ಎಚ್.ಡಿ.ಕೋಟೆ: ತಾಲೂಕಿನ ಎನ್.ಎನ್.ಹಳ್ಳಿ ಗಿರಿಜನ ಕಾಲೋನಿ ಸರ್ಕಾರ ಶಾಲೆ ಆವರಣದಲ್ಲಿ ಬೆಳೆದಿದ್ದ ಲಕ್ಷಾಂತರ ರೂ. ಮೌಲ್ಯದ ಬೃಹದಾಕಾರದ 10 ಮರಗಳನ್ನು ಕಡಿದಿರುವುದು ವಿವಾದಕ್ಕೆ ಗುರಿಯಾಗಿದೆ. ಶಾಲಾ ಶಿಕ್ಷಕರು, ಎಸ್‌ಡಿಎಂಸಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೂ ತಾರದೇ ಮರಗಳನ್ನು ಕಡಿಯಲಾಗಿದೆ. ಏಕಾಏಕಿ ಮರಗಳನ್ನು ಕಡಿದಿರುವುದರ ಹಿಂದೆ ಅಕ್ರಮಗಳು ನಡೆದಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಶಾಲಾ ಆವರಣದಲ್ಲಿ ಹಲವು ವರ್ಷಗಳಿಂದ ಹಾಡಿಯ ಆದಿವಾಸಿಗರು ಸಿಲ್ವರ್, ನೀಲಗಿರಿ, ನೇರಳ ಇನ್ನಿತರ ಮರಗಳನ್ನು ಮಕ್ಕಳಂತೆ ಪೋಷಿಸಿ ಬೆಳೆಸಿದ್ದರು. ಅವುಗಳಲ್ಲಿ ಸುಮಾರು 20
ಮರಗಳು ಬಹು ಎತ್ತರಕ್ಕೆ ಬೆಳೆದಿದ್ದವು. ಗಾಳಿ-ಮಳೆಗೆ ಆಕಸ್ಮಿಕವಾಗಿ ಮರಗಳು ಮುರಿದು ಬಿದ್ದರೆ ಶಾಲೆ ಕಟ್ಟಡ ಹಾಗೂ ಮಕ್ಕಳಿಗೂ ಅಪಾಯ ಆಗುವ ಸಾಧ್ಯತೆ ಇತ್ತು.
ಹೀಗಾಗಿ ಶಾಲೆ ಮುಖ್ಯಶಿಕ್ಷಕಿ ಶಾಲಾಭಿವೃದ್ಧಿ ಸಮಿತಿ ಸಭೆಯ ತೀರ್ಮಾನದಂತೆ ಮರ ಕಡಿಸಿ ಬಂದ ಹಣದಿಂದ ಶಾಲಾಭಿವೃದ್ಧಿಗೆ ಬಳಸಿಕೊಳ್ಳಲು ನಿರ್ಧರಿಸಿದ್ದರು. ಅದರಂತೆ ಅರಣ್ಯ ಇಲಾಖೆಗೆ ಕಳೆದ ಒಂದು ವರ್ಷದಿಂದಲೂ 6-7 ಪತ್ರಗಳನ್ನು ಬರೆದು
ಮರ ಕಡಿಯಲು ಅನುಮತಿ ಕೇಳಿದ್ದರು. ಇಷ್ಟೆಲ್ಲಾ ಪತ್ರ ವ್ಯವಹಾರ ನಡೆಸಿದ್ದರೂ ಅರಣ್ಯ ಇಲಾಖೆಯಿಂದ ಯಾವುದೇ ಅಧಿಕೃತ ಆದೇಶ ಬಂದಿರಲಿಲ್ಲ.
