Advertisement

ಪರಿಸರ ಜಾಗೃತಿಗಾಗಿ ಕುಡ್ಲದ ಯುವಕನಿಂದ ಮಂಗಳೂರು To ಮಣಿಪುರದವರೆಗೆ ಸೈಕಲ್ ಪಯಣ

11:20 AM Mar 17, 2021 | Team Udayavani |

ಕಾಪು: ಪರಿಸರ ಜಾಗೃತಿ, ಮಿಯಾವಾಕಿ ಅರಣ್ಯ ಸಂಪತ್ತು ಬೆಳೆಸುವುದು ಮತ್ತು ಫಾರ್ಮಾ ಕಲ್ಚರ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕುಡ್ಲದ ಯುವಕ ಶ್ರವಣ್ ಕುಮಾರ್ ಮಂಗಳೂರಿನಿಂದ ಮಣಿಪುರದವರೆಗೆ ಫೆಡಲ್ ಫಾರ್ ಗ್ರೀನ್ ಎಂಬ ಸಂಕಲ್ಪದೊಂದಿಗೆ 6,000 ಕಿ.ಮೀ. ದೂರವರೆಗಿನ ಸೈಕಲ್ ಪಯಣವನ್ನು ಹಮ್ಮಿಕೊಂಡು ಯುವಜನರಿಗೆ ಸ್ಪೂರ್ತಿಯಾಗುವ ಪ್ರಯತ್ನ ಮಾಡಿದ್ದಾರೆ.

Advertisement

ಹಸಿರು ಕ್ರಾಂತಿಯ ಸಂಕಲ್ಪ ತೊಟ್ಟಿರುವ ಜೇಸಿಐ ಮಂಗಳೂರು ಲಾಲ್‌ಭಾಗ್‌ನ ಸದಸ್ಯ ಮತ್ತು ಸ್ವತಃ ಸೈಕಲಿಸ್ಟ್ ಆಗಿರುವ ಗುರುಪುರ ನಿವಾಸಿ ಶ್ರವಣ್ ಕುಮಾರ್ ಜನರಲ್ಲಿ ಪರಿಸರದ ಕುರಿತಾಗಿ ಜಾಗೃತಿ ಮೂಡಿಸುವುದರೊಂದಿಗೆ ಗಿಡ ಮರಗಳನ್ನು ಬೆಳೆಸಿ ಎಂಬ ಘೋಷಣೆಯೊಂದಿಗೆ ಪೆಡಲ್ ಫಾರ್ ಗ್ರೀನ್ ಎಂಬ ಹೆಸರಿನಲ್ಲಿ ಸೈಕಲ್ ಪಯಣವನ್ನು ಹಮ್ಮಿಕೊಂಡಿದ್ದು, ಮಾ. 15ರಂದು ಮಂಗಳೂರಿನಲ್ಲಿ ಚಾಲನೆ ನೀಡಲಾಗಿತ್ತು.

10 ರಾಜ್ಯಗಳಲ್ಲಿ ಸಂಚಾರ: ಆರಂಭದಲ್ಲಿ ಪ್ರತೀ ದಿನ 50 ರಿಂದ 60 ಕಿ. ಮೀ. ಸೈಕಲ್ ಸಂಚಾರ ನಡೆಯಲಿದ್ದು, ನಂತರ ವೇಗದ ಮಿತಿ ಹೆಚ್ಚಲಿದೆ. ಸೋಮವಾರ ಸಂಜೆ ಕಾಪುವಿನವರೆಗೆ ಸಾಗಿ ಬಂದಿರುವ ಸೈಕಲ್ ಪಯಣವು ಮಂಗಳವಾರ ಕಾಪುವಿನಿಂದ ಕುಂದಾಪುರಕ್ಕೆ ತೆರಳಿದೆ. ಮಂಗಳೂರಿನಿಂದ ಆರಂಭಗೊಂಡ ಸೈಕಲ್ ಪಯಣವು ಹತ್ತು ರಾಜ್ಯಗಳಲ್ಲಿ ಸಂಚರಿಸಲಿದ್ದು, ಶ್ರವಣ್ ಅವರು ಮುಂಬಯಿ, ನಾಗ್ಪುರ, ಝಾನ್ಸಿ, ಹರಿದ್ವಾರ, ವಾರಣಾಸಿ, ಲಖನೌ, ಮಣಿಪುರ, ಇಂಫಾಲ ಮೊದಲಾದ 10 ಪ್ರಮುಖ ನಗರಗಳಲ್ಲಿ ಜಾಗೃತಿ ಜಾಥಾ ಮತ್ತು ಸಭೆಗಳನ್ನು ನಡೆಸಲಿದ್ದಾರೆ.

