ಬೆಂಗಳೂರು: ಒಂದೂವರೆ ವರ್ಷದಲ್ಲಿ ರಾಜಧಾನಿ ಬೆಂಗಳೂರಿಗರ 141.94 ಕೋಟಿ ರೂ. ಸೈಬರ್ ವಂಚಕರ ಪಾಲಾಗಿರುವುದು ಆತಂಕ ಹುಟ್ಟಿಸಿದೆ.ಪ್ರತಿ ನಿತ್ಯ ಸರಾಸರಿ 15 ಮಂದಿ ಬೆಂಗಳೂರಿಗರು ಸೈಬರ್ ಕಳ್ಳರ ಗಾಳಕ್ಕೆ ಸಿಲುಕಿ ಲಕ್ಷಾಂತರ ರೂ. ಕಳೆದುಕೊಳ್ಳುತ್ತಿದ್ದಾರೆ. ವಂಚನೆಗೊಳಗಾದ ಸಾವಿರಾರು ಸಂತ್ರಸ್ತರು ಸೈಬರ್ ಕ್ರೈಂ ಠಾಣೆಗೆ ಅಲೆದು ದುಡ್ಡು ವಾಪಸ್ ಬರುವ ನಿರೀಕ್ಷೆ ಕಳೆದುಕೊಂಡಿದ್ದಾರೆ.
ಬೆಂಗಳೂರೊಂದರಲ್ಲೇ 2022ರಲ್ಲಿ 76.94 ಕೋಟಿ ರೂ. ಹಾಗೂ 2023ರಲ್ಲಿ ಕಳೆದ 6 ತಿಂಗಳಿನಲ್ಲೇ 65 ಕೋಟಿ ರೂ. ಸೈಬರ್ ಕಳ್ಳರ ಪಾಲಾಗಿದೆ. ಇತ್ತ ಎಫ್ಐಆರ್ ದಾಖಲಿಸಿಕೊಂಡಿರುವ ಖಾಕಿ ಕಾರ್ಯಾಚರಣೆ ನಡೆಸದೇ ಸೈಲೆಂಟ್ ಆಗಿದ್ದು, ಸಂತ್ರಸ್ತರ ಗೋಳು ಕೇಳುವವರೇ ಇಲ್ಲದಂತಾಗಿದೆ. ಸಿಲಿಕಾನ್ ಸಿಟಿಯಲ್ಲಿ 2017ರಿಂದ ಈಚೆಗೆ 50,027 ಸೈಬರ್ ವಂಚನೆಗಳು ನಡೆದರೂ ಶಿಕ್ಷೆಯಾಗಿರುವುದು ಕೇವಲ 26 ವಂಚಕರಿಗೆ ಮಾತ್ರ.
ಏನಿದು ಪಾರ್ಟ್ ಟೈಂ ಜಾಬ್ ವಂಚನೆ?: ಬೆಂಗಳೂರಿನಲ್ಲಿ ಕಳೆದ 4 ತಿಂಗಳಿಂದ ಪಾರ್ಟ್ ಟೈಂ ಉದ್ಯೋಗದ ಹೆಸರಲ್ಲಿ ನಡೆಯುತ್ತಿರುವ ಸೈಬರ್ ವಂಚನೆ ಮಿತಿ ಮೀರಿದ್ದು, ಇದರ ಪ್ರಮಾಣ ಶೇ.75ರಷ್ಟಿದೆ ಎಂದು ಸೈಬರ್ ಕ್ರೈಂ ಪೊಲೀಸ್ ಮೂಲಗಳು ತಿಳಿಸಿವೆ. ಪಾರ್ಟ್ ಟೈಂ ಉದ್ಯೋಗ ಕೊಡಿಸುವ ನೆಪದಲ್ಲಿ ಸೈಬರ್ ಕಳ್ಳರು ಮೊಬೈಲ್‌ಗೆ ಕಳುಹಿಸುವ ಸಂದೇಶಗಳಿಗೆ ಮರುಳಾಗಿ ಪ್ರತಿಕ್ರಿಯಿಸಿದರೆ ಕೂಡಲೇ ನಿಮ್ಮನ್ನು ಅವರ ಟೆಲಿಗ್ರಾಂ ಗ್ರೂಪ್‌ವೊಂದಕ್ಕೆ ಸೇರ್ಪಡೆ ಮಾಡುತ್ತಾರೆ. ಲಿಂಕ್ ಮೂಲಕ ಆನ್‌ಲೈನ್ ಟ್ರೇಡಿಂಗ್‌ನಲ್ಲಿ ನಿಮ್ಮನ್ನು ರಿಜಿಸ್ಟ್ರಾರ್ ಮಾಡಿಸುವುದಾಗಿ ಹೇಳುತ್ತಾರೆ. ಇದಕ್ಕೆ ನೀವು ಸಮ್ಮತಿಸಿದರೆ, “ತಾವು