Advertisement
ಕುಶಾಲನಗರದ ಬಸವನಹಳ್ಳಿಯ ಸರ್ವೇ ನಂಬರ್ 1/1ರ ಸರ್ಕಾರಿ ಜಾಗದಲ್ಲಿ ನವಗ್ರಾಮ ನಿರ್ಮಾಣಕ್ಕೆಂದು ನೂರಾರು ಮರಗಳನ್ನು ಕಡಿಯುವುದರಿಂದ ಅಲ್ಲಿರುವ ಅಣೆಕಟ್ಟೆ ಮತ್ತು ನದಿಯ ನೀರಿನ ಮೂಲಕ್ಕೆ ಧಕ್ಕಯಾಗಲಿದ್ದು, ಅರಣ್ಯ ಸಂರಕ್ಷಣೆಗೂ ಚ್ಯುತಿಯಾಗಲಿದೆ ಎಂದು ಆರೋಪಿಸಿದ ಪ್ರತಿಭಟನಕಾರರು ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಪ್ರಭಾಕರನ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಈ ಸಂದರ್ಭ ಮಾತನಾಡಿದ ಕಾವೇರಿಸೇನೆ ಸಂಚಾಲಕ ರವಿ ಚಂಗಪ್ಪ, ಕುಶಾಲನಗರ ಸಮೀಪದ ಬಸವನಹಳ್ಳಿಯಲ್ಲಿ ನವಗ್ರಾಮ ನಿರ್ಮಾಣಕ್ಕೆಂದು ನೂರಾರು ಮರಗಳನ್ನು ಕಡಿದು ತೊಲೆಗಳಾಗಿ ಮತ್ತು ಸೌದೆಗಳಾಗಿ ಪರಿವರ್ತಿಸಲಾಗುತ್ತಿದೆ. ಅಲ್ಲದೇ ಬಸವನಹಳ್ಳಯಿಂದ ಅನತಿ ದೂರದಲ್ಲೇ ಹಾರಂಗಿ ಜಲಾಶಯ, ಆನೆಕಾಡು ಮೀಸಲು ಅರಣ್ಯ ಮತ್ತು ಕಾವೇರಿ ನದಿ ಇದ್ದು, ಕಳೆದ ಮೂರು ವರ್ಷಗಳ ಹಿಂದೆ ಆನೆಕಾಡು ಅರಣ್ಯಕ್ಕೆ ಬೆಂಕಿ ಬಿದ್ದು, ಸಂಪೂರ್ಣ ನಾಶವಾಗಿದ್ದು, ಮಳೆಯಿಂದಷ್ಟೇ ಕಾಡು ಚಿಗುರುತ್ತಿದೆ. ಈ ಎಲ್ಲ ಸಮಸ್ಯೆಗಳಿಂದ ಪರಿಸರಕ್ಕೆ ಧಕ್ಕೆಯಾಗುವ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಮರಗಳನ್ನು ಕಡಿಯಬಾರದು ಎಂದು ಒತ್ತಾಯಿಸಿದರು.