Advertisement

ಮೂಲರಪಟ್ಣದಿಂದ ತೂಗುಸೇತುವೆವರೆಗೆ ಬಾರದ ಬಸ್‌ಗಳು!

09:54 AM Sep 20, 2018 | |

ಎಡಪದವು: ಮೂಲರಪಟ್ಣ ಸೇತುವೆ ಕುಸಿದು ಹಲವು ತಿಂಗಳುಗಳೇ ಕಳೆದಿವೆ. ಆದರೆ ಇಲ್ಲಿ ಬಸ್‌ ಬಾರದೆ ಸ್ಥಳೀಯರು ಅನುಭವಿಸುತ್ತಿರುವ ಸಮಸ್ಯೆ ಈಗಲೂ ಮುಂದುವರಿದಿದೆ. ಸೇತುವೆ ಕಡಿತಗೊಂಡ ಬಳಿಕ ಗಂಜಿಮಠ, ಕುಪ್ಪೆಪದವು, ಮಾರ್ಗದಂಗಡಿ, ಮುತ್ತೂರುನಿಂದ ಮೂಲರ ಪಟ್ಣ, ಬಂಟ್ವಾಳ ಸಂಪರ್ಕ ಕಡಿತದಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಮುತ್ತೂರು ತೂಗುಸೇತುವೆಯಿಂದ ಗಂಜಿಮಠ, ಕೈಕಂಬ, ಎಡಪದವು, ಬಜಪೆ, ಸುರತ್ಕಲ್‌ ಭಾಗಕ್ಕೆ 8 ಖಾಸಗಿ ಬಸ್‌ಗಳಿವೆ. ಮುತ್ತೂರು ಶಾಲೆಯ ಬಳಿ ನಿರ್ಮಿಸಿದ ರಸ್ತೆಯಲ್ಲಿ ತಂಗುವ ಬಸ್‌ಗಳು ಅಲ್ಲಿಂದ ಮತ್ತೆ ತೆರಳುತ್ತವೆ.

Advertisement

ಅದೇ ರೀತಿ ಸೇತುವೆ ಮುರಿದು ಬಿದ್ದ ಭಾಗವಾದ ಮೂಲರಪಟ್ಣ ಸಮೀಪದ ಮಸೀದಿಯಿಂದ 2 ಖಾಸಗಿ ಹಾಗೂ 2 ಕೆಎಸ್‌ಆರ್‌ಟಿಸಿ ಬಸ್‌ಗಳಿವೆ. ಖಾಸಗಿ ಬಸ್‌ ಗಳು ಮೂಲರಪಟ್ಣದಿಂದ ಬಿ.ಸಿ. ರೋಡ್‌ ವರೆಗೆ ಹಲವು ಟ್ರಿಪ್‌ ಇದೆ. ಅದರಲ್ಲಿ ಒಂದು ಬಸ್‌ ಮೂಲರಪಟ್ಣದಿಂದ ಕೊಳತ್ತಮಜಲ್‌, ಪೊಳಲಿಯಿಂದ ಕೈಕಂಬವರೆಗೆ ಬರುತ್ತಿದೆ. ಎರಡು ಕೆಎಸ್‌ಆರ್‌ಟಿಸಿ ಬಸ್‌ಗಳು ಇಲ್ಲಿಂದ ಬಿ.ಸಿ. ರೋಡ್‌ ಮುಖಾಂತರ ಸ್ಟೇಟ್‌ಬ್ಯಾಂಕ್‌ಗೆ ಸಂಚರಿಸುತ್ತವೆ. ಸೇತುವೆ ಸಂಪರ್ಕ ಕಡಿತಗೊಂಡಿದ್ದರಿಂದ ಬಸ್‌ಗಳಲ್ಲಿ ಹಿಂದಿನಷ್ಟು ಪ್ರಯಾಣಿಕರಿರದಿರುವುದು ಬಸ್‌ ಮಾಲಕರಿಗೂ ಸಮಸ್ಯೆಯಾಗಿ ಪರಿಣಮಿಸಿದೆ.

