ಮೈಸೂರು: ನಗರದ ದೀಪ ಸಹಾಯ ಸೇವಾ ಸಂಸ್ಥೆ ವತಿಯಿಂದ ಜೋಗಿ ದೀಪು ಅವರ ಜನ್ಮದಿನದ ಅಂಗವಾಗಿ ಪೌರಕಾರ್ಮಿಕರ ಮಕ್ಕಳಿಗೆ ಟ್ರಿಣ್ ಟ್ರಿಣ್ ಸೈಕಲ್ ಯೋಜನೆಯ ನೋಂದಣಿ ಕಾರ್ಡ್‌ಗಳನ್ನು ವಿತರಿಸಲಾಯಿತು.
ನಗರದ ಆರ್‌ಟಿಒ ಕಚೇರಿ ವೃತ್ತದಲ್ಲಿರುವ ಟ್ರಿಣ್‌ಟ್ರಿಣ್ ಸೈಕಲ್ ನೋಂದಣಿ ಕೇಂದ್ರದ ಮುಂಭಾಗ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜನ್ಮದಿನ ಸೇರಿದಂತೆ ಪ್ರತಿಯೊಂದು ವಿಶೇಷ ದಿನವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ. ಇಂತಹ ಆಚರಣೆಗಳ ಮೂಲಕ ತಮ್ಮ ಘನತೆ ಪರಿಚಯಿಸಲು ಮುಂದಾಗುತ್ತಿರುವುದು ಬೇಸರದ ಸಂಗತಿ ಎಂದರು.
ಅಲ್ಲದೆ ಎಲ್ಲದಕ್ಕೂ ಬ್ಯಾನರ್, ಪ್ಲೆಕ್ಸ್‌ಗಳನ್ನು ಅಳವಡಿಸಿ ನಗರದ ಅಂದವನ್ನು ಹಾಳು ಮಾಡುವ ಜತೆಗೆ ಅನಗತ್ಯವಾಗಿ ದುಂದು ಮಾಡುವ ಕಾರ್ಯಗಳು ನಡೆಯುತ್ತಿದೆ. ಆದರೆ ಇಂತಹ ಆಚರಣೆಗಳನ್ನು ಅದ್ಧೂರಿತನದಿಂದ ಆಚರಣೆ ಮಾಡುವ ಬದಲಿಗೆ ಸಮಾಜಮುಖೀ ಕಾರ್ಯಕ್ರಮಗಳನ್ನು ಕೈಗೊಂಡರೆ ಸಮಾಜದಲ್ಲಿ ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿರುವ ಅನೇಕರಿಗೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಜನ್ಮದಿನದ ಸಂಭ್ರಮದಿಂದ ಅದ್ಧೂರಿಯಾಗಿ ಆಚರಿಸುವ ಬದಲಿಗೆ ಅರ್ಥಪೂರ್ಣವಾಗಿ ಆಚರಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.
ಅಬಕಾರಿ ಇಲಾಖೆ ಉಪ ಅಧೀಕ್ಷಕಿ ಸ್ಮಿತಾರಾಜ್ ಮಾತನಾಡಿ, ಸರ್ಕಾರಿ ಸೇವೆಗಳನ್ನು ಈ ರೀತಿಯಲ್ಲಿ ಬಡಮಕ್ಕಳ ಉಪಯೋಗಕ್ಕಾಗಿ ನೀಡುತ್ತಿರುವುದು ಸಂತಸ ತಂದಿದೆ. ಸಾರ್ವಜನಿಕರು ಟ್ರಿಣ್ ಟ್ರಿಣ್ ಯೋಜನೆಯಲ್ಲಿ ಸಹಭಾಗಿಗಳಾಗುವ ಮೂಲಕ ಮೈಸೂರನ್ನು ಮಾಲಿನ್ಯ ಮುಕ್ತವಾಗಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.
ಜೋಗಿ ದೀಪು ಮಾತನಾಡಿ, ಹಣ ಖರ್ಚು ಮಾಡಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ಬದಲು ಸಮಾಜಕ್ಕೆ ಉಪಯೋಗವಾಗುವ ಕೆಲಸ ಮಾಡಬೇಕೆಂಬ ಬಯಕೆಯೊಂದಿಗೆ ಎಲ್ಲ ವರ್ಗದ ಬಡ ಮಕ್ಕಳಿಗೆ ಟ್ರಿಣ್ ಟ್ರಿಣ್ ಕಾರ್ಡ್‌ಗಳನ್ನು 1 ವರ್ಷದ ಮಟ್ಟಿಗೆ ನೀಡಲಾಗಿದೆ. ಇದನ್ನು ಪ್ರತಿ ವಾರ್ಡ್‌ನ ಮಕ್ಕಳಿಗೂ ನೀಡಬೇಕೆಂಬ ಚಿಂತನೆ ಹೊಂದಿದ್ದು, ಮುಂದಿನ ದಿನಗಳಲ್ಲಿ ಇದನ್ನು ಕಾರ್ಯರೂಪಕ್ಕೆ ತರುವುದಾಗಿ ತಿಳಿಸಿದರು.
ಸಮಾಜಸೇವಕ ಕೆ.ರಘುರಾಂ, ಹೋಟೆಲ್ ಮಾಲೀಕ ರಾಧಾಕೃಷ್ಣ ಭಟ್, ಪಾಲಿಕೆ ಸದಸ್ಯೆ ಸಮೀನಾ ಇನ್ನಿತರರು ಹಾಜರಿದ್ದರು.