Advertisement
ಹಾಲಿ ಸಂಸದ ಎಂ.ವೀರಪ್ಪ ಮೊಯ್ಲಿ ಎರಡು ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆದ್ದು, ಸತತ ಮೂರನೇ ಬಾರಿ ಗೆಲುವಿಗೆ ಕಸರತ್ತು ನಡೆಸಲಿದ್ದಾರೆ. ಕಳೆದ ಚುನಾವಣೆಯಲ್ಲಿ ವೀರಪ್ಪ ಮೊಯ್ಲಿಯವರ ಪ್ರತಿಸ್ಪರ್ಧಿಯಾಗಿದ್ದ ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ 10ಸಾವಿರ ಮತಗಳ ಅಂತರದಿಂದ ಸೋಲುಂಡಿದ್ದರು. ಹಾಗಾಗಿ, ಈ ಬಾರಿ ಮತ್ತೆ ಬಿಜೆಪಿಯಿಂದ ಸ್ಪರ್ಧೆಗಿಳಿಯುವ ಮಾಜಿ ಸಚಿವ ಬಿ.ಎನ್.ಬಚ್ಚೇಗೌಡರು ಸಂಘಟನೆಯನ್ನು ಚುರುಕುಗೊಳಿಸಿದ್ದಾರೆ.
Related Articles
Advertisement
ಆದರೆ, ಆ ಸಂದರ್ಭದಲ್ಲಿ ನರೇಂದ್ರ ಮೋದಿ ಹವಾ ಎಲ್ಲೆಂದರಲ್ಲೇ ಸಂಚಲನ ಸೃಷ್ಟಿಸಿತ್ತು ಎಂಬುದನ್ನು ಬಿಜೆಪಿ ಮುಖಂಡರು ಒಪ್ಪಿಕೊಳ್ಳುತ್ತಾರೆ. ಪ್ರಸ್ತುತ ರಾಜ್ಯ ಸಮಿಶ್ರ ಸರ್ಕಾರದ ಚುಕ್ಕಾಣಿ ಹಿಡಿದಿರುವ ಜೆಡಿಎಸ್ ಪಟ್ಟು ಹಿಡಿದಿರುವ ಕ್ಷೇತ್ರಗಳಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವೂ ಸೇರಿರುವುದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಯಾರೆಂಬುದು ಇನ್ನೂ ಪಕ್ಕಾ ಆಗಿಲ್ಲ.
ದೇವೇಗೌಡರ ಸ್ಪರ್ಧೆಗೆ ಒತ್ತಡ: ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡದಿರಲು ಜೆಡಿಎಸ್‌ನ ಸ್ಥಳೀಯ ಮುಖಂಡರು ಪಟ್ಟು ಹಿಡಿದಿದ್ದಾರೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕಣಕ್ಕೆ ಇಳಿಯಲಿದ್ದಾರೆ ಎಂಬ ವದಂತಿಗಳು ಹೊರಬೀಳುತ್ತಿದ್ದಂತೆ, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಸ್ಪರ್ಧೆಗೆ ಒತ್ತಡ ಹೆಚ್ಚಾಗುತ್ತಿದೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಯಾರು ಎನ್ನುವುದು ಕುಂತಲ್ಲಿ, ನಿಂತಲ್ಲಿ ಚರ್ಚಿತವಾಗುತ್ತಿದೆ.
