Advertisement

ರಾಜ್ಯ ಆಂತರಿಕ ಭದ್ರತಾ ವಿಭಾಗಕ್ಕೆ ಇನ್ನು ಸೈಬರ್‌ ಕ್ರೈಂ ಹೊಣೆ

11:03 PM Sep 22, 2021 | Team Udayavani |

ಬೆಂಗಳೂರು: ಭಯೋತ್ಪಾದನೆ, ನಕ್ಸಲ್‌ ಚಟುವಟಿಕೆಗಳ ಮೇಲೆ ನಿಗಾವಹಿಸಿದ್ದ ರಾಜ್ಯ ಆಂತರಿಕ ಭದ್ರತಾ ವಿಭಾಗ(ಐಎಸ್‌ಡಿ) ಇನ್ಮುಂದೆ ಸೈಬರ್‌, ಆರ್ಥಿಕ ಅಪರಾಧ, ಬಿಟ್‌ಕಾಯಿನ್‌, ಕ್ರಿಪ್ಟೋ ಕರೆನ್ಸಿ ಸಹಿತಆನ್‌ಲೈನ್‌ ವಂಚನೆಗಳ ಮೇಲೂ  ಕಣ್ಣಿಡಲಿದೆ.

Advertisement

ಈ ಹಿನ್ನೆಲೆಯಲ್ಲಿ ಬಿಟ್‌ಕಾಯಿನ್‌, ಕ್ರಿಪ್ಟೋ ಕರೆನ್ಸಿ, ಸೈಬರ್‌, ಆರ್ಥಿಕ ಅಪರಾಧ ಸೇರಿ ಅಂತರ್ಜಾಲದಲ್ಲಿ ನಡೆಯುವ ವಂಚನೆ ಜಾಲಗಳ ಪತ್ತೆ ಹಚ್ಚಲು ರಾಜ್ಯದ ಆಂತರಿಕ ಭದ್ರತಾ ವಿಭಾಗ(ಐಎಸ್‌ಡಿ)ದ ಆಯ್ದ ಅಧಿಕಾರಿ-ಸಿಬಂದಿಗೆ  “ಬ್ಲ್ಯಾಕ್‌ ಚೈನ್‌ ಟೆಕ್ನಾಲಜಿ’ ಕುರಿತು ನೆಟ್‌ಕೋರ್ಸ್‌ ತರಬೇತಿ ಆರಂಭಿಸಲಾಗಿದೆ.

ಎಂಜಿನಿಯರಿಂಗ್‌ ಪದವಿ ಪಡೆದವರು ಹಾಗೂ ಕಂಪ್ಯೂಟರ್‌ ಜ್ಞಾನ ಹೊಂದಿರುವ ಎಸ್ಪಿ ಹಂತದಿಂದ ಕಾನ್‌ಸ್ಟೆಬಲ್‌ವರೆಗಿನ 25 ಅಧಿಕಾರಿ-ಸಿಬಂದಿಯ ಒಂದು ತಂಡವನ್ನು ಆಯ್ಕೆ ಮಾಡಿ ತರಬೇತಿ ನೀಡಲಾಗುತ್ತಿದೆ. ಚೆನ್ನೈ ಮೂಲದ ಕಂಪೆನಿಯೊಂದರ ಅಧಿಕಾರಿಗಳು ಮತ್ತು ಪ್ರತಿಷ್ಠಿತ ಕಾಲೇಜೊಂದರ ಪ್ರಾಧ್ಯಾಪಕರು ಎಂಟು ತಿಂಗಳುಗಳಿಂದ  ಇವರಿಗೆ ಹಂತ-ಹಂತವಾಗಿ ತರಬೇತಿ ನೀಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈಗ ಆನ್‌ಲೈನ್‌ ವಂಚನೆಗಳು, ಅವ್ಯವ ಹಾರಗಳು ಹೆಚ್ಚುತ್ತಿವೆ. ಎಷ್ಟೇ ಜಾಗ್ರತೆ ವಹಿಸಿದರೂ ಡೇಟಾಗಳು   ಹ್ಯಾಕರ್‌ಗಳ ಮೂಲಕ  ವಂಚಕರ ಕೈ ಸೇರುತ್ತಿವೆ. ಜತೆಗೆ ಉಗ್ರ ಸಂಘಟನೆಗಳು ಕೂಡ ಆನ್‌ಲೈನ್‌, ಆ್ಯಪ್‌ಗಳು, ವೆಬ್‌ಸೈಟ್‌ಗಳ  ಮೂಲಕವೇ  ರಾಜ್ಯದ ವಿವಿಧೆಡೆ ಅಕ್ರಮ ಚಟುವಟಿಕೆಗಳನ್ನು ನಡೆಸಲು ಮುಂದಾಗುತ್ತಿದ್ದು, ತಮ್ಮ ಜಾಲವನ್ನು ವಿಸ್ತರಿಸಿಕೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ ಐಎಸ್‌ಡಿಗೆ ಆಧುನಿಕ ತಂತ್ರಜ್ಞಾನ ಬಳಕೆ ಅತ್ಯಂತ ಮುಖ್ಯವಾಗಿದೆ.  ಭವಿಷ್ಯದಲ್ಲಿ ಎದುರಾಗುವ ಆನ್‌ಲೈನ್‌ ಅಪರಾಧಗಳನ್ನು ಮಟ್ಟಹಾಕಲು ಐಎಸ್‌ಡಿ ಸನ್ನದ್ಧವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ತರಬೇತಿ ಬಗ್ಗೆ :

