Advertisement

ಸರಕಾರಿ ನೌಕರರ ವೇತನಕ್ಕೆ ಕತ್ತರಿ ಆತಂಕ

09:59 PM Apr 06, 2020 | Sriram |

ಬೆಂಗಳೂರು: ಕೋವಿಡ್ 19 ಹಾವಳಿಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಅನೇಕ ರಾಜ್ಯಗಳು ಸರಕಾರಿ ನೌಕರರ ಸಂಬಳ ಕಡಿತ ಮಾಡಲು ನಿರ್ಧರಿಸಿದ್ದು, ರಾಜ್ಯ ಸರಕಾರಿ ನೌಕರರೂ ಸಂಬಳಕ್ಕೆ ಕತ್ತರಿ ಬೀಳುವ ಆತಂಕದಲ್ಲಿದ್ದಾರೆ.

Advertisement

ಕೋವಿಡ್ 19  ವೈರಸ್‌ ಹರಡುವುದನ್ನು ನಿಯಂತ್ರಿಸಲು ದೇಶಾದ್ಯಂತ 21 ದಿನಗಳ ಕಾಲ ಲಾಕ್‌ಡೌನ್‌ ಜಾರಿಯಾಗಿರುವುದರಿಂದ ಉತ್ಪಾದನ ವಲಯ ಸಂಪೂರ್ಣ ಸ್ಥಗಿತಗೊಂಡಿದ್ದು, ವಾಣಿಜ್ಯ ವಹಿವಾಟು ನಿಂತು ಹೋಗಿ ರುವುದರಿಂದ ಸರಕಾರದ ಆದಾಯವೇ ಸಂಪೂರ್ಣ ಬಂದ್‌ ಆಗಿದೆ. ಪಕ್ಕದ ತೆಲಂಗಾಣ ಸರಕಾರ ಮುಖ್ಯಮಂತ್ರಿಯಿಂದ ಹಿಡಿದು ಡಿ.ದರ್ಜೆಯ ನೌಕರರ ವರೆಗೂ ಎಲ್ಲರ ವೇತನದಲ್ಲಿ ಕಡಿತ ಮಾಡಲು ತೀರ್ಮಾನಿಸಿದೆ. ಸಚಿವರು ಮತ್ತು ಶಾಸಕರ ಶೇ. 75ರಷ್ಟು, ಐಎಎಸ್‌, ಐಪಿಎಸ್‌ ಮತ್ತು ಐಎಫ್‌ಎಸ್‌ ಅಧಿಕಾರಿಗಳ ಸಂಬಳದಲ್ಲಿ ಶೇ. 60 ಮತ್ತು ಉಳಿದ ನೌಕರರ ಸಂಬಳದಲ್ಲಿ ಶೇ. 50 ಹಾಗೂ ಡಿ ದರ್ಜೆಯ ನೌಕರರ ಸಂಬಳದಲ್ಲಿ ಶೇ.10ರಷ್ಟು ಕಡಿತ ಮಾಡಲು ನಿರ್ಧರಿಸಲಾಗಿದೆ. ಇನ್ನು ನಿವೃತ್ತ ನೌಕರರ ಪಿಂಚಣಿಯಲ್ಲಿಯೂ ಶೇ.50 ಕಡಿತ ಮಾಡಲಾಗಿದೆ. ಅದೇ ರೀತಿ ಪಕ್ಕದ ಮಹಾರಾಷ್ಟ್ರದಲ್ಲಿಯೂ ಜನಪ್ರತಿನಿಧಿಗಳು ಮತ್ತು ಉನ್ನತ ಅಧಿಕಾರಿಗಳ ಸಂಬಳದಲ್ಲಿ ಶೇ. 60 ರಷ್ಟು ಕಡಿತ ಮಾಡಲು ಅಲ್ಲಿನ ಸರಕಾರ ನಿರ್ಧರಿಸಿದೆ. ಆದರೆ ಡಿ.ದರ್ಜೆಯ ನೌಕರರ ಸಂಬಳ ಕಡಿತ ಮಾಡದಿರಲು ತೀರ್ಮಾನಿಸಿದೆ.

ರಾಜ್ಯದಲ್ಲೂ ಕತ್ತರಿ ಸಾಧ್ಯತೆ
ರಾಜ್ಯದಲ್ಲಿಯೂ ಕೋವಿಡ್ 19 ವೈರಸ್‌ ವೇಗವಾಗಿ ಹರಡುತ್ತಿದ್ದು, ಅದರ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಾಕಷ್ಟು ಯತ್ನ ನಡೆಸುತ್ತಿದೆ. ಅಲ್ಲದೆ ಕೋವಿಡ್ 19 ನಿಯಂತ್ರಣಕ್ಕೆ ಅಗತ್ಯವಿರುವ ಆರ್ಥಿಕ ನೆರವಿಗೆ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುತ್ತಿದೆ. ಅಲ್ಲದೇ ರಾಜ್ಯದ ಬೊಕ್ಕಸಕ್ಕೆ ಬರಬೇಕಾಗಿದ್ದ ಮೋಟಾರು ವಾಹನ, ಅಬಕಾರಿ ಮತ್ತು ಆಸ್ತಿ ನೋಂದಣಿ ತೆರಿಗೆಗಳು ಸಂಪೂರ್ಣ ಸ್ಥಗಿತಗೊಂಡಿರುವುದರಿಂದ ಒಂದು ತಿಂಗಳಲ್ಲಿ ಸುಮಾರು ಮೂರುವರೆಯಿಂದ ನಾಲ್ಕು ಸಾವಿರ ಕೋ. ರೂ. ತೆರಿಗೆ ಆದಾಯ ಕೈತಪ್ಪುವಂತಿದೆ.

