ಮೂಡಿಸುತ್ತದೆ. ಕೆಲವೆಡೆ ಸುಮಾರು 40 ಕಿ.ಮೀ. ಶರವೇಗದಲ್ಲಿ ಸೈಕಲ್‌ಗಳು ನೋಡುಗರ ಮೈನವಿರೇಳಿಸುತ್ತದೆ. ಜೊತೆಗೆ ಮೌಂಟೇನ್ ಟ್ರ್ಯಾಕ್ ಬೈಕ್ ಸೈಕ್ಲಿಂಗ್ ಸ್ಪರ್ಧೆಗೆ ಅವಕಾಶ ಕಲ್ಪಿಸುವ ಮೂಲಕ ಅರಣ್ಯ ಇಲಾಖೆ ಪರಿಸರ ಸಂರಕ್ಷಣೆ ಸಂದೇಶ ಸಾರುತ್ತಿದೆ.