ಈ ನಡುವೆ, ಇದೀಗ ಶಾಲಾ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಹಾಗೂ ಕ್ಷೇತ್ರ ಶಿಕ್ಷಣಾಧಿಗಳ ಗಮನಕ್ಕೆ ತಾರದೇ 10 ಮರಗಳನ್ನು ನೆಲಕ್ಕುರುಳಿಸಲಾಗಿದೆ. ಶಾಲೆ ಹಾಗೂ ಗ್ರಾಮಸ್ಥರಿಗೆ ಮಾಹಿತಿ ನೀಡದೆಯೇ ಮರಗಳನ್ನು ಕಡಿದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ನಡೆದಿದ್ದೇನು?: ಕಳೆದ 4-5 ದಿನಗಳ ಹಿಂದೆ ಮನು ಎಂಬುವವರೊಬ್ಬರು “ಶಾಲೆಯಲ್ಲಿನ ಮರಗಳ ಹರಾಜು ನನಗೆ ಸಿಕ್ಕಿದೆ. ಹೀಗಾಗಿ ಮರ ಕಡಿಯಲು ಬಂದಿರುವುದಾಗಿ’ ಶಾಲೆಗೆ ಆಗಮಿಸಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಶಿಕ್ಷಕರು ಹಾಗೂ ಗ್ರಾಮಸ್ಥರು, “ನಮಗೆ ಅರಣ್ಯ ಇಲಾಖೆಯಿಂದ ಯಾವುದೇ ಅಧಿಕೃತ ಆದೇಶ ಬಂದಿಲ್ಲ. ಅರಣ್ಯ ಇಲಾಖೆ ಅಥವಾ ಬಿಇಒ ಆದೇಶ ಬೇಕು’ ಎಂದು ಹೇಳಿ ಆತನನ್ನು ತಡೆದಿದ್ದಾರೆ. ಮರಗಳನ್ನು ಕಡಿಯಲು ಅವಕಾಶ ಮಾಡಿಕೊಟ್ಟಿಲ್ಲ. ಇಷ್ಟೆಲ್ಲ ವಿರೋಧಗಳ ನಡುವೆಯೂ ಶನಿವಾರ ಬೆಳಗ್ಗೆ ಶಾಲಾ ಆವರಣದಲ್ಲಿ ಬೆಳೆದಿದ್ದ 20 ಮರಗಳ ಪೈಕಿ 10 ಮರಗಳನ್ನು ಕಡಿಯಲಾಗಿದೆ. ಈ ಸಂದರ್ಭದಲ್ಲಿ ಮನು ಮತ್ತು ಹಾಡಿಯ ಮಂದಿ, ಶಾಲಾ ಶಿಕ್ಷಕಿ ನಡುವೆ ಮಾತಿನ ಚಕಮಕಿ ನಡೆದಿದೆ. ಇದೇ ವೇಳೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಮತ್ತು ತಹಶೀಲ್ದಾರ್ ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ವಿಷಯ ಮಟ್ಟಿಸಿದ್ದಾರೆ. ಹೀಗಾಗಿ ಮರ ಕಡಿಯುವುದಕ್ಕೆ ತಾತ್ಕಾಲಿಕವಾಗಿ ತಡೆ ಹಿಡಿಯಲಾಯಿತು.
ಅಷ್ಟರಲ್ಲಾಗಲೇ 10 ಮರಗಳು ನೆಲಕ್ಕುರುಳಿಸಲಾಗಿತ್ತು. ಬೃಹದಾಕಾರದ 20 ಮರಗಳನ್ನು ಕೇವಲ 21 ಸಾವಿರ ರೂ.ಗೆ ಹರಾಜು ನೀಡಿರುವುದು ಸರಿಯಲ್ಲ. ಗ್ರಾಮದಲ್ಲಿ ಹರಾಜು ನಡೆದೇ ಇಲ್ಲ. ಬೆಳೆಸಿದ ಮರಗಳನ್ನೇ ಕಡಿದ ಮೇಲೆ ನಮಗೆ ಈ ಶಾಲೆನೂ ಬೇಡ. ನಮ್ಮ ಮಕ್ಕಳನ್ನು ಶಾಲೆಗೂ ಕಳುಹಿಸುವುದಿಲ್ಲ ಎಂದು ಗಿರಿಜನ ಮಹಿಳೆ ಸುಶೀಲಾ ಸೇರಿದಂತೆ ನಿವಾಸಿಗಳು ಕಿಡಿಕಾರಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿ ಪ್ರತಿಕ್ರಿಯೆ
ಎಚ್.ಡಿ.ಕೋಟೆ ತಾಲೂಕಿನ ಎನ್.ಎನ್.ಹಳ್ಳಿ ಗಿರಿಜನ ಕಾಲೋನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬೆಳೆದಿದ್ದ ಮರಗಳನ್ನು ಕತ್ತರಿಸಲು ನಿಯಮ ಪಾಲಿಸಲಾಗಿದೆ. ಮರಗಳನ್ನು ಕತ್ತರಿಸಲು ಒಂದು ವರ್ಷದ ಹಿಂದೆಯೇ ಬಂದ
ಅರ್ಜಿಯನ್ನಾಧರಿಸಿ ಹರಾಜು ಪಕ್ರಿಯೆ ನಡೆಸಲಾಗಿದೆ. ಈಗ ಕಡಿಯುತ್ತಿರುವ ಮರಗಳ ಬಳಿಯ ಲ್ಲಿಯೇ ಹರಾಜು ಪ್ರಕ್ರಿಯೆ ನಡೆಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿ ಪ್ರಶಾಂತ್ ತಿಳಿಸಿದ್ದಾರೆ.