Advertisement

Karnataka polls: ಬಿಜೆಪಿ ಭದ್ರಕೋಟೆ ವಶಕ್ಕೆ ಕಾಂಗ್ರೆಸ್‌ ಕಸರತ್ತು

02:47 PM May 04, 2023 | Team Udayavani |

ಬೆಂಗಳೂರು: ರಾಜಧಾನಿಯ ಪೂರ್ವ ಭಾಗದ ಸಿ.ವಿ.ರಾಮನ್‌ನಗರದಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸಿ ನಾಲ್ಕನೇ ಗೆಲುವಿಗೆ ಮತ್ತೂಮ್ಮೆ ಅಖಾಡಕ್ಕಿಳಿದಿರುವ ಬಿಜೆಪಿಯ ಎಸ್‌.ರಘು ಮಣಿಸಲು ಕೊನೇ ಕ್ಷಣದಲ್ಲಿ ಕಾಂಗ್ರೆಸ್‌ ಟಿಕೆಟ್‌ ತಂದಿರುವ ಆನಂದಕುಮಾರ್‌ ಬೆವರು ಹರಿಸಬೇಕಾಗಿದೆ.

Advertisement

ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ರಂಗೇರಿದ್ದು, ಇಲ್ಲಿ ಬಿಜೆಪಿ ಭದ್ರಕೋಟೆಗೆ ಲಗ್ಗೆ ಹಾಕುವ ಬಯಕೆ ಕಾಂಗ್ರೆಸ್‌ನದು. ಆದರೆ, ಪ್ರತಿ ಚುನಾವಣೆಯಲ್ಲಿ ಹೊಸಮುಖ ಕಣಕ್ಕಿಳಿಸುತ್ತಿರುವ ಪ್ರಯೋಗ ಹಿನ್ನೆಡೆಯಾಗುತ್ತಿದೆ. ಇದೇ ಬಿಜೆಪಿಗೆ ವರದಾನ ಎಂಬಂತಾಗಿದೆ. 2008 ರಲ್ಲಿ ಮಾಜಿ ಮೇಯರ್‌ ಕೆ.ಸಿ.ವಿಜಯಕುಮಾರ್‌, 2013 ರಲ್ಲಿ ಪಿ.ರಮೇಶ್‌, 2018 ರಲ್ಲಿ ಮಾಜಿ ಮೇಯರ್‌ ಆರ್‌.ಸಂಪತ್‌ರಾಜ್‌ ಈ ಬಾರಿ ಪಾಲಿಕೆಯ ಮಾಜಿ ಸದಸ್ಯ ಆನಂದಕುಮಾರ್‌ ಹೀಗೆ ಪ್ರತಿ ಚುನಾವಣೆಯಲ್ಲೂ ಇಲ್ಲಿ ಕಾಂಗ್ರೆಸ್‌ ಹೊಸ ಅಭ್ಯರ್ಥಿಗೆ ಟಿಕೆಟ್‌ ಕೊಟ್ಟು ಅಖಾಡಕ್ಕಿಳಿಸುತ್ತಿದೆ.

ಕಾಂಗ್ರೆಸ್‌ನಿಂದ ಟಿಕೆಟ್‌ ಪಡೆದು ಬಂದು ಸ್ಪರ್ಧಿಸಿ ಸೋತವರು ಮತ್ತೆ ಕ್ಷೇತ್ರದತ್ತ ತಲೆ ಹಾಕದ ಬಗ್ಗೆಯೂ ಮತದಾರರಲ್ಲೂ ಆಕ್ರೋಶವಿದೆ. ಕ್ಷೇತ್ರದಲ್ಲಿ ಒಂದು ಸುತ್ತು ಹಾಕಿದರೆ ಸರ್ಕಾರಿ ಶಾಲೆ ಮತ್ತು ಆಸ್ಪತ್ರೆ, ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿರುವುದು ಕಂಡು ಬರುತ್ತದೆ. ಕೊರೊನಾ ವೇಳೆ ಶಾಸಕರ ಸ್ಪಂದನೆ ಬಗ್ಗೆ ಜನರಲ್ಲಿ ಮೆಚ್ಚುಗೆಯೂ ಇದೆ. ಡಾ| ರಾಜ್‌ಕುಮಾರ್‌, ಬಿ.ಆರ್‌. ಅಂಬೇಡ್ಕರ್‌, ಬಸವಣ್ಣ ಹೀಗೆ ಮಹನೀಯ ಹೆಸರುಗಳನ್ನು ಉದ್ಯಾನವನ ಪಾರ್ಕ್‌ಗಳಿಗೆ ನಾಮಕರಣ ಮಾಡಿರುವುದು ಗಮನ ಸೆಳೆಯುತ್ತದೆ.

