ಬೆಂಗಳೂರು: ಈ ಮೊದಲು ಉಡುಗೊರೆ, ಓಟಿಪಿ, ಕೆವೈಸಿ, ಅಶ್ಲೀಲ ಫೋಟೋ, ವಿಡಿಯೋ ಸೇರಿ ವಿವಿಧ ಮಾದರಿಯಲ್ಲಿ ವಂಚನೆ ಮಾಡುತ್ತಿದ್ದ ಸೈಬರ್ ವಂಚಕರು, ಇದೀಗ ಹೊಸ ಮಾದರಿಯಲ್ಲಿ ಸಾರ್ವಜನಿಕರ ಹಣ ದೋಚುತ್ತಿದ್ದಾರೆ.
ಕೆಲ ವರ್ಷಗಳಿಂದ ಬೆಂಗಳೂರು ಸೇರಿ ದೇಶಾದ್ಯಂತ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಪ್ರತಿ ವರ್ಷ 10 ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿವೆ. ಅದರಿಂದ ಅಮಾಯಕರುು ಕೋಟ್ಯಂತರ ರೂ. ಕಳೆದುಕೊಳ್ಳುತ್ತಿದ್ದಾರೆ. ಈ ಮಧ್ಯೆ ಹೊಸ ಮಾದರಿಯ ಸೈಬರ್ ವಂಚನೆ ಸಾರ್ವಜನಿಕರು ಮಾತ್ರವಲ್ಲ, ಪೊಲೀಸರಿಗೂ ತಲೆನೋವಾಗಿದೆ.
ಸೈಬರ್ ವಂಚಕರು ರಿಜಿಸ್ಟರ್ಡ್ ಪೋಸ್ಟ್ ಮೂಲಕ ಜನರನ್ನು ವಂಚಿಸಲು ಮುಂದಾಗಿದ್ದಾರೆ. ಭಾರತೀಯ ಅಂಚೆಯ ಕೆಂಪು ಬಣ್ಣದ ರಿಜಿಸ್ಟರ್ಡ್ ಲಕೋಟೆ ನಿಮ್ಮಮನೆಗೆ ಬರುತ್ತದೆ. ಈ ಲಕೋಟೆ ತೆರೆದರೆ ಒಳಗೆ ಭಾರತ ಸರ್ಕಾರದ ಲಾಂಛನ ಇರುವ ರಿಜಿಸ್ಟರ್ಡ್ ಕೂಪನ್ ಇರುತ್ತದೆ ಮತ್ತು ಅಪ್ಲಿಕೇಶನ್ ಫಾರ್ಮ್ ಕೂಡ ಇರುತ್ತದೆ. ಕೂಪನ್ ಮೇಲೆ ಸ್ಕ್ರ್ಯಾಚ್ ಮಾಡಿ ವಾಹನ ಅಥವಾ ವಿವಿಧ ಮಾದರಿಯ ಉಡುಗೊರೆ ಗೆಲ್ಲಿ ಎಂದು ಇಂಗ್ಲಿಷ್ ಅಕ್ಷರಗಳಲ್ಲಿ ಬರೆದಿರುತ್ತದೆ.
ನಂತರ ಅದನ್ನು ಸ್ಕ್ರ್ಯಾಚ್ ಮಾಡಿದರೆ, ನೀವು 12.80 ಲಕ್ಷ ರೂ. ಹಣ ಗೆದ್ದಿದ್ದೀರಿ ಮತ್ತು ಅದರ ಕೆಳಗೆ ಒಂದು ಎಸ್‌ಎಂಎಸ್ ಕೋಡ್ ಕೂಡ ಇರುತ್ತದೆ. ಆ ಕೋಡ್ ಬಳಸಿದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಸೈಬರ್ ವಂಚಕರು ಕ್ಷಣಾರ್ಧದಲ್ಲಿ ದೋಚುತ್ತಾರೆ.
ಸ್ಕ್ಯಾನರ್‌ನಿಂದಲೂ ವಂಚನೆ: ವಂಚಕರು ಕಳುಹಿಸುವ ರಿಜಿಸ್ಟರ್ಡ್ ಲಕೋಟೆಯ ಒಂದು ಕಾಗದ ಪತ್ರದಲ್ಲಿ ಸ್ಕ್ಯಾನರ್ ಕೂಡ ಇರುತ್ತದೆ. ಅದನ್ನು ಸ್ಕ್ಯಾನ್ ಮಾಡಬೇಕು ಹಾಗೂ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬೇಕೆಂದು ಕೆಳ ಭಾಗದಲ್ಲಿ ಬರೆದಿರುತ್ತದೆ. ಒಂದು ವೇಳೆ ಸ್ಕ್ಯಾನ್ ಮಾಡಿದರೆ ಅಥವಾ ಸಹಾಯವಾಣಿ ನಂಬರ್‌ಗೆ ಕರೆ ಮಾಡಿದರೂ ನಿಮ್ಮ ಖಾತೆಯಲ್ಲಿನ ಹಣ ವಂಚಕರ ಪಾಲಾಗುತ್ತದೆ. ಹೀಗೆ ಸೈಬರ್ ವಂಚಕರು ಹೊಸ ವಂಚನೆಯ ವಿಧಾನವನ್ನು ಕಂಡು ಕೊಂಡಿದ್ದಾರೆ.
ಆದರಿಂದ ಸಾರ್ವಜನಿಕರು ತಮ್ಮ ಕಚೇರಿ ಅಥವಾ ಮನೆಗೆ ಯಾವುದೇ ರಿಜಿಸ್ಟರ್ಡ್ ಪೋಸ್ಟ ಬಂದಾಗ ಪರಿಶೀಲಿಸಿ ನಂತರ ಅದರ ಸೂಚನೆಗಳನ್ನು ಪಾಲಿಸಬೇಕು ಎಂದು ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.
ಪೊಲೀಸರ ವಾಟ್ಸ್‌ಆ್ಯಪ್‌ನಲ್ಲಿ ಸ್ಟೇಟಸ್: ಕುರಿತು ವಿಡಿಯೋವನ್ನು ರಾಜ್ಯ ಪೊಲೀಸರು ತಮ್ಮ ವಾಟ್ ಆ್ಯಪ್ ಸ್ಟೇಟಸ್‌ನಲ್ಲಿ ಪೋಸ್ಟ್ ಮಾಡಿಕೊಂಡು, ಹೊಸ ಮಾದರಿಯಲ್ಲಿ ಸೈಬರ್ ವಂಚನೆ ಕಂಡು ಬರುತ್ತಿದ್ದು, ಸಾರ್ವಜನಿಕರು ಜಾಗೃತಿ ವಹಿಸಬೇಕು ಎಂದು ಕೋರಿಕೊಂಡಿದ್ದಾರೆ.