ಸೂಚಿಸುವ ಖಾತೆಗೆ ಲಕ್ಷಾಂತರ ರೂ. ಜಮೆ ಮಾಡಿದರೆ ಟಾಸ್ಕ್ಗಳ ಮೂಲಕ ಹಣ ದ್ವಿಗುಣಗೊಳಿಸಬಹುದು’ ಎಂದು ನಂಬಿಸುತ್ತಾರೆ. ದುಡ್ಡು ಪಾವತಿಸಿದ ಕೂಡಲೇ ಕಮೀಷನ್ ರೂಪದಲ್ಲಿ ಸ್ವಲ್ಪ ದುಡ್ಡು ನಿಮ್ಮ ಖಾತೆಗೆ ಜಮೆಯಾಗುತ್ತದೆ. ಇದಾದ ಬಳಿಕ ಸೈಬರ್ ಕಳ್ಳರು ಅಸಲಿ ಆಟ ಶುರುಮಾಡುತ್ತಾರೆ. ನಿಮ್ಮ ಅಸಲು ದುಡ್ಡು ಡ್ರಾ ಮಾಡಬೇಕಾದರೆ ಇನ್ನಷ್ಟು ಹಣ ಜಮೆ ಮಾಡುವಂತೆ ಪೀಡಿಸಿ ಹಂತ-ಹಂತವಾಗಿ ಲಕ್ಷಾಂತರ ರೂ. ಲಪಟಾಯಿಸುತ್ತಾರೆ. ಇದಾದ 3-4 ದಿನಗಳ ಬಳಿಕ ಸೈಬರ್ ಕಳ್ಳರು ಸಂಪರ್ಕಕ್ಕೆ ಸಿಗುವುದಿಲ್ಲ .
ರಾಜ್ಯ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುವ ವಂಚಕರು: ಬೆಂಗಳೂರು ಪೊಲೀಸರು ಪಾರ್ಟ್ ಟೈಂ ಜಾಬ್ ವಂಚನೆಯ ಜಾಡು ಹಿಡಿಯುವ ನಿಟ್ಟಿನಲ್ಲಿ ಕೆಲವು ತಿಂಗಳ ಹಿಂದೆ ಕಾರ್ಯಾಚರಣೆಗೆ ಇಳಿದಾಗ ಹರಿಯಾಣ, ರಾಜಸ್ತಾನ ಮತ್ತು ಗುಜರಾತ್ ರಾಜ್ಯಗಳಲ್ಲಿ ಸೈಬರ್ ಕಳ್ಳರ ಟವರ್ ಲೊಕೇಶನ್ ಪತ್ತೆಯಾಗಿತ್ತು. ಪೊಲೀಸರು ಜಿಯೋ ಲೊಕೇಶನ್ ಮೂಲಕ ಉತ್ತರ ಭಾರತಕ್ಕೆ ತೆರಳಿ ಅಲ್ಲಿನ ಪೊಲೀಸರನ್ನು ಸಂಪರ್ಕಿಸಿದರೆ ಈ ಲೊಕೇಶನ್ ನಮ್ಮಲ್ಲಿ ಬರುವುದಿಲ್ಲ ಎಂದು ಪಕ್ಕದ ರಾಜ್ಯಗಳತ್ತ ಬೊಟ್ಟು ಮಾಡಿ ಸಾಗಹಾಕಿದ್ದರು. ಇಲ್ಲಿನ ಪೊಲೀಸರು ತಾಂತ್ರಿಕ ತನಿಖೆ ನಡೆಸಿದಾಗ, “ವಂಚಕರು ಒಂದು ರಾಜ್ಯದಲ್ಲಿ ನಕಲಿ ದಾಖಲೆ ಮೂಲಕ ಸಿಮ್ ಖರೀದಿಸಿ, ಮತ್ತೂಂದು ರಾಜ್ಯದಲ್ಲಿ ಕುಳಿತುಕೊಂಡು ಕೃತ್ಯ ಎಸಗುತ್ತಾರೆ. ಪೊಲೀಸರ ಕಣ್ತಪ್ಪಿಸಲೆಂದೇ ಸೈಬರ್ ವಂಚಕರು ಈ ಆಟವಾಡುತ್ತಾರೆ. ನಂತರ ಅಲ್ಲಿಂದಲೂ ಪರಾರಿಯಾಗಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದಾರೆ ಎಂಬುದು ಖಾಕಿ ತನಿಖೆಯಲ್ಲಿ ಗೊತ್ತಾಗಿದೆ.
