ಮುಂಬೈ: ಸ್ಮಾರ್ಟ್‌ಫೋನ್ ಉತ್ಪಾದನೆ ಸಮಯದಲ್ಲಾಗುವ ದೋಷ ಮತ್ತು ಗ್ರಾಹಕರ ಅಜಾಗರೂಕತೆಯಿಂದ ಫೋನ್ ಸ್ಪೋಟಗೊಳ್ಳುವ ಪ್ರಕರಣ ಆಗಾಗ ವರದಿಯಾಗುತ್ತಿರುತ್ತದೆ. ಈ ಬಾರಿ ಮುಂಬಯಿಯ ಗ್ರಾಹಕರೋರ್ವರು ತಾವು ಹೊಸದಾಗಿ ಖರೀದಿಸಿದ ಫೋನ್ ಸ್ಪೋಟಗೊಂಡಿದೆ ಎಂದು ಫೇಸ್‌ಬುಕ್‌ನಲ್ಲಿ ಆಳಲು ತೋಡಿಕೊಂಡಿದ್ದಾರೆ.
ಹೌದು. ಚೀನಾ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಿಕ ಕಂಪನಿಯ ಹೊಸ ಫೋನ್ ಒಂದು ಸ್ಫೋಟಗೊಂಡಿದೆ. ಈ ಬಗ್ಗೆ ಮುಂಬಯಿಯ ಗ್ರಾಹಕರೋರ್ವರು ತಮ್ಮ ಫೇಸ್‌ಬುಕ್‌ನಲ್ಲಿ ಅಸಮಾಧಾನ ತೋಡಿಕೊಂಡಿದ್ದಾರೆ.
ಈಗಾಗಲೇ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿರುವ ರೆಡ್ ಮಿ ನೋಟ್ ಸ್ಪೋಟಗೊಂಡಿರುವ ಮೊಬೈಲ್. ಈಶ್ವರ್ ಚೌಹಾಣ್ ಎಂಬ ವ್ಯಕ್ತಿ ಆಕ್ಟೋಬರ್ ನಲ್ಲಿ ಫ್ಲಿಪ್‌ಕಾರ್ಟ್ ಮೂಲಕ ರೆಡ್ ಮಿ ನೋಟ್ 7S ಸ್ಮಾರ್ಟ್‌ಫೋನ್ ಖರೀದಿಸಿದ್ದರು. ಆದರೆ ನವೆಂಬರ್ ಮೊದಲ ವಾರದಲ್ಲಿ ಟೇಬಲ್ ಮೇಲಿರಿಸಿದ್ದ ರೆಡ್ ಮಿ ಫೋನ್‌ನಿಂದ ಹೊಗೆ ಏಳಲಾರಂಭಿಸಿ ಸುಟ್ಟು ಹೋಗಿತ್ತು.
ಆ ಸಂದರ್ಭದಲ್ಲಿ ಫೋನನ್ನು ಚಾರ್ಜ್ ಮಾಡುತ್ತಿರಲಿಲ್ಲಅದರ ಜೊತೆಗೆ ಕೆಳಗಡೆಯೂ ಬೀಳಿಸಿಲ್ಲ ಎಂದು ಚೌಹಾಣ್ ಬರೆದುಕೊಂಡಿದ್ದಾರೆ. ಥಾಣೆಯಲ್ಲಿನ ಶಿಯೋಮಿ ಅಧಿಕೃತ ಸೆಂಟರ್‌ಗೆ ತೆರಳಿ ಈ ಫೋನ್ ಸ್ಫೋಟದ ಕುರಿತು ಮಾಹಿತಿಯೂ ನೀಡಿದ್ದರು. ಆ ಸಂದರ್ಭದಲ್ಲಿ ಫೋನ್ ಬ್ಯಾಟರಿಯಲ್ಲಿ ಸಮಸ್ಯೆ ಇತ್ತು ಎಂದು ಸೆಂಟರ್‌ನವರು ತಿಳಿಸಿದ್ದಾಗಿ ಈಶ್ವರ್ ಬರೆದುಕೊಂಡಿದ್ದಾರೆ.
ಈ ಆರೋಪವನ್ನು ಶಿಯೋಮಿ ನಿರಾಕರಿಸಿದ್ದು, ಬಾಹ್ಯ ಒತ್ತಡದಿಂದ ಮತ್ತು ಗ್ರಾಹಕರು ಅಜಾಗರೂಕತೆಯಿಂದ ಬಳಸಿದ್ದರಿಂದ ಫೋನ್‌ಗೆ ಹಾನಿಯಾಗಿದೆ. ಗ್ರಾಹಕರ ನಿರ್ಲಕ್ಷ್ಯವೇ ಫೋನ್ ಸ್ಫೋಟಗೊಳ್ಳಲು ಪ್ರಮುಖ ಕಾರಣ ಎಂದು ಶಿವೋಮಿ ಮಾಧ್ಯಮವೊಂದಕ್ಕೆ ಸ್ಪಷ್ಟನೆ ನೀಡಿದ್ದಾರೆ.