ನವದೆಹಲಿ: ದೇಶಾದ್ಯಂತ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ನಡುವೆಯೇ ಉತ್ತರಪ್ರದೇಶದಲ್ಲಿ ಬೃಹತ್ ಚುನಾವಣಾ ರಾಲಿಗಳನ್ನು ನಡೆಸುತ್ತಿರುವ ಬಗ್ಗೆ ಪಕ್ಷದ ವಿರುದ್ಧವೇ ಪಿಲಿಭಿಟ್ ಸಂಸದ ವರುಣ್ ಗಾಂಧಿ ಸೋಮವಾರ (ಡಿಸೆಂಬರ್ 27) ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ:ಅಫ್ಘಾನ್ ನಲ್ಲಿ ಚುನಾವಣೆ ಆಯೋಗವನ್ನೇ ವಿಸರ್ಜಿಸಿದ ತಾಲಿಬಾನ್ ಸರ್ಕಾರ!
“ ರಾತ್ರಿ ವೇಳೆ ಕರ್ಫ್ಯೂ ಹೇರುವುದು ಮತ್ತು ಹಗಲು ಚುನಾವಣಾ ರಾಲಿಗಳಿಗೆ ಲಕ್ಷಾಂತರ ಜನರನ್ನು ಸೇರಿಸುವುದು, ಇದು ಜನಸಾಮಾನ್ಯರ ಗ್ರಹಿಕೆಯನ್ನು ಮೀರಿದ್ದಾಗಿದೆ ಎಂದು ವರುಣ್ ಗಾಂಧಿ ಟ್ವೀಟ್ ನಲ್ಲಿ ಟೀಕಿಸಿದ್ದಾರೆ.
ಉತ್ತರಪ್ರದೇಶದಲ್ಲಿರುವ ನಿಗದಿತ ಆರೋಗ್ಯ ಕೇಂದ್ರಗಳನ್ನು ಗಮನಿಸಿದರೆ, ನಮ್ಮ ಆದ್ಯತೆ ಗಂಭೀರ ಸ್ವರೂಪದ ಒಮಿಕ್ರಾನ್ ಹರಡುವುದನ್ನು ತಡೆಗಟ್ಟುವುದಾಗಿದೆಯೋ ಅಥವಾ ಚುನಾವಣಾ ಕಣದ ಶಕ್ತಿಯ ಪ್ರದರ್ಶನ ಮಾಡುವುದೇ ನಮ್ಮ ಆದ್ಯತೆಯಾಗಿದೆಯೇ ಎಂಬುದನ್ನು ನಾವು ಪ್ರಾಮಾಣಿಕವಾಗಿ ನಿರ್ಧರಿಸಬೇಕಾಗಿದೆ ಎಂದು ಗಾಂಧಿ ಕೇಂದ್ರ ಸರ್ಕಾರದ ನಿಲುವಿನ ವಿರುದ್ಧ ಹರಿಹಾಯ್ದಿದ್ದಾರೆ.
ಡಿಸೆಂಬರ್ 25ರಂದು ಉತ್ತರಪ್ರದೇಶದ ಗಾಜಿಯಾಬಾದ್ ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಜನ್ ವಿಶ್ವಾಸ್ ಯಾತ್ರೆಯಲ್ಲಿ ಭಾಗವಹಿಸಿದ್ದರು. ಅಷ್ಟೇ ಅಲ್ಲ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳುವ ಸಭೆಗಳಲ್ಲಿಯೂ ಯೋಗಿ ಭಾಗವಹಿಸುತ್ತಾರೆ. ಇದು ಚುನಾವಣೆಗಳು ಸಮೀಪಿಸುತ್ತಿರುವ ಸಂದರ್ಭದಲ್ಲಿಯೇ ಈ ಬೆಳವಣಿಗೆ ನಡೆಯುತ್ತಿದೆ ಎಂದು ವರುಣ್ ಗಾಂಧಿ ಅಸಮಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.
ಒಮಿಕ್ರಾನ್ ಪ್ರಕರಣಗಳ ಸ್ಥಿತಿಗತಿ ಕುರಿತು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಡಿಸೆಂಬರ್ 23ರಂದು ಉನ್ನತ ಮಟ್ಟದ ಸಭೆ ನಡೆದಿದೆ. ಈ ಕೋವಿಡ್ ನ ಹೊಸ ರೂಪಾಂತರ ತಳಿ ಬಗ್ಗೆ ನಾವು ವಿವೇಕಯುತವಾಗಿ ಹಾಗೂ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕಾದ ಅಗತ್ಯತೆ ಇದೆ ಎಂದು ವರುಣ್ ಗಾಂಧಿ ಪ್ರತಿಪಾದಿಸಿದ್ದಾರೆ.