ಹುಬ್ಬಳ್ಳಿ: ಅವಳಿನಗರದಲ್ಲಿ ಸೈಕಲ್ ಬಳಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ, 34 ಕಡೆ ಸಾರ್ವಜನಿಕ ಸೈಕಲ್ ನಿಲ್ದಾಣಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು,
ಈಗಾಗಲೇ ಪ್ರಾಯೋಗಿಕವಾಗಿ 8 ಕಡೆ ನಿಲ್ದಾಣ ನಿರ್ಮಿಸಲಾಗಿದೆ.
ಅಂದಾಜು 8.5 ಕೋಟಿ ರೂ.ಗಳ ವೆಚ್ಚದಲ್ಲಿ ಬೈಸಿಕಲ್ ಯೋಜನೆ ರೂಪಿಸಲಾಗಿದ್ದು, ಇದರಿಂದ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆ ಜಾರಿಗೆ ತರಲು ಸ್ಮಾಟ್‌ಸಿಟಿ ಕಂಪನಿ ಮುಂದಾಗಿದೆ.
ನಿಲ್ದಾಣಗಳು ಎಲ್ಲೆಲ್ಲಿ: ಸಾರ್ವಜನಿಕ ಅನುಕೂಲಕ್ಕಾಗಿ ನಿರ್ಮಿಸಿರುವ ಬೈಸಿಕಲ್ ನಿಲ್ದಾಣಗಳು ಇಲ್ಲಿನ ವಿದ್ಯಾನಗರ ಶಿರೂರ ಪಾರ್ಕ್‌ನ ಚೇತನ ಕಾಲೇಜು ಎದುರು, ಶ್ರೇಯಾ ಪಾರ್ಕ್ ತೋಳನಕೆರೆ ಬಳಿ, ಗೋಕುಲ ರಸ್ತೆ ಕೆಇಸಿ ಬಳಿ, ರಾಮಲಿಂಗೇಶ್ವರ ನಗರ ವೃತ್ತ, ಕೈಗಾರಿಕಾ ವಸಾಹತು ಪ್ರದೇಶ ಗೇಟ್ ನಂ.1, ತತ್ವದರ್ಶ ಆಸ್ಪತ್ರೆ ಎದುರು, ಉಣಕಲ್ಲ ಕೆರೆ ಆವರಣ, ಗೋಕುಲ ರಸ್ತೆ ರೇಣುಕಾ ನಗರ ಕ್ರಾಸ್, ಬಸವೇಶ್ವರ ನಗರ ಕ್ರಾಸ್, ಅಕ್ಷಯ ಪಾರ್ಕ್, ಹೊಸ ಕೋರ್ಟ್ ಸಂಕೀರ್ಣ, ಕಿಮ್ಸ್ ಮುಖ್ಯದ್ವಾರ, ಕಾಡಸಿದ್ದೇಶ್ವರ ಕಾಲೇಜು, ಖೋಡೆ ಹಾಸ್ಟೆಲ್, ಬಿವಿವಿ ಕಾಲೇಜು ನಿಲ್ದಾಣ, ಬಿವಿಬಿ ಲೇಡೀಸ್ ಹಾಸ್ಟೆಲ್, ಹೊಸೂರ ವೃತ್ತ, ಐಟಿ ಪಾರ್ಕ್, ಇಂದಿರಾ ಗಾಜಿನ ಮನೆ, ಹಳೆ ಕೋರ್ಟ್ ವೃತ್ತ, ಹಳೆಯ ಬಸ್ ನಿಲ್ದಾಣ, ಮೂರುಸಾವಿರಮಠ, ದುರ್ಗದ ಬಯಲು, ಸಿಬಿಟಿ, ಚಿಟಗುಪ್ಪಿ ವೃತ್ತ, ರೈಲ್ವೆ ನಿಲ್ದಾಣ, ಕೇಶ್ವಾಪುರ ವೃತ್ತ, ರಮೇಶ ಭವನ, ಸಿದ್ಧಾರೂಢಮಠ, ಇಂಡಿ ಪಂಪ್, ಹಳೇಹುಬ್ಬಳ್ಳಿ ಅಹಿಂಸಾ ವೃತ್ತ, ನ್ಯೂ ಇಂಗ್ಲಿಷ್ ಸ್ಕೂಲ್ ಸೇರಿ ಒಟ್ಟು 34 ಕಡೆಗಳಲ್ಲಿ ಹಂತ ಹಂತವಾಗಿ ನಿಲ್ದಾಣಗಳನ್ನು ಸ್ಥಾಪಿಸಲಾಗುತ್ತದೆ.
ಪ್ರಾಯೋಗಿಕವಾಗಿ ವಿದ್ಯಾನಗರ ಶಿರೂರ ಪಾರ್ಕ್‌ನ ಚೇತನ ಸ್ಕೂಲ್ ಬಳಿ, ಶ್ರೇಯಾ ಪಾರ್ಕ್ ತೋಳನಕೆರೆ ಬಳಿ, ಗೋಕುಲ ರಸ್ತೆ ಕೆಇಸಿ ಬಳಿ, ರಾಮಲಿಂಗೇಶ್ವರ ನಗರ ವೃತ್ತ, ಕೈಗಾರಿಕಾ ವಸಾಹತು ಪ್ರದೇಶ ಗೇಟ್ ನಂ.1, ತತ್ವದರ್ಶ ಆಸ್ಪತ್ರೆ ಎದುರು, ಉಣಕಲ್ಲ ಕೆರೆ ಆವರಣದಲ್ಲಿ ಬೈಸಿಕಲ್ ನಿಲ್ದಾಣಗಳನ್ನು ನಿರ್ಮಿಸಲಾಗಿದೆ.