ಹಿಂದೆಯೂ ಸೈಕಲ್ ಪಯಣ ನಡೆಸಿದ್ದ ಶ್ರವಣ್ ಕುಮಾರ್: ತಾನು ಬಯಸಿದ್ದ ಇಂಜಿನಿಯರಿಂಗ್ ಪದವಿಯನ್ನು ಅರ್ಧಕ್ಕೇ ಮೊಟಕುಗೊಳಿಸಿದ ಶ್ರವಣ್ ಕುಮಾರ್ ವೃತ್ತಿಯಲ್ಲಿ ಸೇಲ್ಸ್ ವ್ಯವಹಾರ ನಡೆಸುತ್ತಿದ್ದು ಪ್ರವೃತಿಯಲ್ಲಿ ಸೈಕಲಿಸ್ಟ್ ಆಗಿ ಜನರಲ್ಲಿ ಪರಿಸರದ ಕುರಿತಾಗಿ ಜಾಗೃತಿ ಮೂಡಿಸುವ ಸಂಕಲ್ಪ ತೊಟ್ಟಿದ್ದಾರೆ. ಸ್ವಚ್ಛತೆ, ಕಸದ ತೊಟ್ಟಿಗಳ ಬಳಕೆ ಮತ್ತು ಪ್ಲಾಸ್ಟಿಕ್ ವಸ್ತುಗಳ ಸಮರ್ಪಕ ವಿಲೇವಾರಿ ಕುರಿತಂತೆ ಜನಲ್ಲಿ ಜಾಗೃತಿ ಮೂಡಿಸುವ ಸಲುವಾಗಿ 2018ರಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ 10 ಸಾವಿರ ಕಿ. ಮೀ. ಸೈಕಲ್ ಪಯಣ ನಡೆಸಿದ್ದರು.

Advertisement

ಶ್ರವಣ್ ಕುಮಾರ್ ಹಮ್ಮಿಕೊಂಡಿರುವ ಸೈಕಲ್ ಪಯಣಕ್ಕೆ ಜೇಸಿಐ ಮಂಗಳೂರು ಲಾಲ್‌ಭಾಗ್ ಮತ್ತು ಮಂಗಳೂರಿನ ರೋಟರಿ ಸಂಸ್ಥೆಗಳು ಸಹಭಾಗಿತ್ವ ನೀಡಿದ್ದು, ಅವಳಿ ಸಂಸ್ಥೆಗಳ ಮನವಿಯ ಮೇರೆಗೆ ವಿವಿಧೆಡೆ ಜೇಸಿಐ ಮತ್ತು ರೊಟರಿ ಸಂಸ್ಥೆಗಳು ಹಾಗೂ ವೈಯಕ್ತಿಕವಾಗಿ ಶ್ರವಣ್ ಕುಮಾರ್ ಅವರ ಸ್ನೇಹಿತರು ಮತ್ತು ಪರಿಚಯಸ್ಥರು ವಿವಿಧ ರೀತಿಯಲ್ಲಿ ಸಹಕಾರ ನೀಡಲಿದ್ದಾರೆ.