ಸಿಲಿಕಾನ್ ಸಿಟಿಯ ಜನರೇ ಸೈಬರ್ ಕಳ್ಳರ ಟಾರ್ಗೆಟ್: ಉತ್ತರ ಭಾರತದ ರಾಜಸ್ತಾನ, ಜಾರ್ಖಂಡ್, ಗುಜರಾತ್, ಪಶ್ಚಿಮ ಬಂಗಾಳ, ದೆಹಲಿ, ಮುಂಬೈ, ಬಿಹಾರ ರಾಜ್ಯಗಳ ಗ್ರಾಮೀಣ ಭಾಗಗಳಲೇ ಕುಳಿತುಕೊಂಡು ಆನ್‌ಲೈನ್ ಮೂಲಕ ಸೈಬರ್ ಕಳ್ಳರು ಬೆಂಗಳೂರಿಗರ ದುಡ್ಡು ದೋಚುವ ಸಂಗತಿ ಜಗತ್‌ಜಾಹಿರವಾಗಿದೆ. ದೇಶದಲ್ಲೇ ಅತ್ಯಧಿಕ ಟೆಕಿಗಳು, ಖಾಸಗಿ ಕಂಪನಿ ಉದ್ಯೋಗಿಗಳನ್ನು ಒಳಗೊಂಡಿರುವ ಐಟಿ-ಬಿಟಿ ಸಿಟಿಯೇ ಇವರ ಹಾಟ್‌ಸ್ಪಾಟ್. ಎಂಜಿನಿಯರಿಂಗ್, ಎಂ.ಟೆಕ್ ಪದವೀಧರರೇ ಈ ಸೈಬರ್ ಗ್ಯಾಂಗ್‌ನ ಸೂತ್ರದಾರರು. ಪಿಯು ವ್ಯಾಸಂಗ ಮೊಟಕುಗೊಳಿಸಿದವರಿಗೆ ತರಬೇತಿ ಕೊಟ್ಟು ವೇತನವನ್ನೂ ಕೊಟ್ಟು ಈ ದಂಧೆಗೆ ಬಳಸಿಕೊಳ್ಳುತ್ತಾರೆ. ಸಾಫ್ಟ್ ವೇರ್ ಎಂಜಿನಿಯರ್‌ಗಳೂ ತಮ್ಮ ಅರಿವಿಗೆ ಬಾರದೇ ಸೈಬರ್ ಕಳ್ಳರಿಗೆ ನೆರವಾಗುತ್ತಿದ್ದಾರೆ. ಡಾಟಾ ಅನಲೀಸಿಸ್ ಮಾಡಿ ಬೆಂಗಳೂರಿಗರ ಮೊಬೈಲ್ ನಂಬರ್ ಪತ್ತೆ ಹಚ್ಚಲೆಂದೇ ಸೈಬರ್ ಕಳ್ಳರಲ್ಲಿ ಪ್ರತ್ಯೇಕ ತಂಡವಿದೆ. ಕರೆ ಮಾಡಿ ಟ್ರ್ಯಾಪ್ ಮಾಡುವುದೇ ಬೇರೆ ತಂಡ ಎಂದು ಸೈಬರ್ ಕ್ರೈಂ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.
ಬೆಂಗಳೂರಿನಲ್ಲಿ ಸೈಬರ್ ಅಪರಾಧಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಎಲ್ಲ ಪೊಲೀಸ್ ಠಾಣೆಗಳಲ್ಲೂ ದೂರು ನೀಡಲು ಅವಕಾಶ ಒದಗಿಸಲಾ ಗಿದೆ. ವಂಚನೆಗೊಳಗಾದ ಗಂಟೆಯೊಳಗೆ 1930ಗೆ ಕರೆ ಮಾಡಿ ಮಾಹಿತಿ ನೀಡಿದರೆ ವಂಚನೆಗೊಳಗಾದವರ ದುಡ್ಡನ್ನು ಫ್ರಿಜ್ ಮಾಡಬಹುದು. ಟಾಸ್ಕ್ ಮೂಲಕ ಹಣ ದ್ವಿಗುಣಗೊಳಿಸುವ ಸೈಬರ್ ವಂಚನೆ ಬಗ್ಗೆ ಸಾರ್ವಜನಿಕರು ಎಚ್ಚರವಹಿಸಬೇಕು
. – ಬಿ.ದಯಾನಂದ್, ಬೆಂಗಳೂರು ಪೊಲೀಸ್ ಆಯುಕ್ತ