Advertisement

ಚೀನದಿಂದ ಸೈಬರ್‌ ದಾಳಿ ಯತ್ನ: ನಿಗಾ ಅನಿವಾರ್ಯ

07:13 AM Mar 03, 2021 | Team Udayavani |

ಭಾರತದ ನಿರಂತರ ಒತ್ತಡ ಮತ್ತು ಪರಿಣಾಮಕಾರಿ ರಾಜತಾಂತ್ರಿಕ ನಡೆಗಳಿಗೆ ಮಣಿದಿದ್ದ ಚೀನ ಸರಕಾರ ಲಡಾಖ್‌ ಗಡಿಯಲ್ಲಿ ಭಾರೀ ಸಂಖ್ಯೆಯಲ್ಲಿ ನಿಯೋಜಿಸಿದ್ದ ತನ್ನ ಸೇನಾ ತುಕಡಿಗಳನ್ನು ವಾಪಸು ಕರೆಸಿ ಕೊಳ್ಳುವ ಮೂಲಕ ಗಡಿಯಲ್ಲಿ ಸೃಷ್ಟಿಯಾಗಿದ್ದ ಸಂಘರ್ಷದ ವಾತಾವರ ಣವನ್ನು ತಿಳಿಗೊಳಿಸಿತ್ತು. ಇದರಿಂದಾಗಿ ಗಡಿಯಲ್ಲಿ 10 ತಿಂಗಳುಗಳಿಂದ ಇದ್ದ ಸಮರ ಭೀತಿ ದೂರವಾಗಿ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿತ್ತು. ಇದರ ನಡುವೆ ಚೀನ ಹ್ಯಾಕರ್‌ಗಳು ದೇಶದ ವಿದ್ಯುತ್‌ ವಿತರಣ ಜಾಲದ ಮೇಲೆ ಸೈಬರ್‌ ದಾಳಿ ನಡೆಸಲು ಯತ್ನಿಸಿ ದ್ದರು ಎಂಬ ಆಘಾತಕಾರಿ ವಿಷಯವೊಂದನ್ನು ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ. ಈ ಸೈಬರ್‌ ದಾಳಿಯ ಪರಿಣಾಮವೇ ಕಳೆದ ಅ. 12ರಂದು ಮುಂಬಯಿ ನಗರದಲ್ಲಿ ವಿದ್ಯುತ್‌ ಗ್ರಿಡ್‌ ವೈಫ‌ಲ್ಯಕ್ಕೀಡಾಗಿ ಹಲವು ತಾಸು ವಿದ್ಯುತ್‌ ವ್ಯತ್ಯಯ ಉಂಟಾಗಿತ್ತು ಎಂದೂ ತಿಳಿಸಿದೆ.

Advertisement

ಚೀನ ಸರಕಾರದ ಬೆಂಬಲಿತ ಹ್ಯಾಕರ್‌ಗಳ ಗುಂಪು “ರೆಡ್‌ಇಕೋ’ ಕಳೆದ ವರ್ಷದ ಮೇ ಮಧ್ಯಭಾಗದಿಂದಲೇ ಭಾರತದ ವಿವಿಧ ಸಂಸ್ಥೆಗಳ ಅದರಲ್ಲೂ ಪ್ರಮುಖವಾಗಿ ದೇಶದ ವಿದ್ಯುತ್‌ ಉತ್ಪಾದನೆ ಮತ್ತು ವಿತರಣ ಕಂಪೆನಿಗಳ ಸಾಫ್ಟ್ವೇರ್‌ಗಳನ್ನು ಹ್ಯಾಕ್‌ ಮಾಡಿ ಇಡೀ ವ್ಯವಸ್ಥೆಯನ್ನೇ ಹಾಳುಗೆಡಹುವ ದುಷ್ಕೃತ್ಯಕ್ಕೆ ಯತ್ನಿಸಿತ್ತು. ಇದರಲ್ಲಿ ರಾಜ್ಯದ ಎನ್‌ಟಿಪಿಸಿಎಲ್‌ನ ವಿದ್ಯುತ್‌ ಉತ್ಪಾದನ ಘಟಕದ ಸಹಿತ 5 ಸರಬರಾಜು ಕೇಂದ್ರಗಳು ಸೇರಿದ್ದವು ಎನ್ನಲಾಗಿದೆ. ಇವೆಲ್ಲವುಗಳಿಗಿಂತ ಮುಖ್ಯವಾಗಿ ಚೀನದಿಂದಲೇ ಸೃಷ್ಟಿಯಾಗಿ ಇಡೀ ವಿಶ್ವವನ್ನೇ ಕಂಗಾಲಾ ಗಿಸಿದ ಕೊರೊನಾ ವೈರಸ್‌ಗೆ ಲಸಿಕೆ ಸಂಶೋಧನೆಯಲ್ಲಿ ನಿರತರಾಗಿದ್ದ ಭಾರತದ ವೈದ್ಯಕೀಯ ತಜ್ಞರು ಮತ್ತು ಲಸಿಕೆ ತಯಾರಕ ಸಂಸ್ಥೆಗಳ ಮೇಲೂ ಚೀನದ “ಎಪಿಟಿ 10′ ಎಂಬ ಹ್ಯಾಕರ್‌ ಗುಂಪು ದೃಷ್ಟಿ ನೆಟ್ಟಿತ್ತು ಎಂಬ ಅತ್ಯಂತ ಆತಂಕಕಾರಿ ವಿಷಯವನ್ನು ಸಿಂಗಾಪುರ ಮತ್ತು ಟೋಕಿಯೊ ಮೂಲದ ಸೈಬರ್‌ ಗುಪ್ತಚರ ಸಂಸ್ಥೆ “ಸೈಫಿರ್ಮಾ’ ಬಹಿರಂಗ ಪಡಿಸಿದೆ. ಒಂದೆಡೆಯಿಂದ ಶಾಂತಿಯ ಮಂತ್ರ ಪಠಿಸುತ್ತ ಮತ್ತೂಂದೆಡೆ ಯಿಂದ ಚೀನ ತನ್ನ ಅಣ್ವಸ್ತ್ರಗಳನ್ನು ಅತ್ಯಾಧುನಿಕಗೊಳಿಸಲು ಭಾರೀ ಪ್ರಮಾಣದಲ್ಲಿ ಹಣವನ್ನು ವ್ಯಯಿಸುತ್ತಿದೆ ಎಂಬ ವರದಿಯೂ ಇದೆ.

