Advertisement

ರಾಹುಲ್‌ ಗಾಂಧಿ ರಾಜೀನಾಮೆ ಪ್ರಸ್ತಾವ ತಿರಸ್ಕರಿಸಿದ ಸಿಡಬ್ಲ್ಯುಸಿ

01:50 AM May 26, 2019 | sudhir |

ಹೊಸದಿಲ್ಲಿ: ಲೋಕಸಭೆ ಚುನಾವಣೆಯ ಸೋಲಿನ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಪಟ್ಟಕ್ಕೆ ರಾಜೀನಾಮೆ ನೀಡುವುದಾಗಿ ರಾಹುಲ್‌ ಗಾಂಧಿಯವರು ಮಾಡಿದ್ದ ಪ್ರಸ್ತಾವನೆಯನ್ನು ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ತಿರಸ್ಕರಿಸಿದೆ. ಇಂಥ ಸವಾಲಿನ ಸಂದರ್ಭದಲ್ಲಿ ಪಕ್ಷದ ನಾಯಕತ್ವವನ್ನು ನೀವೇ ವಹಿಸಿ ಕೊಂಡು ಮುನ್ನಡೆಸಬೇಕೆಂದು ಸಿಡಬ್ಲ್ಯುಸಿಯ ಎಲ್ಲ ಸದಸ್ಯರು ರಾಹುಲ್‌ ಅವರಿಗೆ ಮನವಿ ಮಾಡಿದ್ದು, ಪಕ್ಷ ವನ್ನು ಎಲ್ಲ ಹಂತಗಳಲ್ಲೂ ಕೂಲಂಕಷವಾಗಿ ಪುನರ್‌ನವೀಕರಣಗೊಳಿಸುವಂತೆ ಕೋರಿದ್ದಾರೆ.

Advertisement

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ಹೀನಾಯವಾಗಿ ಸೋತಿದ್ದಕ್ಕೆ ಆತ್ಮವಿಮರ್ಶೆ ಮಾಡಿಕೊಳ್ಳುವ ನಿಟ್ಟಿನಲ್ಲಿ ದಿಲ್ಲಿಯಲ್ಲಿ ಸಿಡಬ್ಲ್ಯುಸಿ ಸಭೆ ಕರೆಯಲಾಗಿತ್ತು. ರಾಹುಲ್‌ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್‌ ಆಡಳಿತವಿರುವ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಪಕ್ಷದ ಪ್ರಭಾವಿ ನಾಯಕರು ಪಾಲ್ಗೊಂಡಿದ್ದರು.

ಸುಮಾರು ನಾಲ್ಕು ಗಂಟೆಗಳ ಕಾಲ ಸಿಡಬ್ಲ್ಯುಸಿ ಸಭೆಯಲ್ಲಿ ಎಲ್ಲ ಸದಸ್ಯರೂ “ಪಕ್ಷದ ಸಿದ್ಧಾಂತಗಳ ಆಧಾರದ ಮೇರೆಗೆ ಪಕ್ಷವನ್ನು ರಾಹುಲ್‌ ಗಾಂಧಿಯವರೇ ಮುನ್ನಡೆಸಬೇಕು. ಈ ದೇಶದ ಯುವಜನರ, ರೈತರ, ಪರಿಶಿಷ್ಟರ, ಹಿಂದುಳಿದವರ, ಅಲ್ಪಸಂಖ್ಯಾಕರ, ಬಡವರ ಮತ್ತು ಸೌಲಭ್ಯ ವಂಚಿತ ಸಮುದಾಯಗಳ ಪ್ರತಿನಿಧಿಯಂತೆ ಕಾರ್ಯ ನಿರ್ವಹಿಸಬೇಕು’ ಎಂದು ಆಗ್ರಹಿಸಿದರು. ಜತೆಗೆ, ಸೋಲಿಗೆ ನೀವೊಬ್ಬರೇ ಹೊಣೆಯಲ್ಲ, ನಾವೆಲ್ಲರೂ ಹೊಣೆಗಾರರು ಎಂದು ರಾಜ್ಯ ಘಟಕದ ಅಧ್ಯಕ್ಷರು ತಿಳಿಸಿದ್ದಾರೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next