ಏನಿದು ಮಿಯಾವಾಕಿ, ಫಾರ್ಮಾ ಕಲ್ಚರ್ ?: ಸಣ್ಣ ಜಾಗದಲ್ಲಿ ಹೆಚ್ಚಿನ ಗಿಡಗಳನ್ನು ಬೆಳೆಸುವ ಮೂಲಕ ಅರಣ್ಯ ಸಂಪತ್ತನ್ನು ಬೆಳೆಸುವುಕ್ಕೆ ಮಿಯಾವಾಕಿ ಅರಣ್ಯ ಸಂಪತ್ತು ಎನ್ನಲಾಗುತ್ತದೆ. ಕಡಿಮೆ ಜಾಗದಲ್ಲಿ ವಿವಿಧ ಜಾತಿ ಮತ್ತು ಪ್ರಭೇಧಗಳ ಮರಗಳನ್ನು ನೆಟ್ಟು, ಪೋಷಿಸಿ, ಬೆಳೆಸುವುದೇ ಮಿಯಾವಾಕಿ ಸಂಸ್ಕೃತಿಯ ಉದ್ದೇಶವಾಗಿದ್ದು, ಇದನ್ನು ನಗರ ಪ್ರದೇಶಗಳಲ್ಲೂ ಮಾಡಬಹುದಾಗಿದೆ. ಮೂರು ವರ್ಷ ನೀರು ಕೊಟ್ಟರೆ ಗಿಡಗಳು ಮರಗಳಾಗಿ ಬೆಳೆಯುತ್ತವೆ. ಫಾರ್ಮಾ ಕಲ್ಚರ್ ಸಂಸ್ಕೃತಿಯನ್ನು ಅಧ್ಯಯನ ಮಾಡಿದರೆ ಕೆಮಿಕಲ್ ರಹಿತವಾಗಿ ಹುಲ್ಲು, ಗೊಬ್ಬರಗಳನ್ನೇ ಬಳಸಿಕೊಂಡು ಅರಣ್ಯ ಸಂಪತ್ತನ್ನು ಬೆಳೆಸಬಹುದಾಗಿದೆ. ಇವರೆಡೂ ಸಂಸ್ಕೃತಿಗಳು ವಿದೇಶದಲ್ಲಿ ಬಹುವಾಗಿ ಪ್ರಚಲಿತದಲ್ಲಿವೆ.

ಜನರಲ್ಲಿ ಗಿಡಮರಗಳನ್ನು ನೆಡುವಂತೆ ಪ್ರೇರೇಪಿಸುವುದು, ದೇಶೀ ತಳಿಯ ಸಸಿಗಳನ್ನು ಬೆಳೆಸುವುದು, ಮಿಯಾವಾಕಿ ಅರಣ್ಯ ಬೆಳೆಸುವುದು, ಸಾವಯವ ಕೃಷಿ, ಮಳೆ ನೀರು ಸಂಗ್ರಹ ಮೊದಲಾದ ಪ್ರಮುಖ ವಿಚಾರಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಸೈಕಲ್ ಪಯಣದ ಮುಖ್ಯ ಉದ್ದೇಶವಾಗಿದೆ. ಮಿಯಾವಾಕಿ ಮತ್ತು ಫಾರ್ಮಾ ಕಲ್ಚರ್ ವ್ಯವಸ್ಥೆಯಿಂದಾಗಿ ಭೂಮಿಯ ಗುಣಮಟ್ಟ ವೃದ್ಧಿಯಾಗುವುದರೊಂದಿಗೆ ಪ್ರಾಣಿ, ಪಕ್ಷಿ ಮತ್ತು ಚಿಟ್ಟೆಗಳ ಜೀವಕ್ಕೆ ಆಗಬಹುದಾದ ತೊಂದರೆಗಳನ್ನೂ ತಪ್ಪಿಸಲು ಸಾಧ್ಯವಿದೆ.

  • ಶ್ರವಣ್ ಕುಮಾರ್

       ಸೈಕಲಿಸ್ಟ್, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next