Advertisement

ಸೈಬರ್‌ ವಂಚಕರು ಪೊಲೀಸರ ಬಲೆಗೆ

12:05 PM Apr 17, 2018 | Team Udayavani |

ಬೆಂಗಳೂರು: ಉದ್ಯಮ ಆರಂಭಕ್ಕೆ ವಿದೇಶಿ ಉತ್ಪನ್ನಗಳ ಪೂರೈಕೆ, ದುಬಾರಿ ಮೌಲ್ಯದ ಉಡುಗೊರೆ ಕಳುಹಿಸುವ ನೆಪದಲ್ಲಿ “ಆನ್‌ಲೈನ್‌’ ಮೂಲಕ ಬ್ಯಾಂಕ್‌ ಖಾತೆಗೆ ಹಣ ಹಾಕಿಸಿಕೊಂಡು ಹಲವು ಮಂದಿಯಿಂದ ಲಕ್ಷಾಂತರ ರೂ. ಲಪಟಾಯಿಸಿದ್ದ ಜಾಲವೊಂದನ್ನು ನಗರ ಸೈಬರ್‌ ಕ್ರೈಂ ಪೊಲೀಸರು ಬಯಲಿಗೆಳೆದಿದ್ದಾರೆ.

Advertisement

ವಂಚನೆಗೊಳಗಾದವರು ನೀಡಿದ ಪ್ರತ್ಯೇಕ ದೂರುಗಳ ಸಂಬಂಧ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರು, ಸಿನಿಮಾ ನಿರ್ಮಾಪಕರ ಪುತ್ರ, ಇಬ್ಬರು ವಿದೇಶಿಯರು ಸೇರಿದಂತೆ ಆರು ಜನರನ್ನು ಬಂಧಿಸಿದ್ದಾರೆ.

ಅಬಲೆ ಎಂಬ ಚಿತ್ರದ ನಿರ್ಮಾಪಕ ವಸಂತಕುಮಾರ್‌ ವಿ.ಗೋನಿ ಎಂಬುವವರ ಪುತ್ರ ಆಕಾಶ್‌ ವಿ.ಗೋನಿ (39), ಮುಂಬೈನ ಸುರೇಂದ್ರ ರಂಗದ್‌ (42), ಒಡಿಶಾದ ಚೇತನ್‌ ಶರ್ಮಾ (29), ಉತ್ತರ ಪ್ರದೇಶದ ಶಮೀಮ್‌ ಅಹಮದ್‌ (36), ಕಾಂಗೋ ರಾಷ್ಟ್ರದ ತುಬುಡಿ (25) ಹಾಗೂ ನೈಜಿರಿಯಾದ ಫಿಲಿಪ್‌ (30) ಬಂಧಿತರು. ಆರೋಪಿಗಳಿಂದ ಒಂದು ಕಾರು, 4 ಮೊಬೈಲ್‌ ಫೋನ್‌, 6 ಎಟಿಎಂ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೈಬರ್‌ ಕ್ರೈಂ ಪೊಲೀಸರು ತಿಳಿಸಿದ್ದಾರೆ.

ಪದವಿಧರನಾಗಿರುವ ಆಕಾಶ್‌, ಕೆಲ ವರ್ಷಗಳ ಹಿಂದೆ ಆನ್‌ಲೈನ್‌ ಕ್ರಿಮಿನಲ್‌ಗ‌ಳ ಜತೆ ಸೇರಿ ವಂಚನೆ ದಂಧೆಯಲ್ಲಿ ತೊಡಗಿಸಿಕೊಂಡಿದ್ದ. ಪ್ರಕರಣವೊಂದರ ಸಂಬಂಧ ಮಾರ್ಚ್‌ನಲ್ಲಿ ಶಮೀಮ್‌ ಅಹಮದ್‌ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಆಕಾಶ್‌ ಮುಂಬೈನಲ್ಲಿ ವಾಸ್ತವ್ಯ ಹೂಡಿ ಅಲ್ಲಿಂದಲೇ ಆನ್‌ಲೈನ್‌ ವಂಚನೆ ನಡೆಸುತ್ತಿದ್ದ ಮಾಹಿತಿ ಲಭ್ಯವಾಗಿತ್ತು. ಈ ಮಾಹಿತಿ ಆಧರಿಸಿ ಆಕಾಶ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಗಳು ಒಂದು ತಂಡವಾಗಿ ಕೆಲಸ ಮಾಡುತ್ತಿದ್ದು, ಹಲವು ವರ್ಷಗಳಿಂದ ಪರಿಚಿತರಾಗಿದ್ದಾರೆ. ಬೆಂಗಳೂರು, ಮುಂಬೈ ಸೇರಿದಂತೆ ವಿವಿಧ ನಗರಗಳಲ್ಲಿ ಸುತ್ತಾಡುತ್ತಾ ಸಾರ್ವಜನಿಕರ ಈ- ಮೇಲ್‌ ಐಡಿಗಳಿಗೆ ಉಡುಗೊರೆ, ಉದ್ಯಮದ ಅಮಿಷ ಒಡ್ಡಿ ತಮ್ಮ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದರು. ಹತ್ತಾರು ಬ್ಯಾಂಕ್‌ ಖಾತೆಗಳನ್ನು ಹೊಂದಿರುವ ಆರೋಪಿಗಳು, ಖಾತೆಗೆ ಹಣ ಜಮಾ ಆಗುತ್ತಿದ್ದಂತೆ ಕೆಲವೇ ನಿಮಿಷಗಳಲ್ಲಿ ಅದನ್ನು ಬೇರೆ ಖಾತೆಗೆ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದರು.

