Advertisement

ವರ್ತಮಾನದ ಸಾಮರಸ್ಯ ಕಾದಂಬರಿ

12:23 PM Mar 12, 2018 | Team Udayavani |

ಬೆಂಗಳೂರು: ಗೋಪಾಲಕೃಷ್ಣ ಪೈ ಅವರ “ಸ್ವಪ್ನ ಸಾರಸ್ವತ’ ಕಾದಂಬರಿಯು ಚರಿತ್ರೆ, ವರ್ತಮಾನ ಮತ್ತು ಒಂದು ಜನಾಂಗದ ಕಥೆಯನ್ನು ಒಟ್ಟಿಗೆ ಸೇರಿಸಿ ಇಂದಿನ ಅನುಭವವಾಗಿ ಅದನ್ನು ಸೃಷ್ಟಿಸಿಕೊಡುತ್ತದೆ ಎಂದು ಖ್ಯಾತ ವಿಮರ್ಶಕ ಎಸ್‌.ಆರ್‌.ವಿಜಯಶಂಕರ ಅವರು ಅಭಿಪ್ರಾಯ ಪಟ್ಟರು.

Advertisement

ಶಿವರಾಮ ಕಾರಂತ ವೇದಿಕೆ  ತಿಂಗಳ ಕಾರ್ಯಕ್ರಮದಡಿ ಆರ್‌ಟಿ ನಗರದ ತರಳಬಾಳು ಕೇಂದ್ರದ ಗ್ರಂಥಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಲೇಖಕ ಗೋಪಾಲಕೃಷ್ಣ ಪೈ ಅವರ “ಸ್ವಪ್ನ ಸಾರಸ್ವತ’ ಕಾದಂಬರಿ ಕುರಿತ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗೋವಾದ ವೆರಣೆಯಿಂದ ಪೋರ್ಚ್‌ಗೀಸ್‌ ದಾಳಿಯಿಂದ ತಪ್ಪಿಸಿಕೊಳ್ಳಲು ದಕ್ಷಿಣಾಭಿಮೂಖವಾಗಿ ವಲಸೆ ಬಂದಂತಹ ಸಾರಸ್ವತ ಸಮುದಾಯದ ವಲಸೆಯನ್ನು ಲೇಖಕ ಗೋಪಾಲಕೃಷ್ಣ  ಪೈಗಳು ನಮ್ಮ ಕಾಲದ ಕಥೆಯಾಗಿ ಪರಿವರ್ತಿಸಿಕೊಡುತ್ತಾರೆ ಎಂದು ಹೇಳಿದರು.

ವಲಸೆಯಲ್ಲಿ ಹಲವು ವಿಧಗಳನ್ನು ನಾವು ಗುರುತಿಸಬಹುದು. ಹೊರಗಿನ ಆಕ್ರಮಣಕ್ಕೆ ಹೆದರಿ ವಲಸೆ ಹೋಗಬೇಕಾಗಿರುವುದು ಒಂದು ಸ್ಥಿತಿ. ಅದೇ ರೀತಿ ಇಂದು ಜಗತ್ತಿನಾದ್ಯಂತ ವ್ಯಕ್ತಿ ವಿಕಾಸಕ್ಕಾಗಿ ಜನರು ವಲಸೆ ಹೋಗುವುದು ಇದೆ. ಭಾರತದಿಂದ ವಿದೇಶಗಳಿಗೆ ವಲಸೆ ಹೋಗುವ ಪ್ರಜೆಗಳು ತಮ್ಮ ಅವಶ್ಯಕತೆಗಾಗಿ ಒಳಗಿನ ಒತ್ತಡದಿಂದ ವಲಸೆ ಹೋಗುತ್ತಾರೆ ಎಂದು ತಿಳಿಸಿದರು.

 ಚಾರಿತ್ರಿಕವಾಗಿ ಸಾರಸ್ವತ ಸಮುದಾಯ ಹೊರಗಿನ ಆಕ್ರಮಣದಿಂದ ವಲಸೆ ಬಂದವರು. ಕಾದಂಬರಿಯಲ್ಲಿ ಕುಂಬ್ಳೆಯಲ್ಲಿ ರಾಮಚಂದ್ರ ಪೈ ನೆಲೆ ನಿಂತು, ತಮ್ಮ ವ್ಯಾಪಾರ ವ್ಯವಹಾರವನ್ನು ಉತ್ತಮ ಗೊಳಿಸಿದ ಬಳಿಕ ಬಳ್ಳಂಬೆಟ್ಟುನಲ್ಲಿ ಆಸ್ತಿ ಖರೀದಿಸಿ ವ್ಯಾಪಾರವನ್ನು ಬಿಟ್ಟು ಕೃಷಿಗೆ ತೆರಳುತ್ತಾರೆ. ಇದು  ಕೂಡ ಒಂದು ರೀತಿಯ ಒಳ ವಲಸೆ ಆಗಿದೆ ಎಂದರು.

Advertisement

ಚರ (ವ್ಯಾಪಾರ) ಮತ್ತು ಅಚರ(ಕೃಷಿ) ಎರಡರಲ್ಲೂ ತೊಡಗಿಕೊಂಡ ಸಮುದಾಯ ಹಲವು ಹೊಸ ಸಮಸ್ಯೆಗಳನ್ನು ಎದುರಿಸುತ್ತವೆ. ಹೀಗೆ ಚರಿತ್ರಿಯೆ ವಿವರಗಳನ್ನು ಕಾದಂಬರಿಯು ಅನುಭವ ಸತ್ಯವಾಗಿ ಓದುಗರಿಗೆ ನೀಡುತ್ತಿದೆ ಎಂದು ಹೇಳಿದರು. ಬೆಂಗಳೂರು ವಿವಿಯ ಕನ್ನಡ ಪ್ರಾಧ್ಯಾಪಕಿ ಡಾ.ಎಚ್‌.ಶಶಿಕಲಾ ಮಾತನಾಡಿ, ಸ್ವಪ್ನ ಸಾರಸ್ವತ ಕೃತಿಯು ಕೇವಲ ಗೌಡ ಸಾರಸ್ವತ ಬ್ರಾಹ್ಮಣರ ಕಥೆ ಅಲ್ಲ, ಇದೊಂದು ಮಾನವ ಸಮುದಾಯದ ಅನುಭವಗಳ ರೂಪಕವಾಗಿದೆ ಎಂದರು.

ಇದೇ ವೇಳೆ ಲೇಖಕ ಗೋಪಾಲಕೃಷ್ಣ  ಪೈಗಳ ಜತೆ ಸಂವಾದ ಕಾರ್ಯಕ್ರಮ ನಡೆಯಿತು. ನಾಗೊ ಬೇತಾಳ ಸೃಷ್ಟಿಯ ಹಿನ್ನೆಲೆಯ ಬಗ್ಗೆ ಕೇಳಿದ ಪ್ರಶ್ನೆಗೆ ಅವರು, ಆ ಪಾತ್ರವು ಸಮುದಾಯ ಕಲ್ಪನೆಯ ಮಾನಸಿಕ ಶಕ್ತಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶಿವರಾಮ ಕಾಂರತ ವೇದಿಕೆಯ ಕಾರ್ಯದರ್ಶಿ ಪಾ.ಚಂದ್ರಶೇಖರ ಚಡಗ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next