ಕೆಜಿಎಫ್: ಪೊಲೀಸ್ ಇಲಾಖೆ ವತಿಯಿಂದ ಸೈಬರ್ ಕಳ್ಳರ ಬಗ್ಗೆ ಎಷ್ಟೇ ಎಚ್ಚರಿಕೆ ನೀಡಿದರೂ ವಂಚನೆ ಪ್ರಕರಣಗಳು ನಿಲ್ಲುತ್ತಿಲ್ಲ. ಆನ್‌ಲೈನ್ ವಂಚಕರು ತಾಲೂಕಿನ ಇಬ್ಬರು ವ್ಯಕ್ತಿಗಳನ್ನು ಖೆಡ್ಡಾಕ್ಕೆ ಕೆಡವಿ ಬರೋಬ್ಬರಿ 48.5 ಲಕ್ಷ ರೂ. ಲಪಟಾಯಿಸಿದ್ದಾರೆ.
ತಾಲೂಕಿನ ಬೇತಮಂಗಲ ಹೋಬಳಿಯ ನೆರ್ನಹಳ್ಳಿ ಗ್ರಾಮದ ಸರ್ವೇ ನಂಬರ್ 71/ಪಿ3ರ ಜಮೀನಿನಲ್ಲಿ ಭಾರತ್ ಪೆಟ್ರೋಲಿಯಂ ಪೆಟ್ರೋಲ್ ಬಂಕ್ ಡೀಲರ್ ಶಿಪ್‌ಗಾಗಿ ವ್ಯಕ್ತಿಯೊಬ್ಬರು ಕಳೆದ ಒಂದು ವರ್ಷದ ಹಿಂದೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿಕೊಂಡಿದ್ದರು ಎನ್ನಲಾಗಿದೆ.
ದೂರುದಾರ ರೈತರ ಮೊಬೈಲ್‌ಗೆ ಸೆ.14ರಂದು 9966906952 ಮೊಬೈಲ್ ಸಂಖ್ಯೆಯಿಂದ ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿ, “ಮಹಾರಾಷ್ಟ್ರದ ಭಾರತ್ ಪೆಟ್ರೋಲಿಯಂ ಮುಖ್ಯ ಕಚೇರಿಯಿಂದ ಕರೆ ಮಾಡುತ್ತಿರುವುದಾಗಿ’ ತಿಳಿಸಿದ್ದಾನೆ.
ಬಳಿಕ “ಈ ಹಿಂದೆ ನೀವು ಪೆಟ್ರೋಲ್ ಬಂಕ್‌ಗಾಗಿ ಅರ್ಜಿ ಸಲ್ಲಿಸಿದ್ದು, ನಿಮ್ಮ ಹೆಸರಿಗೆ ಪೆಟ್ರೋಲ್ ಬಂಕ್ ಪರವಾನಗಿ ಸಿಕ್ಕಿದೆ. ಅರ್ಜಿ ಶುಲ್ಕ, ಡೀಲರ್‌ಶಿಪ್ ಸರ್ಟಿಫಿಕೇಟ್, ಎನ್‌ಒಸಿ ಸರ್ಟಿಫಿಕೇಟ್, ಸೆಕ್ಯೂರಿಟಿ ಡೆಪಾಸಿಟ್, ಇನ್ಶೂರೆನ್ಸ್ ಹಾಗೂ ಇನ್ನಿತರ ವೆಚ್ಚಗಳಿಗಾಗಿ ದುಡ್ಡು ಕಟ್ಟಬೇಕು’ ಎಂದು ನಂಬಿಸಿದ್ದಾನೆ. ಬಳಿಕ ದೂರುದಾರರು ರಾಬರ್ಟ್‌ಸನ್‌ಪೇಟೆಯ ಕರೂರು ವೈಶ್ಯ ಬ್ಯಾಂಕ್ ಖಾತೆಯಿಂದ ಸೆ.14ರಿಂದ ನ.22ರವರೆಗೆ ಹಂತ ಹಂತವಾಗಿ 30 ಬಾರಿ ಹಣ ಜಮಾ ಮಾಡಿದ್ದಾರೆ.
ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಐಡಿಎಫ್‌ಬಿ ಬ್ಯಾಂಕ್ ಖಾತೆ ಸಂಖ್ಯೆ 10149012923, ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆ ಸಂಖ್ಯೆ 50100656780581 ಮತ್ತು ಐಡಿಎಫ್‌ಸಿ ಬ್ಯಾಂಕ್ ಖಾತೆ ಸಂಖ್ಯೆ 10151616386 ಈ ಖಾತೆಗಳಿಗೆ ಒಟ್ಟು 41.73 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಪೆಟ್ರೋಲ್ ಬಂಕ್ ಹೆಸರಿನಲ್ಲಿ ತಮಗೆ ವಂಚನೆಯಾಗಿದ್ದು, ಮೋಸಗಾರರನ್ನು ಪತ್ತೆ ಹಚ್ಚಿ ತಮ್ಮ ದುಡ್ಡನ್ನು ವಾಪಸ್ ಕೊಡಿಸುವಂತೆ ಕೆಜಿಎಫ್ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.
ಇದೇ ರೀತಿ ಗ್ಯಾಸ್ ಬಂಕ್ ಡೀಲರ್‌ಶಿಪ್‌ಗಾಗಿ ಕೆಜಿಎಫ್ ಪೊಲೀಸ್ ಜಿಲ್ಲಾ ವ್ಯಾಪ್ತಿಯ ದೊಡ್ಡಪೊನ್ನಾಂಡಹಳ್ಳಿ ವ್ಯಕ್ತಿಯೊಬ್ಬರು ಅಕ್ಟೋಬರ್ ಒಂದರಿಂದ ನವೆಂಬರ್ 25ರ ವರೆಗೆ ಒಟ್ಟು 6.69 ಲಕ್ಷ ರೂ. ಜಮೆ ಮಾಡಿ ಮೋಸ ಹೋಗಿದ್ದಾರೆ. ಬಳಿಕ ಕರೆ ಮಾಡಿರುವವ ಸಂಪರ್ಕಕ್ಕೆ ಸಿಕ್ಕಿಲ್ಲ. ಇದರಿಂದ ದಿಕ್ಕು ತೋಚದಂತಾಗಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.
ಆನ್‌ಲೈನ್‌ನಲ್ಲಿ ಹಣವನ್ನು ಜಮೆ ಮಾಡಿ ಎಂದು ಬರುವ ಯಾವುದೇ ಲಿಂಕ್ ನಂಬಬಾರದು. ಗೂಗಲ್‌ನಲ್ಲಿ ಬರುವ ಲಿಂಕ್‌ಗಳೆಲ್ಲವೂ ನೈಜವಾಗಿರುವುದಿಲ್ಲ. ಹಣವನ್ನು ಜಮೆ ಮಾಡುವ ಮುನ್ನ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು. ಆನ್‌ಲೈನ್ ವಂಚನೆಗಳಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. –
ಶಾಂತರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕೆಜಿಎಫ್
-ನಾಗೇಂದ್ರ ಕೆ.