ಉಡುಪಿ: ತಂತ್ರಜ್ಞಾನ ಅಭಿವೃದ್ಧಿ ಹೊಂದುತ್ತಿರುವಂತೆ ಅಪರಾಧ ಪ್ರಕರಣಗಳು ಕೂಡ ಅಧಿಕವಾಗುತ್ತಿವೆ. ಕರಾವಳಿ ಭಾಗ ಸಹಿತ ಬೆಂಗಳೂರು ಮಹಾನಗರಗಳಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿರುವುದು ಕಳವಳಕಾರಿ. ಇದು ಪೊಲೀಸ್ ಇಲಾಖೆಗೂ ಸವಾಲಿನ ಕೆಲಸ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಹೇಳಿದರು.
ಉಡುಪಿಯ ಲೆಕ್ಕಪರಿಶೋಧಕರ ಸಂಸ್ಥೆ ಶಾಖೆಯಲ್ಲಿ ಬುಧವಾರ ನಡೆದ ಸೈಬರ್ ಕ್ರೈಂ ಮತ್ತು ಅಪರಾಧ ತಡೆ ರಕ್ಷಣೆಯ ಬಗ್ಗೆ ನಡೆದ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ನೆಟ್ ಬ್ಯಾಂಕಿಂಗ್, ಆ್ಯಪ್‌ಗ್ಳ ಬಳಕೆ ಹಾಗೂ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಇಂತಹ ಘಟನೆ ಗಳು ನಡೆಯುತ್ತಿವೆ. ದಿನನಿತ್ಯದ ಅಪರಾಧ ಚಟುವಟಿಕೆಗಳಿಗಿಂತಲೂ ಸೈಬರ್ ಅಪರಾಧಗಳು ಹೆಚ್ಚಾಗುತ್ತಿದ್ದು, ಪೊಲೀಸ್ ಇಲಾಖೆ ಕೂಡ ಈ ಬಗ್ಗೆ ಜಾಗೃತವಾಗಿದೆ. ಅನಾಮಧೇಯ ಮೊಬೈಲ್ ಸಂಖ್ಯೆಗಳು, ವಾಹನಗಳ ನಕಲಿ ನೋಂದಣಿಗಳನ್ನು ಇಂತಹ ಚಟುವಟಿಕೆಗಳಿಗೆ ಉಪಯೋಗಿಸ ಲಾಗುತ್ತಿದೆ. ಇದರ ಜಾಡು ಹಿಡಿಯುವುದು ಇಲಾಖೆಗೂ ಸವಾಲಿನ ಕೆಲಸವಾಗಿದೆ. ಜಿಲ್ಲೆಯಲ್ಲೂ ಎಟಿಎಂ ಕಾರ್ಡ್ ಸ್ಕಿಮ್ಮಿಂಗ್ ಪ್ರಕರಣಗಳು ಕಂಡು ಬಂದಿವೆ ಎಂದರು. ಸೈಬರ್ ಕ್ರೈಂ ಚಟುವಟಿಕೆಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಈ ಬಗ್ಗೆ ಜಾಗೃತಿ ಮೂಡಿ ಸುವ ಕಾರ್ಯಕ್ರಮ ಹಮ್ಮಿಕೊಂಡಿರು ವುದು ನಿಜಕ್ಕೂ ಶ್ಲಾಘನಾರ್ಹ ಎಂದು ಅವರು ಅಭಿಪ್ರಾಯಪಟ್ಟರು.
ಉಡುಪಿ ಲೆಕ್ಕಪರಿಶೋಧಕರ ಸಂಸ್ಥೆಯ ಅಧ್ಯಕ್ಷ ನರಸಿಂಹ ನಾಯಕ್ ಸ್ವಾಗತಿಸಿ, ಸಂಪನ್ಮೂಲ ವ್ಯಕ್ತಿ ಅಜಿತ್‌ವಿ. ಪಾಲ್, ಕಾರ್ಯ ದರ್ಶಿ ಕವಿತಾ ಎಂ.ಪೈ ಉಪಸ್ಥಿತರಿದ್ದರು.