Advertisement

ಆದರೆ, ಹಣ ಪಾವತಿಸಿದ ಗ್ರಾಹಕರಿಗೆ ಯಾವುದೇ ಉತ್ಪನ್ನ ಅಥವಾ ಉಡುಗೊರೆ ನೀಡುತ್ತಿರಲಿಲ್ಲ. ಆರೋಪಿಗಳ ಬಂಧನದಿಂದ ಸದ್ಯ ಎರಡು ಪ್ರತ್ಯೇಕ ವಂಚನೆ ಪ್ರಕರಣಗಳು ಬೆಳಕಿಗೆ ಬಂದಿವೆ. ತನಿಖೆ ಮುಂದುವರಿದಿದ್ದು, ಆರೋಪಿಗಳು  ಇನ್ನೂ ಹಲವು ಮಂದಿಗೆ ವಂಚಿಸಿರುವ ಸಾಧ್ಯತೆಯಿದೆ. ಈ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ ಎಂದು ಸೈಬರ್‌ನ ಕ್ರೈಂ ವಿಭಾಗದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮಹಿಳೆಗೂ ವಂಚನೆ: ಪ್ರಕರಣದಲ್ಲಿ  ವಧು-ವರರ ವೇದಿಕೆಯಿಂದ ಪರಿಚಯವಾದ ಮಹಿಳೆಯೊಬ್ಬರನ್ನು ನೆಹಮತ್‌ ಹೆಸರಿನಲ್ಲಿ ಪರಿಚಯಿಸಿಕೊಂಡಿದ್ದ ತಂಡದ ಆರೋಪಿಯೊಬ್ಬ 2018ರ ಜ.3ರಂದು ಕರೆ ಮಾಡಿ, ನಾನು ಯುನೈಟೆಡ್‌ ಕಿಂಗ್‌ ಡಮ್‌ನಿಂದ ವಾಪಾಸ್‌ ಬರುತ್ತಿದ್ದು ವಿದೇಶಿ ಕರೆನ್ಸಿ ತರುತ್ತಿದ್ದೇನೆ.

ದೆಹಲಿ ವಿಮಾನ ನಿಲ್ದಾಣದಲ್ಲಿ ಸುಂಕ ಅಧಿಕಾರಿಗಳು ಅದನ್ನು ವಶಕ್ಕೆ ಪಡೆದಿದ್ದು, ವಿದೇಶಿ ಕರೆನ್ಸಿಯನ್ನು ಅಧಿಕಾರಿಗಳಿಂದ ಬಿಡಿಸಿಕೊಂಡು ಬರಲು 1.49 ಲಕ್ಷ ರೂ. ಬೇಕಿದೆ ಎಂದು  ನಂಬಿಸಿ ಮಹಿಳೆಯಿಂದ ತನ್ನ  ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದ. ಈ ಬಗ್ಗೆ ಮಹಿಳೆ ದೂರು ದಾಖಲಿಸಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

ಹರ್ಬಲ್‌ ಸೀಡ್ಸ್‌ ಹೆಸರಲ್ಲಿ 30 ಲಕ್ಷ ದೋಖಾ: ಭಾರಿ ಲಾಭ ಕೊಡುವ ಹರ್ಬಲ್‌ ಸೀಡ್ಸ್‌ ಉದ್ಯಮ ಆರಂಭಿಸುವಂತೆ ನಗರದ ಶ್ರೀಮಂತ ವ್ಯಕ್ತಿಯೊಬ್ಬರಿಗೆ ಡೇವಿಸ್‌ ಎಂಬ ಹೆಸರಿನಲ್ಲಿ ಆರೋಪಿಗಳು ಈ-ಮೇಲ್‌ ಕಳುಹಿಸಿದ್ದರು. ಅದನ್ನು ನಂಬಿದ ವ್ಯಕ್ತಿ ಈ-ಮೇಲ್‌ಗೆ ಪ್ರತಿಕ್ರಿಯಿಸಿದಾಗ ಮಾರುತ್ತರ ನೀಡಿದ್ದ ಆರೋಪಿಗಳು, ಭಾರತದಲ್ಲಿ ನಮಗೆ ಪರಿಚಯ ಇರುವ ಏಜೆಂಟರ ಮೂಲಕ ಮೊದಲ ಹಂತದಲ್ಲಿ ಸ್ವಲ್ಪ ಸ್ಯಾಂಪಲ್‌ ಖರೀದಿಸಿ ನೀಡುತ್ತೇವೆ ಎಂದು ನಂಬಿಸಿದ್ದರು.

ಕೆಲ ದಿನಗಳ ಬಳಿಕ ರಮೇಶ್‌ ಬಾಬು ಎಂಬ ಹೆಸರಿನಲ್ಲಿ ಆ ವ್ಯಕ್ತಿಗೆ ದೂರವಾಣಿ ಕರೆ ಮಾಡಿ, ಹರ್ಬಲ್‌ ಸೀಡ್ಸ್‌ ಸ್ಯಾಂಪಲ್‌ ಕಳುಹಿಸಲು ಮುಂಗಡವಾಗಿ ಹಣ ಪಾವತಿ ಮಾಡಬೇಕು ಎಂದು ಹೇಳಿ ಹಂತ ಹಂತವಾಗಿ 30 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದರು. ಈ ಕುರಿತು 2017ರ ಸೆ.11ರಂದು ಪ್ರಕರಣ ದಾಖಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next