ಪಕ್ಷದ ಬಲ, ವ್ಯಕ್ತಿಗತ ವರ್ಚಸ್ಸು: ಕಳೆದ ಚುನಾವಣೆ ಸಂದರ್ಭದಲ್ಲೂ ಪಕ್ಷಗಳ ಬಲಾಬಲ ಅಷ್ಟೇ ಇತು ಎನ್ನುವುದು ಇಲ್ಲಿ ಗಮನಿಸಬೇಕಾದ ಮಹತ್ವದ ಅಂಶವಾಗಿದೆ. 1977 ರಿಂದ 2014ರ ವರೆಗೆ ನಡೆದ 11 ಚುನಾವಣೆಗಳ ಪೈಕಿ 10 ಬಾರಿ ಕಾಂಗ್ರೆಸ್, ಒಂದು ಬಾರಿ ಜನತಾದಳ ಗೆದ್ದಿದೆ. ವಿ.ಕೃಷ್ಣರಾವ್ ಮತ್ತು ಆರ್.ಎಲ್.ಜಾಲಪ್ಪ ಸತತ ನಾಲ್ಕು ಬಾರಿ ಮತ್ತು ಮೊಯ್ಲಿ ಸತತ ಎರಡು ಬಾರಿ ಜಯ ಗಳಿಸಿದ್ದಾರೆ. ಜಾತಿ ಹಿನ್ನೆ°ಲೆಗಿಂತ ಪಕ್ಷದ ಬಲ ಮತ್ತು ವೈಯಕ್ತಿಕ ವರ್ಚಸ್ಸಿನಿಂದಲೇ ಅಭ್ಯರ್ಥಿಗಳ ಕೊರಳಿಗೆ ಜಯದ ಮಾಲೆ ಬೀಳುವುದು ಇಲ್ಲಿನ ವಿಶೇಷವಾಗಿದೆ.
ನ್ಯಾ.ಗೋಪಾಲಗೌಡ ಜೆಡಿಎಸ್ ಅಭ್ಯರ್ಥಿ?: ಈ ಲೆಕ್ಕಾಚಾರದಿಂದಲೇ ಸಂಸದ ವೀರಪ್ಪ ಮೊಯ್ಲಿ ಯಾವುದೇ ಕಾರಣಕ್ಕೂ ಜೆಡಿಎಸ್‌ಗೆ ಟಿಕೆಟ್ ನೀಡಬಾರದು. ಕಾಂಗ್ರೆಸ್ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕೆಂದು ಬಲವಾದ ಒತ್ತಡ ಹೇರುತ್ತಿದ್ದಾರೆಂದು ಪಕ್ಷದ ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಇವೆಲ್ಲದ ನಡುವೆ ಶತಾಯ ಗತಾಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲೇಬೇಕು.
ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯಕ್ಕೆ ಆದ್ಯತೆ ನೀಡಬೇಕೆಂದು ಹೇಳಲಾಗುತ್ತಿದೆ. ಈ ಬಗ್ಗೆ ಜೆಡಿಎಸ್‌ನ ಹಿರಿಯ ಮುಖಂಡರು ಸರ್ವೋತ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡರ ಹೆಸರನ್ನು ಈಗಾಗಲೇ ತೇಲಿಬಿಟ್ಟಿದ್ದಾರೆ. ಬಿಎಸ್‌ಪಿಯಿಂದ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ದ್ವಾರಕನಾಥ್ ಈಗಾಗಲೇ ಕ್ಷೇತ್ರದಲ್ಲಿ ಸಂಚಾರ ಕೈಗೊಂಡಿದ್ದಾರೆ.
ರೈತಸಂಘಟನೆ ಹೆಚ್ಚಾಗಿರುವ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ರೈತಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಕಣಕ್ಕಿಳಿಯಲು ಪೂರ್ವ ಸಿದ್ಧತೆ ಮಾಡಿಕೊಂಡಿದ್ದಾರೆ. 7.5 ಲಕ್ಷಕ್ಕೂ ಹೆಚ್ಚು ಪರಿಶಿಷ್ಟ ವರ್ಗಗಳ ಮತಗಳ ಮೇಲೆ ಕಣ್ಣಿಟ್ಟಿರುವ ಬಿಎಸ್‌ಪಿ ಈ ಬಾರಿ ಪ್ರಗತಿಪರ ಚಿಂತಕ ಡಾ.ದ್ವಾರಕನಾಥ್‌ರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಸಮಿಶ್ರ ಸರ್ಕಾರದಲ್ಲಿ ಅಧಿಕೃತ ಅಭ್ಯರ್ಥಿ ಯಾರೆಂಬುದು ಘೋಷಣೆಯಾದ ನಂತರ ಎಲ್ಲವೂ ಸ್ಪಷ್ಟವಾಗಲಿದೆ.
* ಎಸ್.ಮಹೇಶ್