Advertisement

ಕಳಪೆ ಕಾಮಗಾರಿಗೆ ಕಡಿವಾಣ ಹಾಕಿ

12:31 PM Jul 10, 2018 | |

ಆಲಮಟ್ಟಿ: ಕೃಷ್ಣಾಭಾಗ್ಯಜಲ ನಿಗಮ ವತಿಯಿಂದ ನಡೆಯುತ್ತಿರುವ ವಿವಿಧ ಕಾಮಗಾರಿಗಳನ್ನು ಅತಿ ಕಡಿಮೆ ದರದಲ್ಲಿ ಗುತ್ತಿಗೆದಾರರು ಪಡೆದು ಆರಂಭಿಸಿದ್ದಾರೆ. ಇದರಿಂದ ತಾಂತ್ರಿಕ ಅಭಿಯಂತರುಗಳು ಕಾಮಗಾರಿಗಳ ಅಂದಾಜು ಪತ್ರಿಕೆ ತಯಾರಿಕೆಯಲ್ಲಿ ತಪ್ಪೆಸಗಿ ಸರ್ಕಾರಕ್ಕೆ ಮೋಸ ಮಾಡುತ್ತಿದ್ದಾರೆಯೇ ಎನ್ನುವುದು ಸಾರ್ವಜನಿಕರ ಜಿಜ್ಞಾಸೆಗೆ ಕಾರಣವಾಗಿದೆ.

Advertisement

ಇತ್ತೀಚೆಗೆ ಆಲಮಟ್ಟಿಯಲ್ಲಿರುವ ಕೃಷ್ಣಾ ಕಾಡಾ ವಿಭಾಗ ಹಾಗೂ ಕೃಷ್ಣಾ ಭಾಗ್ಯಜಲ ನಿಗಮದ ಆಲಮಟ್ಟಿ ವಲಯ ವ್ಯಾಪ್ತಿಯಲ್ಲಿರುವ ಅಣೆಕಟ್ಟು ವಿಭಾಗ, ಆಲಮಟ್ಟಿ ಎಡದಂಡೆ ಕಾಲುವೆ ವಿಭಾಗ, ಆಲಮಟ್ಟಿ ಬಲದಂಡೆ ವಿಭಾಗ, ಮುಳವಾಡ ಏತ ನೀರಾವರಿ ಯೋಜನೆ ವಿಭಾಗ-1 ಹಾಗೂ 2ರಲ್ಲಿ ಕರೆದಿರುವ ಕಾಮಗಾರಿಗಳಿಗೆ ಅಧಿಕಾರಿಗಳು ತಯಾರಿಸಿದ ಅಂದಾಜು ಪತ್ರಿಕೆಯ ಶೇ. 30-45ರವರೆಗೆ ಕಡಿಮೆ ದರದಲ್ಲಿ ಗುತ್ತಿಗೆದಾರರು ಕಾಮಗಾರಿ ಮುಗಿಸಿ ಬಿಲ್‌ ಪಡೆಯುತ್ತಿದ್ದಾರೆ.
 
ಹಾಗಾದರೆ ಕಾಮಗಾರಿ ಕಳಪೆ ಮಾಡುತ್ತಾರೆಯೋ ಅಥವಾ ಅಧಿಕಾರಿಗಳು ಸರ್ಕಾರಕ್ಕೆ ಮೋಸ ಮಾಡಿ ಅಂದಾಜು ಪತ್ರಿಕೆ ತಯಾರಿಸುತ್ತಾರೆಯೋ ಎನ್ನುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಗುಣಮಟ್ಟ ಪರೀಕ್ಷೆ ವಿಭಾಗದ ಕಾರ್ಯವೇನು?: ಸರ್ಕಾರ ಎಲ್ಲ ಕಾಮಗಾರಿಗಳ ಗುಣಮಟ್ಟ ಪರೀಕ್ಷಿಸಲೆಂದೆ ಗುಣ ನಿಯಂತ್ರಣ ವಿಭಾಗ ಸ್ಥಾಪಿಸಿ ಅದಕ್ಕೊಬ್ಬರು ಅಧೀಕ್ಷಕ ಅಭಿಯಂತರರು,
ಕಾರ್ಯಪಾಲಕ ಅಭಿಯಂತರುಗಳು, ಸಹಾಯಕ ಕಾರ್ಯಪಾಲಕ ಅಭಿಯಂತರುಗಳು, ಶಾಖಾಧಿಕಾರಿಗಳನ್ನು ನೇಮಕ ಮಾಡಿದೆ. ಪ್ರತಿ ತಿಂಗಳು ಸಂಬಳದೊಂದಿಗೆ ಅವರಿಗೆ ವಿಶೇಷ ಪ್ರಯೋಗಾಲಯದ ವಾಹನ ವ್ಯವಸ್ಥೆ, ಕಾರು, ಜೀಪುಗಳು ಸೇರಿದಂತೆ ಹಲವಾರು ಸೌಲಭ್ಯ ಒದಗಿಸಿದ್ದರೂ ಅವರು ಮಾಡುತ್ತಿರುವುದಾದರೂ ಏನು? ಕಳಪೆ ಕಾಮಗಾರಿಗಳು ಕಣ್ಣಿಗೆ ರಾಚುತ್ತಿದ್ದರೂ ಕೂಡ ಯಾವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಜನ ಪ್ರಶ್ನಿಸುತ್ತಿದ್ದಾರೆ. 