Advertisement

ಬ್ಲ್ಯಾಕ್‌ ಚೈನ್‌ ಟೆಕ್ನಾಲಜಿ ಎಂಬುದು ಅಂತಾರಾಷ್ಟ್ರೀಯ ತಂತ್ರಜ್ಞಾನ. ಈ ಮೂಲಕ ದತ್ತಾಂಶಗಳನ್ನು ಬಹಳ ರಹಸ್ಯವಾಗಿ ಇಡಬಹುದು.  ಒಬ್ಬ ವ್ಯಕ್ತಿಯೇ ಇದನ್ನು ನಿರ್ವಹಿಸಲು ಸಾಧ್ಯವಿಲ್ಲ.  ಒಂದು ನಿರ್ದಿಷ್ಟ ಗುಂಪಿನ ಪ್ರತಿಯೊಬ್ಬ ಸದಸ್ಯನು ನಿರ್ವಹಿಸಬಹುದಾಗಿದೆ. ಹೀಗಾಗಿ ಇದೊಂದು ವಿಕೇಂದ್ರಿಕರಣ ತಂತ್ರಜ್ಞಾನವಾಗಿದೆ. ಈ ಮೂಲಕ ಡಿಜಿಟಲ್‌ ಕರೆನ್ಸಿಗಳು ಮತ್ತು ಕೆಲವೊಂದು ವೆಬ್‌ಸೈಟ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದು ಮುಖ್ಯ. ಈ ಹಿನ್ನೆಲೆಯಲ್ಲಿ ಆನ್‌ಲೈನ್‌ ಅಪರಾಧಗಳ ಪತ್ತೆಗಾಗಿ ಐಎಸ್‌ಡಿ ಅಧಿಕಾರಿಗಳಿಗೆ ಬ್ಲಾಕ್‌ಚೈನ್‌ ಜತೆಗೆ ಮೆಷಿನ್‌ ಲರ್ನಿಂಗ್‌, ಆರ್ಟಿಫಿಷಿಯಲ್‌ ಇಂಟಲಿಜೆನ್ಸಿ, ಡಿಪ್‌ ಲರ್ನಿಂಗ್‌ ಮತ್ತು ಡಾರ್ಕ್‌ವೆಬ್‌, ಡಿಪ್‌ವೆಬ್‌, ಫೈನಾನ್ಶಿಯಲ್‌, ಸೈಬರ್‌ಕ್ರೈಂ ಹಾಗೂ ಬಿಟ್‌ಕಾಯಿನ್‌, ಕ್ರಿಪ್ಟೋ ಕರೆನ್ಸಿ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಈಗಾಗಲೇ ಮೂರು ಹಂತದಲ್ಲಿ ತರಬೇತಿ ಮುಕ್ತಾಯಗೊಂಡಿದ್ದು, ಮುಂದೆಯೂ ನಿರಂತರವಾಗಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next