ಬೆಂಗಳೂರು: ವಿಶ್ವದಾಖಲೆ ಸಾಧಿಸುವ ಗುರಿ ಹಾಗೂ ಅಭಿಲಾಷೆಯೊಂದಿಗೆ ಬೆಂಗಳೂರು ಮೂಲದ ಯುವಕರಿಬ್ಬರು ದೇಶದ ಉದ್ದಗಲಕ್ಕೂ ಸೈಕಲ್‌ನಲ್ಲಿ ಸಂಚ ರಿಸುವ ಮಹತ್ವದ ಸಾಹಸ ಕೈಗೊಂಡಿದ್ದಾರೆ.
ಧನುಷ್.ಎಂ ಮತ್ತು ಹೇಮಂತ್ ವೈ.ಬಿ. ಕಾಡುಗೋಡಿ ಹಾಗೂ ಹೊಸ ಕೋಟೆ ಮೂಲದ ಯುವ ಸಾಹಸಿಗರು. ಜು. 11ರಂದು ಬೆಂಗಳೂರಿನಲ್ಲಿ ವಿಧಾನಸೌಧದಿಂದ ಪ್ರಯಾಣ ಆರಂಭಿಸಿದ ಧನುಷ್ ಮತ್ತು ಹೇಮಂತ್ ಅ. 3ರಂದು 8,200ಕಿ.ಮೀ. ಸಂಚರಿಸುವ ಮೂಲಕ ನವದೆಹಲಿ ತಲುಪಿದ್ದು, ಬೆಂಗಳೂರು ದಕ್ಷಿಣ ಲೋಕಸಭಾ ಸಂಸದ ತೇಜಸ್ವಿ ಸೂರ್ಯ ಅವರನ್ನು ಭೇಟಿ ಮಾಡಿದರು.
ಇದನ್ನೂ ಓದಿ;–
ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ನೆರವು
7 ತಿಂಗಳಲ್ಲಿ 29 ರಾಜ್ಯಗಳು ಹಾಗೂ ಮೂರು ಕೇಂದ್ರಾಡಳಿತ ಪ್ರದೇಶಗಳನ್ನು ಸೈಕ್ಲಿಂಗ್ ಮೂಲಕ ಕ್ರಮಿಸುವ ಗುರಿ ಹೊಂದಿರುವ ಉತ್ಸಾಹಿ ಯುವಕರನ್ನು ಸಂಸದ ತೇಜಸ್ವಿ ಸೂರ್ಯ ಅಭಿನಂದಿಸಿದರು. ಭಾರತದ ರಸ್ತೆಗಳಲ್ಲಿ ಸೈಕಲ್‌ನಲ್ಲಿ ಸುದೀರ್ಘ ಪ್ರಯಾಣ ಮಾಡಿ ದಾಖಲೆ ನಿರ್ಮಿಸುವುದು ಮಾತ್ರವಲ್ಲದೆ ಈ ಪ್ರಯಾಣದ ಹಾದಿಯುದ್ದಕ್ಕೂ ಭೇಟಿಯಾಗುವ ಸ್ಥಳೀಯರು ಹಾಗೂ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಜಾಗತಿಕ ತಾಪಮಾನದ ದುಷ್ಪರಿಣಾಮ ಮತ್ತು ಅದನ್ನು ನಿಯಂತ್ರಿಸುವ ಕ್ರಮಗಳ ಬಗ್ಗೆ ಮಾಹಿತಿ ನೀಡುವ ಸದುದ್ದೇಶವನ್ನು ಧನುಷ್ ಹಾಗೂ ಹೇಮಂತ್ ಹೊಂದಿದ್ದಾರೆ.
ಒಟ್ಟು 25,000ಕಿ.ಮೀ. ಸಂಚರಿಸುವ ಯೋಜನೆ ಹೊಂದಿರುವ ಧನುಷ್ ಮತ್ತು ಹೇಮಂತ್ ಈವರೆಗೆ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಓಡಿಶಾ, ಪಶ್ಚಿಮ ಬಂಗಾಳ, ಅಸ್ಸಾಂ ಸೇರಿದಂತೆ ಹಲವು ಈಶಾನ್ಯ ರಾಜ್ಯಗಳನ್ನು ಸಂಚರಿಸಿದ್ದಾರೆ.