ಗಜೇಂದ್ರಗಡ: ಪರಿಸರ ಉಳಿಸದೆ ಹೋದಲ್ಲಿ ಮನುಷ್ಯನಿಗೆ ಉಸಿರು ಇಲ್ಲದಂತಾಗುತ್ತದೆ. ಮುಂದಿನ ದಿನಗಳಲ್ಲಿ ಎಚ್ಚರಿಕೆಯಿಂದ ಜೀವನ ನಡೆಸುವ ಪರಿಸ್ಥಿತಿ ಎದುರಾಗಲಿದೆ. ಈ ನಿಟ್ಟಿನಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಯಾದಗಿರಿ ವರೆಗೆ ಸೈಕಲ್ ಪರ್ಯಟಣೆ ಕೈಗೊಂಡಿದ್ದೇನೆ ಎಂದು ಪರಿಸರ ಪ್ರೇಮಿ ಮುತ್ತಣ್ಣ ತಿರ್ಲಾಪೂರ ಹೇಳಿದರು.
ರೋಣ ತಾಲೂಕಿನ ಕರ್ಕಿಕಟ್ಟಿ ಗ್ರಾಮದಿಂದ ಯಾದಗಿರಿ ವರೆಗೆ ಕೈಗೊಂಡ ಪರಿಸರ ಜಾಗೃತಿ ಸೈಕಲ್ ಪರ್ಯಟಣೆ ನಿಮಿತ್ತ ಪಟ್ಟಣದ ಪುಟ್ಟರಾಜ ಗವಾಯಿಗಳ ವೃತ್ತದಲ್ಲಿ ಶುಕ್ರವಾರ ಸಾರ್ವಜನಿಕರಿಗೆ ಪರಿಸರ ಉಳಿವಿನ ಕುರಿತು ಅರಿವು ಮೂಡಿಸಿ ಮಾತನಾಡಿದರು.
ಇಂದು ಕುಡಿಯುವ ನೀರಿನ ಬಾಟಲ್ ಗಳನ್ನು ಖರೀದಿಸಿ ಕೊಂಡೊಯ್ಯುವಂತೆ, ಮುಂದಿನ ದಿನಗಳಲ್ಲಿ ಆಮ್ಲಜನಕ ಕೊರತೆಯಾಗಿ ಸಿಲಿಂಡರ್ ಹೊತ್ತು ಸಾಗುವ ಪರಿಸ್ಥಿತಿ ಎದುರಾಗದಂತೆ ಪರಿಸರವನ್ನು ಉಳಿಸಲು ಸಹಸ್ರ ಸಂಖ್ಯೆಯ ಗಿಡಗಳನ್ನು ಬೆಳೆಸಬೇಕೆಂದರು.
ಬಹುತೇಕರು ತಮ್ಮ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲು ಮುಂದಾಗುತ್ತಾರೆ. ಆದರೆ, ಮನುಕುಲವನ್ನು ಸಲುಹುವ ಪರಿಸರದ ಬಗ್ಗೆ ಕಾಳಜಿ ವಹಿಸಿ, ಪ್ರತಿಯೊಬ್ಬರ ಜನ್ಮದಿನದ ಸಂದರ್ಭದಲ್ಲಿ ಸಸಿಗಳನ್ನು ನೆಟ್ಟು, ಪೋಷಣೆಯ ಜವಾಬ್ದಾರಿ ಹೊರಬೇಕಿದೆ. ರಸ್ತೆಗಳಲ್ಲಿ ಗಿಡ, ಮರಗಳನ್ನು ಕಡಿಯದಂತೆ ಎಚ್ಚರಿಕೆ ವಹಿಸಬೇಕಿದೆ. ನಾನು ಪರಿಸರವನ್ನು ಮಕ್ಕಳಂತೆ ರಕ್ಷಿಸುತ್ತೇನೆ ಎಂದರು.
ರೋಣ ತಾಲೂಕಿನಿಂದ ಯಾದಗಿರಿ ವರೆಗೂ ಪರಿಸರ ಜಾಗೃತಿ ಜಾಥಾ ಹಮ್ಮಿಕೊಂಡಿದ್ದು, ರಸ್ತೆಯುದ್ದಕ್ಕೂ ಸಾರ್ವಜನಿಕರಿಗೆ ಪರಿಸರ ಅರಿವು ಮೂಡಿಸುವುದು ನನ್ನ ಕರ್ತವ್ಯವಾಗಿದೆ. ಹೀಗಾಗಿ, ಸೈಕಲ್ ಮೂಲಕ ಈ ಯಾತ್ರೆ ಕೈಗೊಂಡಿದ್ದೇನೆ. ಪ್ರತಿಯೊಬ್ಬರೂ ಸಸ್ಯ ಸಂಪತ್ತು, ಅರಣ್ಯೀಕರಣದ ಬಗ್ಗೆ ಹೆಚ್ಚಿನ ಒತ್ತು ನೀಡುವುದಲ್ಲದೇ, ಬದುಕಿನ ಒಂದು ಭಾಗವಾಗಿ ಸ್ವೀಕರಿಸಬೇಕಿದೆ ಎಂದು ಕರೆ ನೀಡಿದರು.
ಪರಿಸರ ಪ್ರೇಮಿ ಮುತ್ತಣ್ಣ ತಿರ್ಲಾಪೂರ 53 ವರ್ಷದ ಇಳಿವಯಸ್ಸಿನವರಾದರೂ ಎಲ್ಲರೂ ನಾಚುವಂತೆ ಇಂತಹ ಮಹತ್ಕಾರ್ಯಕ್ಕೆ ಮುಂದಾಗಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೇ, ಮೈಮೇಲೆ ಹಾಕಿಕೊಂಡಿರುವ ಹಸಿರು ಬಟ್ಟೆಯ ತುಂಬ ಪರಿಸರ ಜಾಗೃತಿಯ ಘೋಷವಾಕ್ಯಗಳು, ಸೈಕಲ್‌ಗೆ ಅಳಡಿಸಿದ್ದ ತ್ರಿವರ್ಣ ಧ್ವಜ ಎಲ್ಲರನ್ನೂ ಆಕರ್ಷಿಸುತ್ತಿದೆ. ಈ ಸಂದರ್ಭದಲ್ಲಿ ಶ್ರೀಶೈಲ ಅಂಗಡಿ, ಅಲ್ಲಾಭಕ್ಷಿ ನಿಶಾನದಾರ, ರಾಚಪ್ಪ ಅಂಗಡಿ, ಬಾಷೇಸಾಬ ಮುದಗಲ್ಲ, ಅಬ್ದುಲಅಹ್ಮದ ಹಿರೇಮನಿ ಇನ್ನಿತರರಿದ್ದರು.