ನೇರ ದಾಳಿಯಲ್ಲಿ ಕೈಸುಟ್ಟುಕೊಂಡ ಚೀನ ಸೈಬರ್‌ ದಾಳಿಯಂಥ ಪರೋಕ್ಷ ಸಮರಕ್ಕೆ ಪ್ರಯತ್ನಿಸುತ್ತಿರುವುದು ತುಸು ಗಂಭೀರವಾದುದೇ. ಏಷ್ಯಾದಲ್ಲಿ ಅತ್ಯಂತ ಪ್ರಬಲ ರಾಷ್ಟ್ರವಾಗಿ ಈ ಹಿಂದಿನಿಂದಲೂ ಗುರುತಿಸಿಕೊಂಡಿರುವ ಚೀನಕ್ಕೆ ಈಗ ಭಾರತ ಪ್ರಬಲ ಪೈಪೋಟಿ ನೀಡು ತ್ತಿದೆ. ಪ್ರತಿಯೊಂದು ಕ್ಷೇತ್ರಗಳಲ್ಲೂ ಸ್ವಾವಲಂಬನೆಯತ್ತ ಭಾರತ ಮುಖ ಮಾಡಿರುವ ಹಿನ್ನೆಲೆಯಲ್ಲಿ ಚೀನದ ಆದಾಯಕ್ಕೆ ಮಾತ್ರವಲ್ಲದೆ ಅದರ ಪಾರಮ್ಯಕ್ಕೂ ಹೊಡೆತ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಚೀನ ಒಂದಲ್ಲ ಒಂದು ವಿಚಾರವಾಗಿ ಭಾರತದ ಮೇಲೇರಿ ಬರುತ್ತಿದೆ. ಎರಡೂ ದೇಶಗಳ ನಡುವೆ ಗಡಿಯಲ್ಲಿ ಶಾಂತಿ ಮರುಸ್ಥಾಪನೆಯ ನಿಟ್ಟಿನಲ್ಲಿ ಮಾತುಕತೆಗಳು ಮುಂದುವರಿದಿರುವ ನಡುವೆಯೇ ಚೀನದ ಈ “ಸೈಬರ್‌ ದಾಳಿ’ಯ ವಿಷಯ ಬಯಲಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಒಂದಿಷ್ಟು ಎಚ್ಚರಿಕೆಯ ನಡೆ ಇಡಬೇಕಿದೆ. ಹಿಂದಿನಿಂದಲೂ ತನ್ನ ಕುತಂತ್ರಗಳಿಂದಲೇ ಕುಖ್ಯಾತವಾಗಿರುವ ಚೀನದ ಬಗ್ಗೆ ತೀರಾ ಮೃದು ಧೋರಣೆ ಸಲ್ಲದು. ಚೀನದ ಈ ಎಲ್ಲ ಕುಕೃತ್ಯಗಳಿಗೆ ಸೂಕ್ತ ತಿರುಗೇಟು ನೀಡಲು ಭಾರತ ಸಮರ್ಥವಾಗಿದೆ. ಹಾಗೆಂದು ಎಚ್ಚರ ತಪ್ಪಲಾಗದು. ಚೀನದ ಮೇಲೆ ಹದ್ದುಗಣ್ಣಿರಿಸಬೇಕಾದ ಅನಿವಾರ್ಯವಂತೂ ಇದ್ದೇ ಇದೆ.

Advertisement

Udayavani is now on Telegram. Click here to join our channel and stay updated with the latest news.

Next