ಮಹಾನಗರ: ಇವರು ಸಂಜಯ್ ಮಯೂರೆ. ಮಹಾರಾಷ್ಟ್ರದ 68ರ ಹಿರಿಯರು. ನಿವೃತ್ತರಾಗಿ ಮನೆಯಲ್ಲಿ ಹಾಯಾಗಿರುವ ವಯಸ್ಸಿನಲ್ಲೂ ಕಾಶ್ಮೀರದಿಂದ ಕನ್ಯಾಕುಮಾರಿಗೆ ಸೈಕಲ್‌ನಲ್ಲಿ ಪ್ರವಾಸ ಹೊರಟಿದ್ದಾರೆ.
ಅ. 2ರಂದು ಮುಂಬಯಿಯ ಗೇಟ್ ವೇ ಆಫ್ ಇಂಡಿಯಾದಿಂದ ಸೈಕಲ್ ಪ್ರವಾಸ ಆರಂಭಿಸಿದ್ದಾರೆ. ಬರೋಬ್ಬರಿ 30 ಕಿಲೋ ತೂಕದ ಲಗೇಜ್ ಕೂಡ ಇದೆ. ಇದರಲ್ಲಿ ಟೆಂಟ್, ಸ್ಲೀಪಿಂಗ್ ಬ್ಯಾಗ್, ದೈನಂದಿನ ಬಳಕೆ ವಸ್ತು, ಸೈಕಲ್ ರಿಪೇರಿ ಸಾಮಗ್ರಿ ಸೇರಿದೆ. ಇದೆಲ್ಲದರ ಜತೆಗೆ ಸೈಕಲ್ ತುಳಿಯುತ್ತಾ ಸಾಗುತ್ತಾರೆ. ಏರಿಳಿತವಿಲ್ಲದ ಹಾದಿಯಾದರೆ ದಿನಕ್ಕೆ 100 ಕಿ.ಮೀ.ನಷ್ಟು ತುಳಿಯುತ್ತಾರೆ.
1970ರಿಂದಲೇ ಸೈಕ್ಲಿಂಗ್ ಮಾಡುತ್ತಿರುವ ಸಂಜಯ್ ನನಗೆ ಬಿಪಿ, ಶುಗರ್ ಯಾವುದೇ ಕಾಯಿಲೆ ಇಲ್ಲ, ಫಿಟ್ ಇದ್ದೇನೆ ಎಂದು ಖುಷಿಯಿಂದ ನುಡಿಯುತ್ತಾರೆ. ಮಹಾರಾಷ್ಟ್ರದ ಬುಲ್ಡ್‌ವಾನಾದ ನಿವಾಸಿಯಾಗಿರುವ ಅವರು ಜಿಲ್ಲಾ ಕಚೇರಿಯಲ್ಲಿ ಡೆಪ್ಯುಟಿ ತಹಶೀಲ್ದಾರರಾಗಿ ನಿವೃತ್ತರಾದವರು. ಅವರ ಪತ್ನಿ ನಿವೃತ್ತ ಬ್ಯಾಂಕ್ ಅಧಿಕಾರಿ.
ಪ್ರವಾಸದ ಸಂದರ್ಭ ಕನಿಷ್ಠ ವೆಚ್ಚವಿರುತ್ತದೆ, ಆದಷ್ಟೂ ಪೊಲೀಸ್ ಸ್ಟೇಶನ್, ರಾಮಕೃಷ್ಣ ಮಿಷನ್‌ನಂತಹ ತಾಣಗಳಲ್ಲಿ ಉಳಿದುಕೊಳ್ಳುತ್ತೇನೆ. ಟೆಂಟ್ ಕೂಡ ಇರುವುದರಿಂದ ಸಮಸ್ಯೆಯಾಗುವುದಿಲ್ಲ. ಒಂದು ವರ್ಷದಲ್ಲಿ 27 ರಾಜ್ಯ, ಅಲ್ಲದೆ ಬಾಂಗ್ಲಾ, ಭೂತಾನ್ ಸೇರಿದಂತೆ 20 ಸಾವಿರ ಕಿ.ಮೀ. ಸಂಚರಿಸಿ ಮನೆ ಸೇರುವುದು ಅವರ ಗುರಿ.
ಈ ಮೊದಲು 17 ದೇಶಗಳನ್ನು ಸೈಕಲ್‌ನಲ್ಲಿ ಸುತ್ತಿರುವ ಅವರು 2004 ರಲ್ಲಿ ಅಥೆನ್ಸ್ ಒಲಿಂಪಿಕ್ಸ್‌ಗೆ ಸೈಕಲ್ ತುಳಿಯುತ್ತಾ ತಲಪಿದ್ದುದು ಅವರ ಸಾಧನೆ. ಈ ಬಾರಿಯ ಪ್ರವಾಸದಲ್ಲಿ ಅವರದ್ದು ಮುಖ್ಯವಾಗಿ ಪರಿಸರವನ್ನು ಉಳಿಸುವುದು, ಸೈಕಲ್ ಸದ್ಬಳಕೆ ಹೆಚ್ಚಿಸುವ ಸಂದೇಶ ಪಸರಿಸುವ ಗುರಿ ಇದೆ.
ಪ್ರವಾಸದಲ್ಲಿ ಯಾವ ಸಮಸ್ಯೆಯಾಗುವುದಿಲ್ಲ, ಎಲ್ಲರೂ ಸ್ನೇಹ ಪೂರ್ವಕವಾಗಿ ನಡೆದು ಕೊಳ್ಳುತ್ತಾರೆ, ಬೆಳಗ್ಗೆ ಮನೆಯವರೊಂದಿಗೆ ಮಾತನಾಡುತ್ತೇನೆ, ಅವರೊಂದಿಗೆ ಸಂಪರ್ಕದಲ್ಲಿರುತ್ತೇನೆ ಎಂದು ಅವರು ತಿಳಿಸಿದ್ದಾರೆ.