ಉಡುಪಿ: ಕೋಟದ ಕಾರ್ಕಡ ಗ್ರಾಮದ 44 ವರ್ಷದ ವ್ಯಕ್ತಿಯೊಬ್ಬರಿಗೆ ಸೈಬರ್ ವಂಚಕರು ಮೇಕ್ ಮೈ ಟ್ರಿಪ್ ಹೆಸರಿನಲ್ಲಿ ಆನ್ ಲೈನ್ ವಂಚನೆ ಎಸಗಿ ಬರೋಬ್ಬರಿ 23 ಲಕ್ಷ ರೂ.ಗೂ ಹೆಚ್ಚು ಹಣದ ವಂಚನೆ ಎಸಗಿದ್ದಾರೆ.
ಮೊಬೈಲ್‌ನ ಟೆಲಿಗ್ರಾಮ್ ಆಪ್‌ಗೆ ಜುಲೈ 03 ರಂದು ಮಹಿಳೆಯೊಬ್ಬರ ಹೆಸರಿನ ಖಾತೆಯಿಂದ make my trip ಎಂಬ ಸಂದೇಶ ಬಂದಿದ್ದು, ಆಸಕ್ತಿ ಇದ್ದಲ್ಲಿ ಭಾಗವಹಿಸುವಂತೆ ಹೇಳಲಾಗಿದೆ. ವಂಚನೆಗೊಳಗಾದ ವ್ಯಕ್ತಿ ಆನ್ಲೈನ್ ಬುಕಿಂಗ್ ಮಾಡುವ ಉದ್ದೇಶದಿಂದ ಅದರಲ್ಲಿ ಮುಂದುವರಿದು ವಂಚಕರು ಕಳುಹಿಸಿದ ವೆಬ್ಸೈಟ್ ಲಿಂಕ್‌ನಲ್ಲಿ ಕೋಡ್ ಬಳಸಿ ಜಾಯಿನ್ ಆಗಿದ್ದಾರೆ.
ಮೇಕ್ ಮೈ ಟ್ರಿಪ್ ನಲ್ಲಿ ಬುಕಿಂಗ್ ಮಾಡಿ, ಅದರ ಮೊತ್ತವನ್ನು ಮೊದಲಿಗೆ ಪಾವತಿ ಮಾಡಿದರೆ ಬುಕಿಂಗ್ ಆಧರಿಸಿ ಕಮಿಷನ್ ಸೇರಿ ಸಂದಾಯ ಮಾಡಿದ ಮೊತ್ತವು ವಾಲೆಟ್ ಅಕೌಂಟ್ ನಲ್ಲಿ ಶೋ ಆಗುವುದಾಗಿ ವಂಚಕರು ಹೇಳಿದ್ದಾರೆ. ಅದರಂತೆ ಜೂನ್ 18 ರಂದು ರೂ. 11 ಸಾವಿರ 19 ರಂದು 22 ಸಾವಿರ 20 ರಂದು 47,825 ರೂ., 21 ರಂದು 1,09,178 ರೂ., 24 ರಂದು 2,39,587 ರೂ., 25 ರಂದು 6,05,081 ರೂ., 26 ರಂದು 8,90,000 ರೂ. ,27 ರಂದು 4,64,610 ರೂ. ರಂತೆ ಹಣವನ್ನು ಸೈಬರ್ ವಂಚಕರು ಹಂತ ಹಂತವಾಗಿ ಪಾವತಿಸುವಂತೆ ಹೇಳಿದ್ದಾರೆ.
ಬ್ಯಾಂಕ್ ಗಳ ಅಂಕೌಂಟ್ ನಿಂದ ಹಂತ ಹಂತವಾಗಿ ಅವರು ಹೇಳಿದಷ್ಟು ಹಣವನ್ನು ಪಾವತಿ ಮಾಡಿದ್ದು, 30 ನೇ ಟಾಸ್ಕ್ ಮುಕ್ತಾಯ ಮಾಡಿದ ಬಳಿಕ ಹಣ ಹಿಂದಿರುಗಿಸುವಂತೆ ಸಂದೇಶ ಕಳುಹಿಸಿದಾಗ ಸರಕಾರದ ನಿಯಮಾನುಸಾರ ಗರಿಷ್ಠ ಮೊತ್ತದ ಅರ್ಧ ಹಣ ಅಂದರೆ 16,05,231 ರೂ. ಮೊತ್ತವನ್ನು ಮತ್ತೆ ಪಾವತಿ ಮಾಡಬೇಕು, ಇಲ್ಲವಾದಲ್ಲಿ ಈವರೆಗೆ ಸಂದಾಯ ಮಾಡಿದ ಎಲ್ಲಾ ಹಣವೂ ಲ್ಯಾಪ್ಸ್ ಆಗುತ್ತದೆ ಎಂಬುದಾಗಿ ಹೇಳಿದ್ದಾರೆ.
ಇನ್ನು ಹೆಚ್ಚಿಗೆ ಹಣ ಪಾವತಿ ಮಾಡಲು ಸಾಧ್ಯವಿಲ್ಲವೆಂದು ಹೇಳಿದಾಗ, ಜುಲೈ 10ರ ಅಂತಿಮ ಗಡುವು ನೀಡಿದ್ದು, ಆ ದಿನ ಒಳಗಾಗಿ ಹಣ ಸಂದಾಯ ಮಾಡದೇ ಇದ್ದಲ್ಲಿ Business Transaction Wallet Laps ಆಗುವುದಾಗಿ ಹೇಳಿದ್ದಾರೆ.
ಟೆಲಿಗ್ರಾಮ್ ಆಪ್ ನಲ್ಲಿ ಹಂತಹಂತವಾಗಿ ಪುಸಲಾಯಿಸಿ ಒಟ್ಟು 23,71,456 ರೂ. ಹಣವನ್ನು ತಮ್ಮ ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡು ವಂಚನೆ ಮಾಡಲಾಗಿದೆ. ಈ ಕುರಿತು ಕೋಟ ಠಾಣಾ ಪೊಲೀಸರು IT Act ರಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.