Advertisement

ಮರ ಕತ್ತರಿಸಿ ಫ‌ುಟ್‌ಪಾತ್‌ನಲ್ಲಿಟ್ಟರು

12:22 PM Jun 05, 2017 | Team Udayavani |

ಬೆಂಗಳೂರು: ಮುಂಗಾರು ಪೂರ್ವ ಮಳೆಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಉರುಳಿ ಬಿದ್ದ ಮರಗಳನ್ನು ಪಾಲಿಕೆವತಿಯಿಂದ ತುಂಡರಿಸಿ ಪಾದಚಾರಿ ಮಾರ್ಗಗಳಲ್ಲಿ ಸಂಗ್ರಹಿಸಿಡಲಾಗಿದ್ದು, ನಾಗರಿಕರ ಓಡಾಟಕ್ಕೆ ತೀವ್ರ ತೊಂದರೆಯುಂಟಾಗಿದೆ. ಈ ನಡುವೆ ಕಟ್ಟಿಗೆಗಳನ್ನು ಸಂಗ್ರಹಿಸಿಟ್ಟಿರುವ ಸ್ಥಳದಲ್ಲಿ ಕಸದ ರಾಶಿಯೂ ಉತ್ಪತ್ತಿಯಾಗುತ್ತಿದೆ. 

Advertisement

ಕಳೆದ ವಾರ ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ನಗರದ ಪ್ರಮುಖ ರಸ್ತೆಗಳು ಸೇರಿದಂತೆ ನೂರಾರು ಭಾಗಗಳಲ್ಲಿ 150ಕ್ಕೂ ಹೆಚ್ಚು ಭಾರಿ ಮರಗಳು ಧರೆಗುರುಳಿ ನಗರದಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗಿತ್ತು. ಅದರ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿರುವ ಪಾಲಿಕೆಯ ಸಿಬ್ಬಂದಿ ರಸ್ತೆಗಳಿಗೆ ಉರುಳಿದ ಮರಗಳನ್ನು ತುಂಡರಿಸಿ ಪಾದಚಾರಿ ಮಾರ್ಗದಲ್ಲಿ ರಾಶಿ ಪೇರಿಸಿಟ್ಟಿದ್ದಾರೆ. 

ಕಳೆದೊಂದು ವಾರದಿಂದ ನಗರದ ಯಾವುದೇ ಭಾಗದಲ್ಲಿ ಮಳೆಯಾಗಿಲ್ಲ. ಆದರೂ, ಈವರೆಗೆ ಮರದ ತುಂಡುಗಳು ಹಾಗೂ ಕೊಂಬೆಗಳನ್ನು ತೆರವುಗೊಳಿಸಲು ಬಿಬಿಎಂಪಿ ಮುಂದಾಗದಿರುವುದು ಸ್ಥಳೀಯರು ಹಾಗೂ ಪಾದಚಾರಿಗಳ ಕೋಪಕ್ಕೆ ಕಾರಣವಾಗಿದೆ. 

ಬಿಬಿಎಂಪಿಯ ಎಲ್ಲ 72 ಉಪ ವಲಯಗಳಲ್ಲಿ ತಲಾ ಒಂದರಂತೆ ತುರ್ತು ನಿರ್ವಹಣಾ ತಂಡಗಳಿವೆ. ಇದರೊಂದಿಗೆ ಪಾಲಿಕೆಯ ಅರಣ್ಯ ವಿಭಾಗದಲ್ಲಿ ಹಗಲಿನ ಪಾಳಿಯಲ್ಲಿ 17 ತಂಡಗಳು ಹಾಗೂ ರಾತ್ರಿ ಪಾಳಿಯಲ್ಲಿ 4 ತಂಡಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಹೇಳಲಾಗುತ್ತಿದ್ದರೂ, ನಗರದ ಪ್ರಮುಖ ರಸ್ತೆಗಳ ಪಾದಚಾರಿ ಮಾರ್ಗದಲ್ಲಿನ ಮರ, ಕೊಂಬೆಗಳ ಶೇಖರಣೆ ತೆರವುಗೊಳಿಸಲು ಯಾರೂ ಮುಂದಾಗುತ್ತಿಲ್ಲ.

ಬಿಬಿಎಂಪಿ ಕೇಂದ್ರ ಕಚೇರಿಗೆ ಕೂಗಳತೆ ದೂರದಲ್ಲಿರುವ ಕಾರ್ಪೊರೇಷನ್‌ ವೃತ್ತದಿಂದ ಕಸ್ತೂರ ಬಾ ರಸ್ತೆ ಕಡೆಗೆ ಬರುವ ರಸ್ತೆಯಲ್ಲಿ ಇತ್ತೀಚೆಗೆ ಭಾರಿ ಪ್ರಮಾಣದ ಮರವೊಂದು ಧರೆಗುರುಳಿತ್ತು. ಮರವನ್ನು ತುಂಡರಿಸಿ, ಕೊಂಬೆಗಳನ್ನು ಪಾದಚಾರಿ ಮಾರ್ಗದಲ್ಲಿ ಶೇಖರಣೆ ಮಾಡಿ ವಾರ ಕಳೆದಿದೆ. ಆದರೆ, ಈವರೆಗೆ ಅದನ್ನು ತೆರವುಗೊಳಿಸಲು ಪಾಲಿಕೆಯ ಅಧಿಕಾರಿಗಳು ಮುಂದಾಗಿಲ್ಲ. ಪಾಲಿಕೆಯ ಕೇಂದ್ರ ಕಚೇರಿಯ ಸಮೀಪದಲ್ಲಿ ಪರಿಸ್ಥಿತಿ ಹೀಗಿದ್ದರೆ, ಉಳಿದೆಡೆಯಲ್ಲಿ ಪಾಲಿಕೆ ಸೇವೆ ಹೇಗೆ ನೀಡುತ್ತದೆ ಎಂದು ಪಾದಾಚಾರಿಗಳು ಪ್ರಶ್ನಿಸಿದ್ದಾರೆ. 

Advertisement

ನಗರದಲ್ಲಿ ಇತ್ತೀಚೆಗೆ ಸುರಿದ ಮಳೆಗೆ ನೂರಾರು ಮರಗಳು ಧರೆಗುರುಳಿ ಸಂಚಾರ ದಟ್ಟಣೆ ಉಂಟಾಗಿತ್ತು. ಈ ವೇಳೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕೂಡಲೇ ಅವುಗಳನ್ನು ತೆರವುಗೊಳಿಸುವ ಕಾರ್ಯವನ್ನು ಮಾಡಲಾಗಿದೆ. ಪಾದಚಾರಿ ಮಾರ್ಗದಲ್ಲಿ ಶೇಖರಣೆಯಾಗಿರುವ ಮರದ ತುಂಡುಗಳು ಹಾಗೂ ಕೊಂಬೆಗಳನ್ನು ಕೂಡಲೇ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. 
– ಜಿ.ಪದ್ಮಾವತಿ, ಮೇಯರ್‌ 

Advertisement

Udayavani is now on Telegram. Click here to join our channel and stay updated with the latest news.

Next