ಸಾಮಾಜಿಕ ಯೋಜನೆ ಅಡಿಯಲ್ಲಿ ನೀಡುವ ವೃದ್ಧಾಪ್ಯ, ವಿಧವಾ, ಅಂಗವಿಕಲರ ಎರಡು ತಿಂಗಳುಗಳ ಪಿಂಚಣಿಯನ್ನು ಮುಂಚಿತವಾಗಿಯೇ ನೀಡುವ ತೀರ್ಮಾನ ಮಾಡಿರು ವುದರಿಂದ ಸರಕಾರ ಮತ್ತಷ್ಟು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಈಗಿರುವ ಸಂಕಷ್ಟದ ಪರಿಸ್ಥಿತಿಯಲ್ಲಿ ಬಾಹ್ಯ ಶಕ್ತಿಯಿಂದ ಆರ್ಥಿಕ ಸಂಪನ್ಮೂಲ ಕ್ರೋಡೀಕರಿಸಲು ಸರಕಾರ ಪರ್ಯಾಯ ಮಾರ್ಗದ ಹುಡುಕಾಟದಲ್ಲಿದೆ ಎಂದು ಹೇಳಲಾಗುತ್ತಿದೆ.

ಸ್ಪಷ್ಟ ನಿರ್ಧಾರವಾಗಿಲ್ಲ
ರಾಜ್ಯ ಸರಕಾರ ತನ್ನ ಒಟ್ಟು ಬಜೆಟ್‌ನಲ್ಲಿ ಶೇ. 30ರಷ್ಟು ಸರಕಾರಿ ನೌಕರರ ಸಂಬಳ, ಭತ್ತೆ ಮತ್ತು ಪಿಂಚಣಿಗೆ ನೀಡುತ್ತಿದೆ. ಪ್ರತಿ ತಿಂಗಳು ಸರಕಾರಿ ನೌಕರರ ಸಂಬಳ ಸುಮಾರು 6 ಸಾವಿರ ಕೋ. ರೂ.ಗಳಷ್ಟಾಗುತ್ತಿದೆ. ಒಂದು ವೇಳೆ ಸಂಬಳ ಕಡಿತ ಮಾಡಲು ನಿರ್ಧರಿಸಿದರೆ ರಾಜ್ಯ ಸರಕಾರಕ್ಕೆ ಸುಮಾರು ಎರಡರಿಂದ ಎರಡೂವರೆ ಸಾವಿರ ಕೋ. ರೂ. ಉಳಿತಾಯವಾಗಲಿದೆ. ಹೀಗಾಗಿ ಸರಕಾರಿ ನೌಕರರ ಸಂಬಳದಲ್ಲಿ ಕಡಿತ ಮಾಡುವ ಬಗ್ಗೆ ಅಧಿಕಾರಿಗಳ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿವೆ. ಆದರೆ ಈ ಬಗ್ಗೆ ಸರಕಾರದ ಮಟ್ಟದಲ್ಲಿ ಇನ್ನೂ ಯಾವುದೇ ಸ್ಪಷ್ಟ ನಿರ್ಧಾರವಾಗಿಲ್ಲ ಎನ್ನಲಾಗಿದೆ.

Advertisement

ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯ ಸರಕಾರಿ ನೌಕರರ ಪರವಾಗಿ ಇದ್ದಾರೆ. ಅವರು ಸಂಬಳ ಕಡಿತದಂಥ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂಬ ವಿಶ್ವಾಸ ನನಗಿದೆ. ಆ ರೀತಿ ಮಾಡಿದರೆ ಸರಕಾರ ನೌಕರರ ಆತ್ಮವಿಶ್ವಾಸವನ್ನು ಕುಗ್ಗಿಸಿದಂತಾಗುತ್ತದೆ. ಅದು ಸರಕಾರಿ ಕೆಲಸದ ಮೇಲೆ ಪರಿಣಾಮ ಬೀರುತ್ತದೆ.
-ಸಿ.ಎಸ್‌.ಷಡಕ್ಷರಿ, ರಾಜ್ಯ ಸರಕಾರಿ
ನೌಕರರ ಸಂಘದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next