ಬೆಂಗಳೂರು: ಮುಂಬೈ ಕ್ರೈಂ ಬ್ರಾಂಚ್ ಪೊಲೀಸರ ಸೋಗಲ್ಲಿ ಸಾರ್ವಜನಿಕರಿಗೆ ಕರೆ ಮಾಡಿ ನಿಮ್ಮ ಹೆಸರಿನಲ್ಲಿ ಫೆಡೆಕ್ಸ್ ಕೋರಿಯರ್‌ನಲ್ಲಿ ಥೈಲ್ಯಾಂಡ್‌ಗೆ ಅಕ್ರಮವಾಗಿ ಡ್ರಗ್ಸ್ ಪೂರೈಕೆಯಾಗುತ್ತಿದೆ ಎಂದು ಸುಳ್ಳು ಹೇಳಿ ತಮ್ಮ ಬ್ಯಾಂಕ್ ಖಾತೆಗಳಿಗೆ ಲಕ್ಷಾಂತರ ರೂ. ಹಾಕಿಸಿ ವಂಚಿಸುತ್ತಿದ್ದ 8 ಮಂದಿ ಸೈಬರ್ ಕ್ರೈಂ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ವಸೀಂ, ಹಬೀಬುಲ್ಲ, ನಿಝಾಮುದ್ದೀನ್, ಮುಶ್ರಫ್ ಖಾನ್, ನೂರುಲ್ಲ ಖಾನ್, ಮೊಹಮದ್ ಉಮರ್, ಸೈಯದ್ ಅಹಮ್ಮದ್, ಸೈಯದ್ ಹುಸೇನ್ ಬಂಧಿತರು. 13.17 ಲಕ್ಷ ರೂ., ವಿವಿಧ ಬ್ಯಾಂಕ್ ಖಾತೆಯಲ್ಲಿದ್ದ 19 ಲಕ್ಷ ರೂ. ನಗದು, 148 ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಲಾಗಿದೆ. ಕೃತ್ಯಕ್ಕೆ ಬಳಸಿದ 11 ಮೊಬೈಲ್ ಫೋನ್, 4,500 ರೂ. ಮೌಲ್ಯದ ಯುಎಸ್‌ಟಿಡಿ, ಚೆಕ್‌ಬುಕ್, ಪಾಸ್ ಬುಕ್, ಎಟಿಎಂ ಕಾರ್ಡ್‌ಗಳು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ಬಂಧನದಿಂದ ಎನ್‌ಸಿಆರ್‌ಬಿ ಪೋರ್ಟಲ್‌ನಲ್ಲಿ ದಾಖಲಾಗಿದ್ದ 75 ಸೈಬರ್ ವಂಚನೆಯ ಪ್ರಕರಣಗಳು ಪತ್ತೆಯಾಗಿದೆ. ಬೆಂಗಳೂರು ನಗರ ಉತ್ತರ ವಿಭಾಗದ ಸಿಇಎನ್ ಸೈಂ ಪೊಲೀಸ್ ಠಾಣೆಯ 2 ಪ್ರಕರಣಗಳು ಬೆಳಕಿಗೆ ಬಂದಿದೆ.
ಆರೋಪಿಗಳು ಮುಂಬೈ ಪೊಲೀಸರ ಸೋಗಿನಲ್ಲಿ ಸಾರ್ವಜನಿಕರಿಗೆ ವಾಟ್ಸ್‌ಆ್ಯಪ್ ಕರೆ ಮಾಡಿ ಫೆಡೆಕ್ಸ್ ಕೋರಿಯರ್‌ನಲ್ಲಿ ನಿಮ್ಮ ಹೆಸರಿನಲ್ಲಿ ಥೈಲ್ಯಾಂಡ್‌ಗೆ ಡ್ರಗ್ಸ್ ಪಾರ್ಸೆಲ್ ಹೋಗುತ್ತಿದೆ. ಸಹಾಯ ಮಾಡುವುದಾಗಿ ನಂಬಿಸಿ ನಿಮ್ಮ ಬ್ಯಾಂಕ್ ಸ್ಟೇಟ್ ಮೆಂಟ್ ಪರಿಶೀಲಿಸಬೇಕೆಂದು ಹಂತ-ಹಂತವಾಗಿ ಲಕ್ಷಾಂತರ ರೂ. ದುಡ್ಡು ವರ್ಗಾಯಿಸಿಕೊಂಡು ಸಂಪರ್ಕಕ್ಕೆ ಸಿಗದೇ ವಂಚಿಸುತ್ತಿದ್ದರು.