ತೂಗುಸೇತುವೆಯವರೆಗೆ ಬಾರದ ಬಸ್‌ಗಳು
ಬಿ.ಸಿ. ರೋಡ್‌ನಿಂದ ಬರುವ ಬಸ್‌ಗಳು ಮೂಲರಪಟ್ಣ ಸಮೀಪದ ಮಸೀದಿಯವರೆಗೆ ಬಂದು ಅಲ್ಲಿಂದಲೇ ರೌಂಡ್‌ ಹೊಡೆದು ತೆರಳುತ್ತವೆ. ಇಲ್ಲಿಂದ ತೂಗುಸೇತುವೆಯವರೆಗೂ ರಸ್ತೆ ನಿರ್ಮಿಸಲಾಗಿದ್ದರೂ ಅಲ್ಲಿ ತನಕ ಬಸ್‌ ಗಳು ಬರುವುದಿಲ್ಲ.  ಆದ್ದರಿಂದ ಮುತ್ತೂರಿಗೆ ತೆರಳುವ ಪ್ರಯಾಣಿಕರು ತೂಗುಸೇತುವೆಯಿಂದ ಮಸೀದಿವರೆಗೆ ಸುಮಾರು ಒಂದು ಕಿ.ಮೀ. ನಡೆದುಕೊಂಡು ಹೋಗಬೇಕಾಗುತ್ತದೆ. ನೂತನ ರಸ್ತೆಗೆ ಮೋರಿ ಅಳವಡಿಸಿದ್ದು, ಆದರೆ ಅದು ಗಟ್ಟಿಮುಟ್ಟಾಗಿಲ್ಲ. ಜತೆಗೆ ಅಗಲ ಕಿರಿದಾಗಿರುವುದು ಸಮಸ್ಯೆಯಾಗಿದೆ ಎನ್ನುತ್ತಾರೆ ಸ್ಥಳೀಯರು.

ತೂಗುಸೇತುವೆ ಸಮೀಪ ಬಸ್‌ಗಳು ತಿರುಗುವಷ್ಟು ಜಾಗವಿದ್ದರೂ ಬಸ್‌ಗಳು ಅಲ್ಲಿ ತನಕ ಹೋಗದ ಕಾರಣ ಸ್ಥಳೀಯರು ತೊಂದರೆ ಅನುಭವಿಸುವಂತಾಗಿದೆ. ಭಾರದ ವಸ್ತುಗಳೇನಿದ್ದರೂ ಅವುಗಳನ್ನು ಹೊತ್ತುಕೊಂಡು ಸಾಗಬೇಕು. ಆದರೆ ಮಸೀದಿಯಿಂದ ತೂಗುಸೇತುವೆಯವರೆಗೆ ರಿಕ್ಷಾಗಳು ಸಂಚರಿಸುತ್ತವೆ. ಸೇತುವೆ ಕುಸಿದ ಸಂದರ್ಭದಲ್ಲಿ ಈ ಭಾಗಕ್ಕೆ ಜಿಲ್ಲಾಧಿಕಾರಿಗಳು ಆಗಮಿಸಿದ್ದು, ತೂಗುಸೇತುವೆಯವರೆಗೂ ಬಸ್‌ಗಳು ಸಂಚರಿಸಬೇಕು ಎಂದು ಆದೇಶಿಸಿದ್ದರೂ ಈವರೆಗೆ ಬಸ್‌ಗಳು ಬಂದಿಲ್ಲ ಎನ್ನುತ್ತಾರೆ ಸ್ಥಳೀಯರು.

ಸೇತುವೆ ಮುರಿದುಬಿದ್ದ ಸಂದರ್ಭದಲ್ಲಿ ತಂಡೋಪತಂಡವಾಗಿ ಬಂದಿರುವ ಅಧಿಕಾರಿಗಳು, ರಾಜಕಾರಣಿಗಳು ಬಳಿಕ ಬಂದಿಲ್ಲ. ಅಲ್ಲದೇ ಜನರ ಸಮಸ್ಯೆಯನ್ನೂ ಕೇಳಿಲ್ಲ. ಅಲ್ಲಿ ನಡೆದಿರುವ ಬೆಳವಣಿಗೆಯೇನು ಎಂದೂ ಅರಿಯುವ ಪ್ರಯತ್ನವನ್ನು ಮಾಡಿಲ್ಲ ಎನ್ನುವುದು ಸ್ಥಳೀಯರ ಆರೋಪ.

Advertisement

ವಾಹನ ಮಾಲಕರಿಗೆ ನೋಟಿಸ್‌
ಮೂಲರಪಟ್ಣ ಸೇತುವೆಯಿಂದ ತೂಗು ಸೇತುವೆ ತನಕ ಬಸ್‌ ಬರುವುದಿಲ್ಲ ಎಂಬ ವಿಚಾರದ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಯಾವುದೆಲ್ಲ ಬಸ್‌ಗಳು ಅಲ್ಲಿ ತನಕ ಬರುವುದಿಲ್ಲ ಎಂದು ತಿಳಿದು, ಮೋಟಾರು ವಾಹನ ಮಾಲಕರಿಗೆ ನೋಟಿಸ್‌ ನೀಡಲಾಗುವುದು.
 - ರಮೇಶ್‌ ವರ್ನೇಕರ್‌,
    ಉಪ ಸಾರಿಗೆ ಆಯುಕ್ತರು, ಆರ್‌ಟಿಒ ಮಂಗಳೂರು

 ಗಿರೀಶ್‌ ಮಳಲಿ

Advertisement

Udayavani is now on Telegram. Click here to join our channel and stay updated with the latest news.

Next