ರಾಯಚೂರು: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕಡಿಮೆ ಇದ್ದರೂ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ನಿತ್ಯ ಹೆಚ್ಚಿಸುತ್ತಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಡಾ| ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ಸೈಕಲ್ ಜಾಥಾ ನಡೆಸಿ ಆಕ್ರೋಶ ಹೊರ ಹಾಕಿದ ಪಕ್ಷದ ಕಾರ್ಯಕರ್ತರು ಬಳಿಕ ಸ್ಥಳದಲ್ಲೇ ಧರಣಿ ನಡೆಸುವ ಮೂಲಕ ಪ್ರತಿಭಟಿಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
ಕೋವಿಡ್ ಕಾರಣಕ್ಕೆ ದೇಶದಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಯಿತು. ಇದರಿಂದ ಜನ ಆದಾಯವಿಲ್ಲದೇ ಕಂಗೆಟ್ಟಿದ್ದಾರೆ. ಆದರೆ, ಈಗ ತೈಲ ಬೆಲೆ ಏರಿಕೆ ಮೂಲಕ ಜನರ ಮೇಲೆ ತೆರಿಗೆ ಹೊರೆ ಹೇರುತ್ತಿರುವುದು ಖಂಡನೀಯ. ದೇಶದಲ್ಲಿ ಬಿಜೆಪಿ ಅ ಧಿಕಾರಕ್ಕೆ ಬಂದಾಗಿನಿಂದ ಬಡ, ರೈತ ಹಾಗೂ ದುಡಿವ ವರ್ಗದ ಜನರ ಮೇಲೆ ಪ್ರಹಾರ ನಡೆಸುತ್ತಿದೆ. ಸರ್ಕಾರಕ್ಕೆ ಉಳ್ಳವರ ಹಿತವೇ ಮುಖ್ಯವಾಗಿದ್ದು, ಬಡವರು ಕಷ್ಟದಲ್ಲಿ ಕೈ ತೊಳೆಯುವಂತಾಗಿದೆ ಎಂದು ದೂರಿದರು.
2014ರಲ್ಲಿ ಪೆಟ್ರೋಲ್ ಮೇಲಿನ ತೆರಿಗೆ 9.20, ಡೀಸೆಲ್ ತೆರಿಗೆ 3.46 ಹಾಕಲಾಗಿತ್ತು. ಮೋದಿ ನೇತೃತ್ವದ ಸರ್ಕಾರ ಪ್ರಸ್ತುತ ಪೆಟ್ರೋಲ್ ಮೇಲಿನ ತೆರಿಗೆ 23.70, ಡೀಸೆಲ್‌ಗೆ 28.30 ರೂ. ಹೆಚ್ಚಿಸುವ ಮೂಲಕ ಸಾಕಷ್ಟು ಸಂಕಷ್ಟ ತಂದೊಡ್ಡಿದೆ. ಕಚ್ಚಾ ತೈಲ ಬೆಲೆ ಕಡಿಮೆಯಾಗಿದ್ದರೂ ಪೆಟ್ರೋಲ್, ಡೀಸೆಲ್ ದರದಲ್ಲಿ ಸುಂಕ ಕಡಿಮೆ ಮಾಡಿಲ್ಲ. ಅಧಿಕಾರಕ್ಕೆ ಬಂದಾಗಿನಿಂದ ತೈಲ ಬೆಲೆ ಪ್ರತಿ ವರ್ಷ ಹೆಚ್ಚುತ್ತಲೇ ಬಂದಿದೆ. ಆರು ವರ್ಷದಲ್ಲಿ 18 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹವಾದರೂ ಜನರಿಗೆ ಮಾತ್ರ ಅದರ ಕನಿಷ್ಠ ಲಾಭ ಸಿಕ್ಕಿಲ್ಲ. ಕೂಡಲೇ ಇಂಧನ ಬೆಲೆ ಏರಿಕೆ ನಿರ್ಧಾರ ಹಿಂಪಡೆಯಬೇಕು. ಜನಸಾಮಾನ್ಯರಿಗೆ ಯಾವುದೇ ಹೊರೆಯಾಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಮಾಜಿ ಸಂಸದ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ವಿ.ನಾಯಕ, ಎಂಎಲ್‌ಸಿ ಎನ್.ಎಸ್. ಭೋಸರಾಜು, ಶಾಸಕರಾದ ಬಸನಗೌಡ ದದ್ದಲ್, ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಎಂಎಲ್‌ಸಿ ಬಸವರಾಜ ಪಾಟೀಲ ಇಟಗಿ, ಎ.ವಸಂತ ಕುಮಾರ, ಯಂಕಣ್ಣ ಯಾದವ್, ಕೆ.ಶಾಂತಪ್ಪ, ರವಿ ಬೋಸರಾಜ್, ಜಿ.ಶಿವಮೂರ್ತಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಿರ್ಮಲಾ ಬೆಣ್ಣಿ, ಶಶಿಕಲಾ ಭೀಮರಾಯ, ರಾಣಿ ರಿಚರ್ಡ್, ವಂದನಾ ಸೇರಿ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.