Advertisement

ಸಹಪಠ್ಯ ಚಟುವಟಿಕೆಗಳು ಸೃಜನಶೀಲತೆ ಪ್ರತೀಕ

06:07 PM Mar 07, 2022 | Team Udayavani |

ಧಾರವಾಡ: ಕೋವಿಡ್‌-19 ಕಾರಣದಿಂದ ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಈ ಬದಲಾವಣೆಗಳ ನಡುವೆಯೇ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದು ಶಿಕ್ಷಣ ವ್ಯವಸ್ಥೆಯ ಜವಾಬ್ದಾರಿಯಾಗಿದೆ ಎಂದು ಪ್ರಾಚಾರ್ಯರಾದ ಭಾರತಿ ಶಾನಭಾಗ ಹೇಳಿದರು.

Advertisement

ಜೆಎಸ್ಸೆಸ್‌ ಆರ್‌.ಎಸ್‌ ಹುಕ್ಕೇರಿಕರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕನ್ನಡ ಪ್ರತಿಭಾ ಪರೀಕ್ಷೆ ಹಾಗೂ ವಿಜ್ಞಾನ ಪ್ರತಿಭಾ ಪರೀಕ್ಷೆಗಳಲ್ಲಿ ರ್‍ಯಾಂಕ್‌ ಪಡೆದ ವಿದ್ಯಾರ್ಥಿಗಳಿಗೆ ಪದಕ ಹಾಗೂ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.

ಪಠ್ಯದ ಜತೆ ಜತೆಗೆ ಸಹಪಠ್ಯ ಚಟುವಟಿಕೆಗಳ ವಿವಿಧ ಸ್ಪರ್ಧೆ ಹಾಗೂ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕು. ಇವು ವಿದ್ಯಾರ್ಥಿಗಳ ಸೃಜನಶೀಲತೆಯ ಪ್ರತೀಕ ಎಂದರು. ಸಂಯೋಜಕ ಡಾ| ಜಿ.ಕೃಷ್ಣಮೂರ್ತಿ ಮಾತನಾಡಿ, ವಿದ್ಯಾರ್ಥಿ ಹಾಗೂ ಉಪನ್ಯಾಸಕರ ಶ್ರಮ-ಆಸಕ್ತಿಯಿಂದ ಪ್ರತಿವರ್ಷವೂ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ನಮ್ಮ ಮಹಾವಿದ್ಯಾಲಯದ ಸಾಧನೆ ಏರುಮುಖದಲ್ಲಿ ಸಾಗುತ್ತಿದೆ. ಅದಕ್ಕೆ ಆಡಳಿತ ಮಂಡಳಿ ಸಹಕಾರವೂ ತುಂಬಾ ಶ್ಲಾಘನೀಯವಾದುದು ಎಂದು ಹೇಳಿದರು.

ರಾಜ್ಯಮಟ್ಟದಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ, ಮಾರ್ಗದರ್ಶಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ ಡಾ| ಶಿವಾನಂದ ಟವಳಿ ಅವರಿಗೆ ಚಿತ್ರದುರ್ಗದ ಸಿರಿಗನ್ನಡ ಪ್ರಕಾಶನವು ಕೊಡುವ ಕನ್ನಡ ನಿಧಿ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಹ ಮಾರ್ಗದರ್ಶಿ ಉಪನ್ಯಾಸಕ ವೀರೇಂದ್ರಕುಮಾರ ಎಂ.ಎಸ್‌. ಅವರಿಗೆ ಗೌರವಿಸಲಾಯಿತು. ವಿಜ್ಞಾನ ಪ್ರತಿಭಾ ಪರೀಕ್ಷೆಯನ್ನು ಸಂಘಟಿಸಿ ರಾಜ್ಯ ರ್‍ಯಾಂಕ್‌ ಪಡೆಯುವಂತೆ ಪ್ರೇರೇಪಿಸಿದ ಮಾರ್ಗದರ್ಶಿ ಉಪನ್ಯಾಸಕಿ ಡಾ| ವಿಜಯಲಕ್ಷ್ಮೀ ದಂಡಿನ ಅವರಿಗೆ ರಾಜ್ಯಮಟ್ಟದ ಉತ್ತಮ ಸಂಘಟಕರು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಹ ಮಾರ್ಗದರ್ಶಿ ಉಪನ್ಯಾಸಕಿ ವಿಜಯಲಕ್ಷ್ಮೀ ಬೆಟಗೇರಿ ಹಾಗೂ ಸೌಭಾಗ್ಯವತಿ ಮೆಣಶಿ ಅವರಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.