ಪ್ರತಿ ನಿಲ್ದಾಣದಲ್ಲಿ ಕನಿಷ್ಟ 7-8 ಸೈಕಲ್ ಗಳು ಇರಲಿವೆ. ಜತೆಗೆ ಆಯಾ ಭಾಗದಲ್ಲಿನ ಸ್ಥಳಾವಕಾಶ ಮೇಲೆ ಹೆಚ್ಚಿನ ಸೈಕಲ್ ನಿಲ್ದಾಣಗಳನ್ನು ಪ್ರಾಯೋಗಿಕವಾಗಿ ನಿರ್ಮಿಸಲಾಗುತ್ತಿದ್ದು, ಇನ್ನುಳಿದ ನಿಲ್ದಾಣಗಳನ್ನು ಹಂತ ಹಂತವಾಗಿ 2-3 ವರ್ಷಗಳಲ್ಲಿ ನಿರ್ಮಿಸಲಾಗುತ್ತದೆ. ಬೈಸಿ ಕಲ್ ಸಂಚಾರಕ್ಕೆ ಜನರ ಸ್ಪಂದನೆ ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು.
ಟ್ರಿನಿಟಿ ಸಂಸ್ಥೆಗೆ ಗುತ್ತಿಗೆ: ನಗರದ ಟ್ರಿನಿಟಿ ಟೆಕ್ನಾಲಜಿಯವರು ಬೈಸಿಕಲ್ ನಿಲ್ದಾಣಗಳ ನಿರ್ಮಾಣ ಮತ್ತು ಐದು ವರ್ಷಗಳ ನಿರ್ವಹಣೆಯ ಗುತ್ತಿಗೆ ಪಡೆದಿದ್ದು, ಐದು ವರ್ಷಗಳ ಕಾಲ ಬೈಸಿಕಲ್ ನಿಲ್ದಾಣದ ಉಸ್ತುವಾರಿ ಹಾಗೂ ನಿರ್ವಹಣೆ ಮಾಡಲಿದ್ದಾರೆ.
ಜಿಪಿಎಸ್ ಅಳವಡಿಕೆ-ಸಿಬ್ಬಂದಿ ನೇಮಕ: ಬೈಸಿಕಲ್ ನಿಲ್ದಾಣಗಳಲ್ಲಿ ಆರಂಭಿಕವಾಗಿ ಓರ್ವ ಕಿಯೋಕ್ಸ್ ಸಿಬ್ಬಂದಿ ನೇಮಕ ಮಾಡಲಾಗುತ್ತದೆ. ಈ ಸಿಬ್ಬಂದಿ ನೂತನವಾಗಿ ಬರುವ ಜನರಿಗೆ ನೋಂದಣಿ ಸೇರಿದಂತೆ ಸೈಕಲ್‌ಗಳ ಮಾಹಿತಿ ಹೇಳಿಕೊಡಲಿದ್ದಾರೆ. ನೋಂದಣಿದಾರರಿಗೆ ನೋಂದಣಿ ನಂತರ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತದೆ. ಸ್ಮಾರ್ಟ್‌ಕಾರ್ಡ್‌ಗೆ ಆಧಾರ್ ಹಾಗೂ ಮೊಬೈಲ್ ನಂಬರ್ ಲಿಂಕ್ ಮಾಡಲಾಗಿರುತ್ತದೆ. ಈ ಸೈಕಲ್‌ಗಳು ಜಿಪಿಎಸ್ ಲಿಂಕ್ ಹೊಂದಿದ್ದು, ಟ್ರ್ಯಾಕಿಂಗ್ ಸಿಸ್ಟಮ್ ಹೊಂದಿರಲಿದೆ. ಬೈಸಿಕಲ್ ಸವಾರರು, ಒಂದು ನಿಲ್ದಾಣದಿಂದ
ಮತ್ತೂಂದು ನಿಲ್ದಾಣದಲ್ಲಿ ಸೈಕಲ್ ಬಿಡುವವರೆಗೂ ಬೈಸಿಕಲ್ ಟ್ರ್ಯಾಕ್ ಸಿಸ್ಟಮ್ ಚಾಲ್ತಿಯಲ್ಲಿರುತ್ತದೆ.
ಎರಡು ಬಗೆಯ ಬೈಸಿಕಲ್‌ಗಳು: ಸ್ಮಾರ್ಟ್‌ಸಿಟಿ ಯೋಜನೆಯಡಿ ಆರಂಭಿಸಲಾಗುತ್ತಿರುವ ಬೈಸಿಕಲ್ ಗಳು ಎರಡು ಬಗೆಯದ್ದಾಗಿದ್ದು, ಅದರಲ್ಲಿ ವಿದ್ಯುತ್ ಚಾಲಿತ ಹಾಗೂ ವಿದ್ಯುತ್ ಚಾಲಿತವಲ್ಲದ ಬೈಸಿಕಲ್ ಗಳನ್ನು ಇರಿಸಲಾಗುತ್ತದೆ. ಇದರಲ್ಲಿ 34 ಬೈಸಿಕಲ್‌ಗಳು ವಿದ್ಯುತ್ ಚಾಲಿತ ಇದ್ದು, ಇನ್ನುಳಿದ 306 ಬೈಸಿಕಲ್ ಗಳು ವಿದ್ಯುತ್ ಚಾಲಿತವಲ್ಲದ ಬೈಸಿಕಲ್‌ಗಳಾಗಿವೆ.
– ಬಸವರಾಜ ಹೂಗಾರ