Advertisement

Cybercrime; ಚಾಲ್ತಿ ಖಾತೆ ತೆರೆದು ಕೋಟ್ಯಂತರ ರೂ.ವರ್ಗಾವಣೆ: ಇಬ್ಬರ ಬಂಧನ

11:34 PM Sep 19, 2024 | Team Udayavani |

ಗದಗ: ಎಸ್‌ಬಿಐ ಬ್ಯಾಂಕ್‌ವೊಂದರಲ್ಲಿ ಅಮಾಯಕನ ಹೆಸರಿನಲ್ಲಿ ಚಾಲ್ತಿ ಖಾತೆ ತೆರೆದು, ಆ ಖಾತೆಯ ಮೂಲಕ 5 ಕೋಟಿ ರೂ. ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಆರೋಪ ಕುರಿತಂತೆ ಗದಗ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ಗದಗ ತಾಲೂಕಿನ ಹುಯಿಲಗೋಳ ಗ್ರಾಮದ ಬಸಪ್ಪ ಫಕ್ಕಿರಪ್ಪ ಈರಣ್ಣವರ, ಹುಲಕೋಟಿ ಗ್ರಾಮದ ದುರಗಪ್ಪ ಮೈಲಪ್ಪ ಗೋಣೆಪ್ಪನವರ ಹಾಗೂ ನಗರದ ಗುಮ್ಮು ರಾಬಿನ್ಸನ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಪೈಕಿ ಎ1 ಆರೋಪಿ ಬಸಪ್ಪ ಹಾಗೂ ಎ2 ಆರೋಪಿ ದುರಗಪ್ಪನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

2024ರ ಮೇ 29ರಿಂದ ಸೆ. 17ರ ನಡುವಿನ ಅವಧಿಯಲ್ಲಿ ವಂಚನೆಗೊಳಗಾದ ಹಣ ವರ್ಗಾವಣೆಯಾಗಿದ್ದು, ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಮಲ್ಲಪ್ಪ ಕಲ್ಲಪ್ಪ ಬಣವಿ ಮೋಸಕ್ಕೊಳಗಾಗಿದ್ದು, ಈ ಕುರಿತು ಗದಗ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ಲಕ್ಕುಂಡಿ ಗ್ರಾಮದ ಮಲ್ಲಪ್ಪ ಕಲ್ಲಪ್ಪ ಬಣವಿ ಹಾಗೂ ಆರೋಪಿಗಳಾದ ಬಸಪ್ಪ ಫಕ್ಕಿರಪ್ಪ ಈರಣ್ಣವರ, ಹುಲಕೋಟಿ ಗ್ರಾಮದ ದುರಗಪ್ಪ ಮೈಲಪ್ಪ ಗೋಣೆಪ್ಪನವರ ಪರಿಚಿತರಾಗಿದ್ದು, ಮಲ್ಲಪ್ಪನ್ನು ಪುಸಲಾಯಿಸಿ ಗದಗ ನಗರದ ಮುಳಗುಂದ ನಾಕಾ ಬಳಿಯ ಎಸ್‌ಬಿಐ ಬ್ಯಾಂಕ್‌ನಲ್ಲಿ ಹೊಸದಾಗಿ ಚಾಲ್ತಿ ಖಾತೆಯನ್ನು ತೆರೆಸಿದ್ದಾರೆ.