Advertisement

ಸಾಧನೆಗೆ ಕಾರಣೀಕರ್ತ ಉಪನ್ಯಾಸಕರನ್ನು ಮತ್ತು ರ್‍ಯಾಂಕ್‌ ವಿಜೇತ ವಿದ್ಯಾರ್ಥಿಗಳಿಗೆ ಸಂಸ್ಥೆಯ ಕಾರ್ಯದರ್ಶಿ ಡಾ| ನ. ವಜ್ರಕುಮಾರ, ವಿತ್ತಾಧಿಕಾರಿ ಡಾ| ಅಜಿತಪ್ರಸಾದ ಹಾಗೂ ಅಭಿವೃದ್ಧಿ ಅಧಿಕಾರಿ ಡಾ| ಸೂರಜ ಜೈನ ಅಭಿನಂದಿಸಿದ್ದಾರೆ. ಕನ್ನಡ ವಿಭಾಗ ಮುಖ್ಯಸ್ಥ ಡಾ| ಗೋವಿಂದರಾಜ ತಳಕೋಡ ಪ್ರಾಸ್ತಾವಿಕ ಮಾತನಾಡಿದರು. ಡಾ| ಶಿವಾನಂದ ಟವಳಿ ನಿರೂಪಿಸಿದರು. ಡಾ| ಸಂಗಯ್ಯ ಶಿವಪ್ಪಯ್ಯನಮಠ ಸ್ವಾಗತಿಸಿದರು. ಡಾ| ವಿಜಯಲಕ್ಷ್ಮೀ ದಂಡಿನ ವಂದಿಸಿದರು.

ಫಲಿತಾಂಶ ಪ್ರಕಟ
120 ವಿದ್ಯಾರ್ಥಿಗಳು ಕನ್ನಡ ಪ್ರತಿಭಾ ಪರೀಕ್ಷೆಗೆ ಹಾಜರಾಗಿದ್ದು, ರಾಜ್ಯಕ್ಕೆ ಮೂರು ರ್‍ಯಾಂಕ್‌ಗಳು ಬಂದಿವೆ. ವೀಣಾ ಗೌಡಪ್ಪಗೌಡ ದ್ವಿತೀಯ ಹಾಗೂ ಸ್ನೇಹಾ ಬಾಲರೆಡ್ಡಿ, ಸಾಕ್ಷಿ ಹಿರೇಮಠ ತೃತೀಯ ರ್‍ಯಾಂಕ್‌ ಪಡೆದಿದ್ದಾರೆ. ಇದಲ್ಲದೇ 5 ವಿದ್ಯಾರ್ಥಿಗಳು ಜಿಲ್ಲಾ ರ್‍ಯಾಂಕ್‌, 4 ವಿದ್ಯಾರ್ಥಿಗಳು ತಾಲೂಕಾ ರ್‍ಯಾಂಕ್‌ ಪಡೆಯುವುದರೊಂದಿಗೆ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ. ವಿಜ್ಞಾನ ಪ್ರತಿಭಾ ಪರೀಕ್ಷೆಯಲ್ಲಿ ಒಟ್ಟು 41 ವಿದ್ಯಾರ್ಥಿಗಳು ಭಾಗವಹಿಸಿದ್ದು, ಝಾಖೀಯಾ ಶಿರಹಟ್ಟಿ ರಾಜ್ಯಮಟ್ಟದಲ್ಲಿ 4ನೇ ರ್‍ಯಾಂಕ್‌ ಪಡೆದಿದ್ದಾಳೆ. ಇಬ್ಬರು ಜಿಲ್ಲಾ ರ್‍ಯಾಂಕ್‌, ಒಬ್ಬ ತಾಲೂಕಾ ರ್‍ಯಾಂಕ್‌ ಪಡೆಯುವುದರೊಂದಿಗೆ 37 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next