ಹೊಸದಿಲ್ಲಿ : “ನಾವು ಭಾರತ ಪರಿಕಲ್ಪನೆಯ ಮೂಲ ತತ್ವವನ್ನು ರಕ್ಷಿಸಲು ನಾವು ಸಿದ್ಧರಾಗಬೇಕಿದೆ; ಈಗಿನ ಕೇಂದ್ರ ಸರಕಾರ ಅದನ್ನು ನಾಶಪಡಿಸಲು ಯತ್ನಿಸುತ್ತಿದೆ’ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.
ಮುಚ್ಚಿದ ಬಾಗಿಲ ಹಿಂಭಾಗದಲ್ಲಿ ಇಂದು ನಡೆದ ಕಾಂಗ್ರೆಸ್ ಕಾಯರಕಾರಿ ಸಮಿತಿ ಸಭೆಯಲ್ಲಿ (ಸಿಡಬ್ಲ್ಯುಸಿ) ಮಾತನಾಡುತ್ತಿದ್ದ ಅವರು ಕೇಂದ್ರದಲ್ಲಿರುವ ಎನ್‌ಡಿಎ ಸರಕಾರದ ನೀತಿ ನಿರ್ಧಾರಗಳನ್ನು ಕಟುವಾಗಿ ಟೀಕಿಸಿದರು.
ಕಾಶ್ಮೀರದಲ್ಲೀಗ ಸಾಗುತ್ತಿರುವ ಹಿಂಸೆ ಮತ್ತು ಅಶಾಂತಿಯನ್ನು ಉಲ್ಲೇಖೀಸಿ ಮಾತನಾಡಿದ ಸೋನಿಯಾ, “ಈ ಹಿಂದೆ ಕಾಶ್ಮೀರ ಕಣಿವೆಯಲ್ಲಿ ಶಾಂತಿ ಇತ್ತು. ಆದರೆ ಈಗ ಅಲ್ಲಿ ಸಂಘರ್ಷ, ಬಿಕ್ಕಟ್ಟು, ಉದ್ವಿಗ್ನತೆ ಮತ್ತು ಭಯ ಹೆಚ್ಚುತ್ತಲೇ ಇದೆ’ ಎಂದು ಹೇಳಿದರು.
ಜಮ್ಮು ಕಾಶ್ಮೀರದಲ್ಲಿನ ಬಿಕ್ಕಟ್ಟು ಕೇಂದ್ರ ಸರಕಾರದ ಮಹಾ ವೈಫಲ್ಯವನ್ನು ಪ್ರತಿನಿಧಿಸುವಂತಿದೆ ಎಂದು ಸೋನಿಯಾ ಟೀಕಿಸಿದರು. ಸಿಡಬ್ಲ್ಯುಸಿ ಕಾಂಗ್ರೆಸ್ ಪಕ್ಷದ ಅತ್ಯುನ್ನತ ನೀತಿ ನಿರ್ಧರಣ ಅಂಗವಾಗಿದೆ.
ಸೋನಿಯಾ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಸಿಡಬ್ಲ್ಯುಸಿ ಸಭೆಯಲ್ಲಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ಹಣಕಾಸು ಸಚಿವ ಪಿ ಚಿದಂಬರಂ, ದಿಗ್ವಿಜಯ್ ಸಿಂಗ್, ಗುಲಾಮ್ ನಬೀ ಆಜಾದ್ ಮತ್ತು ಅಹ್ಮದ್ ಪಟೇಲ್ ಭಾಗವಹಿಸಿದ್ದರು.