ಮಲ್ಲಪ್ಪ ಕಲ್ಲಪ್ಪ ಬಣವಿ ಹೆಸರಿನಲ್ಲಿ ತೆರೆಯಲಾದ ಚಾಲ್ತಿ ಖಾತೆಗೆ ಸೈಬರ್ ಕ್ರೈಂ ಮೂಲಕ 5 ಕೋಟಿ ರೂ. ವಂಚನೆ ಹಣವನ್ನು ವರ್ಗಾಯಿಸಿದ್ದಾರೆ. ನಂತರ ಖಾತೆದಾರ ಮಲ್ಲಪ್ಪನಿಗೆ ಗೊತ್ತಿಲ್ಲದಂತೆ ಆ ಹಣವನ್ನು ತಮಗೆ ಬೇಕಾದ ಖಾತೆಗಳಿಗೆ ವಂಚನೆ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ. ಇದನ್ನರಿತ ಮಲ್ಲಪ್ಪ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

Advertisement

ಸೈಬರ್ ಕ್ರೈಂಗೆ ಅಮಾಯಕರ ಬಳಕೆ: ಜಿಲ್ಲೆಯಲ್ಲಿ ಸೈಬರ್ ಕ್ರೈಂ ಪ್ರಕರಗಳು ಹೆಚ್ಚುತ್ತಿದ್ದು, ಅಮಾಯಕರನ್ನು ಬಳಸಿಕೊಳ್ಳಲಾಗುತ್ತಿದೆ. ಸೈಬರ್ ಕ್ರೈಂನಲ್ಲಿ ಭಾಗಿಯಾದವರು ಮೂರನೇ ವ್ಯಕ್ತಿಯ ಮೂಲಕ ಅಮಾಯಕರ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳನ್ನು ಹೊಸದಾಗಿ ಚಾಲ್ತಿ ಖಾತೆ ತೆರೆದು ಅವರಿಗೆ ಗೊತ್ತಿಲ್ಲದಂತೆ ವಂಚನೆ ಹಣವನ್ನು ವರ್ಗಾಯಿಸಿ ಅದರ ಮೂಲಕ ತಮಗೆ ಬೇಕಾದ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸಿಕೊಳ್ಳಲಾಗುತ್ತಿದೆ. ಈ ಕುರಿತು ಸಾರ್ವಜನಿಕರು ಜಾಗೃತಿ ವಹಿಸಬೇಕಾಗಿದೆ.

ದೂರುದಾರ ಮಲ್ಲಪ್ಪ ಕಲ್ಲಪ್ಪ ಬಣವಿ ಅವರು ನೀಡಿದ ದೂರಿನ ಆಧಾರದ ಮೇಲೆ ಇಬ್ಬರು ಆರೋಪಿಗಳನ್ನು ವಶಪಡಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಪ್ರಾಥಮಿಕ ಹಂತದ ತನಿಖೆಯಲ್ಲಿ ಈ ಪ್ರಕರಣದಲ್ಲಿ ಇನ್ನೂ ಹಲವಾರು ಆರೋಪಿಗಳು ಭಾಗಿಯಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಅಲ್ಲದೇ, ಇನ್ನೂ ಹಲವರ ಹೆಸರಿನಲ್ಲಿ ಬ್ಯಾಂಕ್‌ಗಳಲ್ಲಿ ಖಾತೆ ತೆರೆದು ಕೋಟಿಗಟ್ಟಲೆ ಹಣ ವರ್ಗಾವಣೆ ಮಾಡಲಾಗಿದ್ದು, ತನಿಖೆಯನ್ನು ಚುರುಕುಗೊಳಿಸಲಾಗಿದೆ. ಸಾರ್ವಜನಿಕರು ಸೈಬರ್ ಕ್ರೈಂ ಕುರಿತು ಎಚ್ಚೆತ್ತುಕೊಳ್ಳಬೇಕು. ಪೋನ್ ಕರೆ ಮೂಲಕ ಜನರನ್ನು ಪುಸಲಾಯಿಸಿ ವಂಚನೆ ಮಾಡುತ್ತಿದ್ದು, ಸಾರ್ವಜನಿಕರು ಜಾಗೃತಿ ವಹಿಸಬೇಕು ಎಂದು ಸೈಬರ್ ಪೊಲೀಸ್ ಠಾಣೆ ಸಿಪಿಐ ಎಸ್.ಎಂ. ಶಿರಗುಪ್ಪಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next