1.8 ಕೋಟಿ ರೂ. ವಂಚನೆ: ಆರೋಪಿಗಳು ನ.10ರಂದು ಮಲ್ಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ವ್ಯಕ್ತಿಯೊಬ್ಬರಿಗೆ ವಾಟ್ಸ್ ಆ್ಯಪ್ ಕರೆ ಮಾಡಿ ತಾವು ಮುಂಬೈ ಕ್ರೈಂ ಬ್ಯಾಂಚ್ ಪೊಲೀಸರೆಂದು ಪರಿಚಯಿಸಿಕೊಂಡಿದ್ದರು. ನಿಮ್ಮ ಪತ್ನಿಯ ಹೆಸರಿನಲ್ಲಿ ಫೆಡೆಕ್ಸ್ ಕೊರಿಯರ್‌ನಲ್ಲಿ ಮುಂಬೈನಿಂದ ಥೈಲ್ಯಾಂಡ್ ದೇಶಕ್ಕೆ ಕಾನೂನು ಬಾಹಿರ 140 ಗ್ರಾಂ ಎಂಡಿಎಂಎ ಮಾದಕ ವಸ್ತುಗಳು, 4 ಅವಧಿ ಮುಗಿದಿರುವ ಪಾಸ್ ಪೋರ್ಟ್, 2.35 ಕೆ.ಜಿ. ಕ್ಲಾತ್, 2 ಪೆನ್‌ಡ್ರೈವ್, 1 ಲ್ಯಾಪ್‌ಟಾಪ್, ಕ್ರೆಡಿಟ್ ಕಾರ್ಡ್, ಬ್ಯಾಂಕ್ ದಾಖಲಾತಿಗಳು ಸಿಕ್ಕಿವೆ ಎಂದು ಆರೋಪಿಗಳು ಬೆದರಿಸಿದ್ದರು. ನಿಮ್ಮ ಹೆಸರಿನಲ್ಲಿ ಹಲವು ಬ್ಯಾಂಕ್ ಖಾತೆಗಳನ್ನು ತೆರೆದು ಅದರ ಮೂಲಕ ಮನಿ ಲಾಂಡರಿಂಗ್ ಆಗುತ್ತಿರುವ ಬಗ್ಗೆ ಮಾಹಿತಿ ಇದೆ. ಆದ ಕಾರಣ ನಿಮ್ಮ ಬ್ಯಾಂಕ್ ಖಾತೆಯನ್ನು ಆರ್.ಬಿ.ಐ ನವರು ಫ್ರೀಜ್ ಮಾಡುವ ಸಂಭವವಿದೆ. ನಿಮ್ಮ ಬ್ಯಾಂಕ್ ಸ್ಟೇಟ್‌ಮೆಂಟ್ ಅನ್ನು ತನಿಖೆಗಾಗಿ ವಿಚಾರಿಸಬೇಕಾಗಿದೆ ಎಂದು ವ್ಯಕ್ತಿಯ ಬ್ಯಾಂಕ್ ಖಾತೆ ಮಾಹಿತಿ ಪಡೆದಿದ್ದರು.
