ಹೊಸದಿಲ್ಲಿ : “ಸೈಬರ್ ಸ್ಪೇಸ್ ಎಂಬುದು ಭಯೋತ್ಪಾದನೆಯ ಮತ್ತು ಅಮಾಯಕರ ಬುದ್ಧಿ ಪಲ್ಲಟಿಸುವ ಅಂಗಣವಾಗಬಾರದು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಂದು ಗುರುವಾರ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಆರಂಭಗೊಂಡ ಎರಡು ದಿನಗಳ “ಐದನೇ ಜಾಗತಿಕ ಸೈಬರ್ ಸ್ಪೇಸ್ ಸಮಾವೇಶ’ವನ್ನು ಉದ್ಘಾಟಿಸಿ ಹೇಳಿದರು.
ಭಾರತದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಸೈಬರ್ ಸ್ಪೇಸ್ ಜಾಗತಿಕ ಸಮಾವೇಶದಲ್ಲಿ ಮೋದಿ, ‘ಈಗಿನ ಜಗತ್ತಿನಲ್ಲಿ ತಾಂತ್ರಿಕತೆಗೆ ಅತ್ಯಧಿಕ ಮಹತ್ವವಿದ್ದು ಸೈಬರ್ ಜ್ಞಾನಿಗಳು ಈ ರಂಗವನ್ನು ಭಯೋತ್ಪಾದಕರಿಂದ ಕಾಪಾಡುವಲ್ಲಿ ಮುಖ್ಯ ಪಾತ್ರವಹಿಸಬೇಕು’ ಎಂದು ಕರೆ ನೀಡಿದರು.
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ದೊಡ್ಡ ಹೆಸರಿದೆ. ನಮ್ಮ ಅನೇಕ ಐಟಿ ಕಂಪೆನಿಗಳು ವಿಶ್ವಮಟ್ಟದಲ್ಲಿ ಮುಂಚೂಣಿಯಲ್ಲಿವೆ.ಸುಲಲಿತ ಆಡಳಿತೆ ಮತ್ತು ದಕ್ಷ ಸೇವೆಯನ್ನು ಡಿಜಿಟಲ್ ಟೆಕ್ನಾಲಜಿ ಸುಲಭ ಸಾಧ್ಯಗೊಳಿಸಿದೆ. ಡಿಜಿಟಲ್ ಕ್ಷೇತ್ರವು ಇಂದು ಶಿಕ್ಷಣದಿಂದ ಆರೋಗ್ಯದ ವರೆಗಿನ ಎಲ್ಲ ರಂಗಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ’ ಎಂದು ಮೋದಿ ಭಾರತೀಯ ಐಟಿ ರಂಗವನ್ನು ಹೊಗಳಿದರು.
ಇಂದಿನ ಪರಿಸ್ಥಿತಿಯಲ್ಲಿ ಎಲ್ಲ ರಾಷ್ಟ್ರಗಳು ಸೈಬರ್ ಸ್ಪೇಸ್ ಭಯೋತ್ಪಾದನೆಯ ಅಂಗಣವಾಗದಂತೆ ಎಚ್ಚರಿಕೆ ವಹಿಸಬೇಕು. ವಿಶ್ವದೆಲ್ಲೆಡೆಯ ಉಗ್ರರು ಇಂದು ಸೈಬರ್ ಟೆಕ್ನಾಲಜಿ ಮೂಲಕ ಅಮಾಯಕರ ಬುದ್ಧಿ ಪಲ್ಲಟಿಸಿ ಅವರನ್ನು ಉಗ್ರರನ್ನಾಗಿ ತರಬೇತು ಮಾಡುತ್ತಿದ್ದಾರೆ.ಇದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಇದನ್ನು ಎಲ್ಲ ರಾಷ್ಟ್ರಗಳು ಒಗ್ಗೂಡಿ ದೃಢ ಸಂಕಲ್ಪದಿಂದ ಮಟ್ಟ ಹಾಕಬೇಕು’ ಎಂದು ಪ್ರಧಾನಿ ಮೋದಿ ಹೇಳಿದರು.
ಈ ಜಾಗತಿಕ ಸೈಬರ್ ಸಮಾವೇಶದಲ್ಲಿ 124 ದೇಶಗಳು, ಹಾಗೂ 31 ದೇಶಗಳ ಸಚಿವ ಮಟ್ಟದ ನಿಯೋಗಗಳು ಪಾಲ್ಗೊಳ್ಳುತ್ತಿವೆ. ಲಂಕೆಯ ಪ್ರಧಾನಿ ರಾಣಿಲ್ ವಿಕ್ರಮಸಿಂಘ ಅವರು ಕೂಡ ಭಾಗವಹಿಸುತ್ತಿದ್ದಾರೆ.