ರೈತರ ಹಿತ ಕಾಪಾಡಿ
ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ಆಲಮಟ್ಟಿ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಹಾಗೂ ನಾರಾಯಣಪುರ ಬಸವಸಾಗರ ಜಲಾಶಯಗಳಿಂದ ಸುಮಾರು 6.5 ಲಕ್ಷ ಹೆಕ್ಟೇರ್‌ ಜಮೀನು ನೀರಾವರಿಗೊಳಪಡಲಿದೆ.

ಆಲಮಟ್ಟಿ ಜಲಾಶಯ ವ್ಯಾಪ್ತಿಯಲ್ಲಿ ಸುಮಾರು 85,300 ಹೆಕ್ಟೇರ್‌ ಭೂಮಿ ನೀರಾವರಿಗೊಳಪಟ್ಟರೆ ಬಸವಸಾಗರ ಜಲಾಶಯದ ನಾರಾಯಣಪುರ ಎಡದಂಡೆ, ಬಲದಂಡೆ, ಇಂಡಿ ಶಾಖಾ ಕಾಲುವೆ, ಇಂಡಿ ಏತ ನೀರಾವರಿ ಕಾಲುವೆ, ಜೇವರ್ಗಿ ಶಾಖಾ ಕಾಲುವೆ, ಮುಡಬಾಳ ಶಾಖಾ ಕಾಲುವೆ, ಮುಡಬಾಳ ಶಾಖಾ ಕಾಲುವೆ, ಶಹಾಪುರ ಶಾಖಾ ಕಾಲುವೆ, ರಾಂಪುರ ಏತ ನೀರಾವರಿ, ಬಂದಾಳ, ರಾಜನ ಕೊಳೂರ ಸೇರಿ ಸುಮಾರು 5.57 ಲಕ್ಷ ಹೆಕ್ಟೇರ್‌ ಜಮೀನು ನೀರಾವರಿಗೊಳಪಡಲಿದೆ. ಕಳಪೆ ಕಾಮಗಾರಿ ತಪ್ಪಿಸಿ ರೈತರಿಗೆ ಅನುಕೂಲ ಮಾಡಿಕೊಡುವುದು ಅವಶ್ಯವಾಗಿದೆ.

Advertisement

ನಿಗಮದಿಂದ ನಿರ್ವಹಿಸುತ್ತಿರುವ ಕಾಮಗಾರಿಗಳಲ್ಲಿ ಕಳಪೆಗೆ ಅವಕಾಶವಾಗದಂತೆ ಕ್ಲೋಜರ್‌ ಹಾಗೂ ಸ್ಪೇಷಲ್‌ ದುರಸ್ತಿ ಕಾಮಗಾರಿಗಳ ಸ್ಥಾನಿಕ ಪರಿಶೀಲನೆ ಮಾಡಿದ್ದೇನೆ. ಗುತ್ತಿಗೆದಾರರು ಕಡಿಮೆ ದರದಲ್ಲಿ ಕಾಮಗಾರಿ ಪಡೆದಿರುವುದು ಗಮನಕ್ಕೆ ಬಂದಿದೆ. ಆದರೆ ಕಾಮಗಾರಿ ನಿರ್ವಹಣೆಯಲ್ಲಿ ಕಳಪೆ ಕಂಡು ಬಂದರೆ ಬಿಲ್‌ ಪಾವತಿ ಮಾಡದಂತೆ ಸೂಚಿಸಲಾಗಿದೆ. 
 ಎಸ್‌.ಎಚ್‌.ಮಂಜಪ್ಪ ,ಕೆಬಿಜೆಎನ್ನೆಲ್‌ ಮುಖ್ಯ ಅಭಿಯಂತರ

ಸರ್ಕಾರದ ಮಾರ್ಗಸೂಚಿ ದರದಂತೆ ಪಡೆದು ಕಾಮಗಾರಿ ನಿರ್ವಹಿಸಿದರೆ ಕಳಪೆಯಾಗಲು ಸಾಧ್ಯವಿಲ್ಲ. ಶೇ. 30-40 ಕಡಿಮೆ ದರದಲ್ಲಿ ಗುತ್ತಿಗೆ ಪಡೆಯುತ್ತಿರುವ ಗುತ್ತಿಗೆದಾರರು ನಿಜವಾದ ಗುತ್ತಿಗೆದಾರರಲ್ಲ, ಅಧಿಕಾರಿಗಳೊಂದಿಗೆ ಹೊಂದಾಣಿಕೆಯಾಗಿರುವವರು.
 ಹಿರಿಯ ಗುತ್ತಿಗೆದಾರ

„ಶಂಕರ ಜಲ್ಲಿ

Advertisement

Udayavani is now on Telegram. Click here to join our channel and stay updated with the latest news.

Next