ನಂತರ ತನಿಖಾ ವಿಚಾರಣಾ ಸಲುವಾಗಿ ನೀವು ಮುಂಗಡ ಹಣ ನೀಡಬೇಕು. ತನಿಖೆ ಮುಗಿದ ನಂತರ ಆ ಮೊತ್ತವನ್ನು ವಾಪಸ್ಸು ತಮ್ಮ ಖಾತೆಗೆ ಜಮಾ ಮಾಡುತ್ತೇವೆ ಎಂದು ನಂಬಿಸಿದ್ದರು. ಆರೋಪಿಗಳನ್ನು ಅಸಲಿ ಪೊಲೀಸರೆಂದು ನಂಬಿದ ವ್ಯಕ್ತಿಯು ಎಚ್‌ಡಿಎಫ್ಸಿ ಬ್ಯಾಂಕ್ ಖಾತೆಯಿಂದ 66 ಲಕ್ಷ ರೂ. ಜಮೆ ಮಾಡಿದ್ದರು. ನಂತರ ನೀವು ಕೊಟ್ಟಿರುವ ದುಡ್ಡು ಹಿಂತಿರುಗಿಸಲು ಇನ್ನಷ್ಟು ದುಡ್ಡು ಜಮೆ ಮಾಡುವಂತೆ ಸೂಚಿಸಿದ್ದರು. ಅದರಂತೆ ಆ ವ್ಯಕ್ತಿ ಪೈನಾನ್ಸ್ ಬ್ಯಾಂಕ್ ಖಾತೆಯಿಂದ 42ಲಕ್ಷ ರೂ. ಸೇರಿ ಒಟ್ಟು 1.8 ಕೋಟಿ ರೂ. ವರ್ಗಾಯಿಸಿಕೊಂಡಿದ್ದರು. ಬಳಿಕ ಅಸಲು ಹಣವನ್ನೂ ಹಿಂತಿರುಗಿಸದೇ, ಸಂಪರ್ಕಕ್ಕೂ ಸಿಗದೇ ವಂಚಿಸಿದ್ದರು.
ಕಳ್ಳರ ಸುಳಿವು ಕೊಟ್ಟ ಸಿಸಿ ಕ್ಯಾಮೆರಾ: ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯ ಅಧಿಕಾರಿಗಳು ಸಿಇಎನ್ ಕ್ರೈಂ ಠಾಣೆ ಪೊಲೀಸರು ನೇತೃತ್ವದಲ್ಲಿ ಒಂದು ವಿಶೇಷ ತಂಡ ರಚಿಸಿದ್ದರು. ದೂರುದಾರರ ಖಾತೆ ಯಿಂದ ದುಡ್ಡು ವರ್ಗಾವಣೆಯಾದ ಬ್ಯಾಂಕ್ ಖಾತೆ ಯಾವ ಪ್ರದೇಶದಲ್ಲಿದೆ ಎಂಬುದನ್ನು ಪತ್ತೆ ಹಚ್ಚಿದ್ದರು. ಆರೋಪಿಗಳು ಹಣವನ್ನು ದಾವಣಗೆರೆಯ ಆರ್‌ಬಿಎಲ್ ಬ್ಯಾಂಕ್‌ನಲ್ಲಿ ವಿತ್ ಡ್ರಾ ಮಾಡಿರುವ ಸುಳಿವು ಸಿಕ್ಕಿತ್ತು. ದಾವಣ ಗೆರೆಗೆ ತೆರಳಿದ ಪೊಲೀಸರ ಒಂದು ತಂಡವು ಬ್ಯಾಂಕ್‌ನ ಸಿಸಿಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿ ದಾಗ ಆರೋಪಿಗಳ ಮುಖಚಹರೆ ಪತ್ತೆಯಾ ಗಿತ್ತು. ಈ ಆಧಾರಗಳ ಮೇಲೆ ಆರೋಪಿಗಳಿಗಾಗಿ ಶೋಧ ನಡೆಸಿ ಬಂಧಿಸಿದ್ದಾರೆ.