ಕ್ಷೇತ್ರ ಪುನರ್‌ ವಿಂಗಡಣೆಯ ನಂತರ ಇದೇ ಕ್ಷೇತ್ರದಲ್ಲಿ ಬಿಜೆಪಿಯಿಂದ ಸತತ 3 ಬಾರಿ ಗೆಲುವು ಸಾಧಿಸಿರುವ ಎಸ್‌.ರಘು ಇದಕ್ಕೂ ಮುನ್ನ ಶಾಂತಿನಗರದಿಂದಲೂ ಒಮ್ಮೆ ಶಾಸಕರಾಗಿ ಆಯ್ಕೆಯಾಗಿದ್ದರು. ಇವರಿಗೆ ಇದು ಐದನೇ ಚುನಾವಣೆ. ಕಾಂಗ್ರೆಸ್‌ನಿಂದ ಪಾಲಿಕೆಯ ಮಾಜಿ ಸದಸ್ಯ ಆನಂದಕುಮಾರ್‌ ಕೊನೇ ಕ್ಷಣದಲ್ಲಿ ಟಿಕೆಟ್‌ ಪಡೆದು ಬಂದು ತಮ್ಮದೇ ಆದ ಪಡೆ ಕಟ್ಟಿಕೊಂಡು ಬಿಜೆಪಿಗೆ ಅಭ್ಯರ್ಥಿಗೆ ಪೈಪೋಟಿ ನೀಡುತ್ತಿದ್ದಾರೆ. ಸಿ.ವಿ.ರಾಮನ್‌ನಗರಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಯಾರು ಎಂಬುದೇ ಕೊನೆವರೆಗೂ ಯಕ್ಷ ಪ್ರಶ್ನೆಯಾಗಿತ್ತು. ಪುಲಕೇಶಿನಗರದ ಟಿಕೆಟ್‌ ಮೇಲೆ ಕಣ್ಣಿಟ್ಟಿದ್ದ ಮಾಜಿ ಮೇಯರ್‌ ಸಂಪತ್‌ರಾಜ್‌ ಇಲ್ಲಿ ಸ್ಪರ್ಧೆ ಮಾಡಲು ಮನಸ್ಸಿರಲಿಲ್ಲ. ಆದರೂ ಅವರ ಹೆಸರೇ ಮುಂಚೂಣಿಯಲ್ಲಿತ್ತು. ಜೆಡಿಎಸ್‌ಗೆ ಈ ಕ್ಷೇತ್ರದಲ್ಲಿ ಸಂಘಟನೆ ಗಟ್ಟಿಯಾಗಿಲ್ಲದ ಕಾರಣ ಈ ಬಾರಿ ಆರ್‌ಪಿಐಗೆ ಬೆಂಬಲ ನೀಡಿದೆ.

ಒಮ್ಮೆ ಕಾಂಗ್ರೆಸ್‌, ಮತ್ತೂಮ್ಮೆ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋತಿದ್ದ ಪಿ.ರಮೇಶ್‌ ಈ ಬಾರಿ ಪಕ್ಷೇತರರಾಗಿ, ಆಮ್‌ ಆದ್ಮಿ ಪಕ್ಷದಿಂದ ಮೋಹನ್‌ ದಾಸರಿ ಅಖಾಡದಲ್ಲಿದ್ದು ಸ್ಪರ್ಧೆ ಒಡ್ಡಿದ್ದಾರೆ. ಮೇಲ್ನೋಟಕ್ಕೆ ಇಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆಯೇ ಪೈಪೋಟಿ ಕಂಡುಬರುತ್ತದೆ. ಸಿ.ವಿ.ರಾಮನ್‌ನಗರ, ಲಾಲ್‌ಬಹದ್ದೂರ್‌ ನಗರ, ನ್ಯೂ ಬೈಯಪ್ಪನಹಳ್ಳಿ, ಹೊಯ್ಸಳನಗರ, ಓಲ್ಡ್‌ ತಿಪ್ಪಸಂದ್ರ, ನ್ಯೂ ತಿಪ್ಪಸಂದ್ರ, ಜಲಕಂಠೇಶ್ವರನಗರ, ಜೀವನ್‌ಬಿಮಾನಗರ, ಕೊನೇನ ಅಗ್ರಹಾರ ವಾರ್ಡ್‌ಗಳನ್ನು ಹೊಂದಿರುವ ಕ್ಷೇತ್ರದಲ್ಲಿ ಕ್ಷೇತ್ರದಲ್ಲಿ ಇಂತದ್ದೇ ಸಮುದಾಯದ ಪ್ರಾಬಲ್ಯ ಎಂದಿಲ್ಲ. ಪರಿಶಿಷ್ಟ ಜಾತಿ, ರೆಡ್ಡಿ, ಒಕ್ಕಲಿಗ, ತಮಿಳು, ಮುಸ್ಲಿಂ, ಹಿಂದಿ ಭಾಷಿಕರು ಹೀಗೆ ಎಲ್ಲ ಸಮುದಾಯದ ಮತದಾರರೂ ಇದ್ದಾರೆ.

Advertisement

ಜಾತಿ, ಮತ ಬೇಧವಿಲ್ಲದೆ ಕ್ಷೇತ್ರದ ಎಲ್ಲ ವರ್ಗದವರನ್ನೂ ಪ್ರೀತಿಯಿಂದ ಕಂಡು ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ. ಸಿ.ವಿ.ರಾಮನ್‌ನಗರ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಕ್ಷೇತ್ರ ಗೂಂಡಾರಾಜ್ಯವಾಗಲು ಬಿಡುವುದಿಲ್ಲ. -ಎಸ್‌.ರಘು, ಬಿಜೆಪಿ

ಪಾಲಿಕೆ ಸದಸ್ಯನಾಗಿ ಉತ್ತಮ ಕೆಲಸ ಮಾಡಿದ್ದೇನೆ. ಶಾಸಕನಾಗಲು ಅವಕಾಶ ಕೊಟ್ಟರೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂಬ ಭರವಸೆ ನೀಡುತ್ತೇನೆ. -ಆನಂದಕುಮಾರ್‌, ಕಾಂಗ್ರೆಸ್‌ 

-ಎಸ್‌.ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next