ಹುಬ್ಬಳ್ಳಿ: ಇಲ್ಲಿನ ಹಳೇ ಬಸ್ ನಿಲ್ದಾಣದಲ್ಲಿ ಖದೀಮರು ಬಸ್ ಹತ್ತುತ್ತಿದ್ದ ಓರ್ವರ ಪ್ಯಾಂಟಿನ್ ಕಿಸೆ ಕತ್ತರಿಸಿ 45 ಗ್ರಾಂ ತೂಕವುಳ್ಳ ಮಾಂಗಲ್ಯ ಸರ ಕದ್ದುಕೊಂಡು ಹೋಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ನವನಗರ ಪಂಚಾಕ್ಷರಿ ನಗರದ ಗುಡ್ಡಪ್ಪ ಎಂ. ಗುಡಗೂರ ಎಂಬುವರೆ ಚಿನ್ನದ ಸರ ಕಳೆದುಕೊಂಡಿದ್ದಾರೆ. ಇವರು ಶನಿವಾರ ಸಂಜೆ ಹಾವೇರಿಗೆ ಹೋಗಲು ಬಸ್ ಹತ್ತುತ್ತಿದ್ದಾಗ ಕಳ್ಳರು ಕಿಸೆಗೆ ಕನ್ನ ಹಾಕಿ ಅಂದಾಜು 1.40 ಲಕ್ಷ ರೂ. ಮೌಲ್ಯದ ಮಂಗಳಸೂತ್ರ ಕಳವು ಮಾಡಿದ್ದಾರೆ. ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಾಲೆಟ್ ಮೂಲಕ ಹಣ ಪಡೆದು ವಂಚನೆ: ವ್ಯಕ್ತಿಯೊಬ್ಬನು ಮೇಕಪ್ ಮತ್ತು ಹೇರ್ ಕಲರಿಂಗ್ ಮಾಡಿಸಿಕೊಳ್ಳುವುದಿದೆ. ಅದಕ್ಕಾಗಿ ಫೋನ್ ಪೇ ಮೂಲಕ ಮುಂಗಡ ಹಣ ಪಾವತಿಸುತ್ತೇನೆಂದು ಮಹಿಳೆಯೊಬ್ಬರಿಗೆ ಕರೆ ಮಾಡಿ, ತನ್ನ ಖಾತೆಗೆ 10 ಸಾವಿರ ರೂ. ಹಣ ವರ್ಗಾಯಿಸಿಕೊಂಡು ವಂಚಿಸಿರುವುದು ಬೆಳಕಿಗೆ ಬಂದಿದೆ. ಇಲ್ಲಿನ ಗೋಕುಲ ರಸ್ತೆ ಅಕ್ಷಯ ಕಾಲೋನಿಯ ಶಿವದೇವಿ ವಿ. ಕೇಲೂರ ಎಂಬುವರೆ ವಂಚನೆಗೊಳಗಾಗಿದ್ದಾರೆ. ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿ ಕಾಣೆ: ಹಳೇಹುಬ್ಬಳ್ಳಿ ನೇಕಾರ ನಗರದಲ್ಲಿ ಅಂಗಡಿಕಾರರೊಬ್ಬರು ಕಾಣೆಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ನೀಲಪ್ಪಗೌಡ ಸಿ. ಪಾಟೀಲ (42) ಏಪ್ರಿಲ್ 25ರಂದು ಬೆಳಗ್ಗೆ ಮನೆಯಿಂದ ಹೋಗಿ ಅಂಗಡಿ ತೆರೆದು ಹೊರಗೆ ಹೋದವ ಮರಳಿ ಬಂದಿಲ್ಲ. ಅವನನ್ನು ಹುಡುಕಿಕೊಡಿ ಎಂದು ಅವರ ತಾಯಿ ಸುಭದ್ರಾದೇವಿ ಹಳೇಹುಬ್ಬಳ್ಳಿ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ.
ಅಪರಿಚಿತ ವೃದ್ಧನ ಶವ ಪತ್ತೆ: ಇಲ್ಲಿನ ರೈಲ್ವೆ ನಿಲ್ದಾಣದ ಪ್ಲಾಟ್ಫಾರ್ಮ್ 4-5ರ ಸಬ್ ವೇ ಬಳಿ ಸುಮಾರು 60 ವರ್ಷದ ವೃದ್ಧ ಯಾವುದೋ ಕಾಯಿಲೆಯಿಂದ ಬಳಲಿ, ಸರಿಯಾದ ಔಷಧೋಪಚಾರ, ಚಿಕಿತ್ಸೆ ಪಡೆಯದೆ ಮಲಗಿದಲ್ಲಿಯೇ ಸ್ವಾಭಾವಿಕವಾಗಿ ಮೃತಪಟ್ಟ ಶವವು ಮಂಗಳವಾರ ರೈಲ್ವೆ ಠಾಣೆ ಪೊಲೀಸರಿಗೆ ದೊರೆತಿದೆ. ಅಪರಿಚಿತ 5ಅಡಿ 2 ಅಂಗುಲ ಎತ್ತರ, ಸಾದಕಪ್ಪು ಮೈಬಣ್ಣ, ಕೋಲು ಮುಖ, ನೇರ ಮೂಗು, ಬಡಕಲು ಶರೀರ ಹೊಂದಿದ್ದಾರೆ. ಶವವನ್ನು ಕಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಕಾಯ್ದಿರಿಸಲಾಗಿದೆ. ವಾರಸುದಾರರು ರೈಲ್ವೆ ಠಾಣೆ ದೂ: 2364751, ಮೊ: 9480802126ಗೆ ಸಂಪರ್ಕಿಸಬಹುದು.
ದ್ವಿಚಕ್ರ ಮಾರುವುದಾಗಿ ವಂಚನೆ: ವ್ಯಕ್ತಿಯೊಬ್ಬ ಓಎಲ್ಎಕ್ಸ್‌ನಲ್ಲಿ ದ್ವಿಚಕ್ರ ವಾಹನ ಮಾರಾಟ ಮಾಡುವುದಾಗಿ ಫೋಟೋ ಪೋಸ್ಟ್ ಮಾಡಿ, ನಗರದ ಓರ್ವರಿಂದ ಗೂಗಲ್ ಪೇ ಮೂಲಕ ತನ್ನ ಖಾತೆಗೆ 22,105 ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಗೋಪನಕೊಪ್ಪ ಸ್ವಾಗತ ಕಾಲೋನಿಯ ನಂದಕಿಶೋರ ಆರ್. ಗಾಯಕವಾಡ ವಂಚನೆಗೊಳಗಾಗಿದ್ದಾರೆ.
ಪಿರಮಲ್ ಕುಮಾರ (ಸೈನಿಕ) ಎಂಬ ಸುಳ್ಳು ಹೆಸರಿನಲ್ಲಿ ಸೋಮವಾರ ಓಎಲ್ಎಕ್ಸ್‌ನಲ್ಲಿ ಬೈಕ್‌ನ ಪೋಟೋ ಪೋಸ್ಟ್ ಮಾಡಿ ಮಾರಾಟಕ್ಕಿದೆ ಎಂದು ನಂಬಿಸಿ, ತನ್ನ ಖಾತೆಗೆ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.