ಅಥಣಿ: ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಸಂಕ್ರಮಣ ನಿಮಿತ್ತ ಶನಿವಾರ ಆರೆಸ್ಸೆಸ್ ಮುಖಂಡ ಅರವಿಂದರಾವ್ ದೇಶಪಾಂಡೆ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿರುವುದು ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಸಂಕ್ರಮಣ ನಂತರ ರಾಜ್ಯ ಸರ್ಕಾರದ ಸಂಪುಟ ವಿಸ್ತರಣೆ ಸಂದರ್ಭ ತಮ್ಮನ್ನು ಪರಿಗಣಿಸುವಂತೆ ಕೇಳಿಕೊಂಡಿದ್ದಾರೆಂದು ತಿಳಿದು ಬಂದಿದ್ದು, ರಮೇಶ ಜಾರಕಿಹೊಳಿ ಅವರಿಗೆ ಮತ್ತೆ ಸಂಪುಟ ದರ್ಜೆ ಸಚಿವ ಸ್ಥಾನ ಸಿಗಲಿದೆ ಎನ್ನುವ ಮಾತುಗಳು ಅವರ ಬೆಂಬಲಿಗರಿಂದ ಕೇಳಿಬರುತ್ತಿವೆ.
ಅರವಿಂದರಾವ್ ಅವರನ್ನು ಭೇಟಿಯಾಗಿ ಒಂದು ತಾಸು ಮಾತುಕತೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲ ವಿಷಯ ಮಾಧ್ಯಮದ ಮುಂದೆ ಹೇಳಲು ಸಾಧ್ಯವಿಲ್ಲ. ಆರೆಸ್ಸೆಸ್ ಹಿರಿಯ ಮುಖಂಡ ಅರವಿಂದಜೀ ಅವರನ್ನು ಸಂಕ್ರಮಣ ನಿಮಿತ್ತ ಭೇಟಿಯಾಗಿ ಹಬ್ಬದ ಶುಭ ಕೋರಿದ್ದೇನೆಯೇ ಹೊರತು ಯಾವುದೇ ರಾಜಕಾರಣದ ಮಾತಿಲ್ಲ ಎಂದರು.
ಇದನ್ನೂ ಓದಿ:ಶಿಕ್ಷಣ ಸಂಸ್ಥೆಗಳ ನಿಯಮ ಪಾಲನೆ ವಿದ್ಯಾರ್ಥಿಗಳ ಕರ್ತವ್ಯ
ಸಚಿವ ಸಂಪುಟ ಪುನಾರಚನೆಗೆ ಬಿಜೆಪಿ ಪಾಳಯದಲ್ಲಿ ಒತ್ತಡ ಹೆಚ್ಚುತ್ತಿದೆ. ಕೆಲ ದಿನಗಳ ಹಿಂದಷ್ಟೇ ಶಾಸಕ ರೇಣುಕಾಚಾರ್ಯ ಕೂಡಾ, “ ಸಿಎಂ ಹೊರತುಪಡಿಸಿ ಉಳಿದೆಲ್ಲಾ ಬದಲಾಗಬೇಕು. ಅದೇ ಮುಖಗಳನ್ನು ನೋಡಿ ಸಾಕಾಗಿದೆ” ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು.