ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ಸಾರಿಗೆ ವಿಭಾಗದ 11 ಸಿಬ್ಬಂದಿಗೆ ಕಾಣಿಸಿಕೊಂಡಿದ್ದ ಕೋವಿಡ್ ಸೋಂಕಿತರೆಲ್ಲ ಗುಣಮುಖರಾಗಿದ್ದು, ಅವರಲ್ಲಿ 8 ಜನರು ಬಿಡುಗಡೆಗೊಂಡಿದ್ದಾರೆ. ಇನ್ನುಳಿದ ಮೂವರು ಒಂದೆರಡು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಗೊಳ್ಳಲಿ ದ್ದಾರೆಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ಸೋಂಕಿತರನ್ನು ಕಿಮ್ಸ್ ಆಸ್ಪತ್ರೆ ಮತ್ತು ವಿವಿಧ ಕೋವಿಡ್ ಚಿಕಿತ್ಸಾ ಕೇಂದ್ರಗಳಲ್ಲಿ ದಾಖಲಿಸಲಾಗಿತ್ತು. ಆಸ್ಪತ್ರೆಯಿಂದ ಬಿಡುಗಡೆಯಾಗಿರುವ 8 ಸಿಬ್ಬಂದಿ ಪೈಕಿ ಇಬ್ಬರು ಹೋಮ್ ಕ್ವಾರಂಟೈನ್ ಅವಧಿ ಸಹ ಮುಗಿಸಿದ್ದು, ಕರ್ತವ್ಯಕ್ಕೆ ಮರಳಲು ಕಾತುರರಾಗಿದ್ದಾರೆ. ಇನ್ನುಳಿದ ಆರು ಮಂದಿ ಹೋಮ್ ಕ್ವಾರಂಟೈನ್‌ದಲ್ಲಿದ್ದಾರೆ.
ಹುಬ್ಬಳ್ಳಿ ವಿಭಾಗದಲ್ಲಿ ಒಟ್ಟು 2170 ಸಿಬ್ಬಂದಿಗಳಿದ್ದಾರೆ. 55 ವರ್ಷ ಮೇಲ್ಪಟ್ಟ ಸಿಬ್ಬಂದಿಗೆ ಕರ್ತವ್ಯದಿಂದ ವಿನಾಯಿತಿ ನೀಡಲಾಗಿದೆ. ವಯಸ್ಸಿನ ಮಿತಿಯಿಲ್ಲದೆ ಹೃದಯ ರೋಗ, ಮಧುಮೇಹ, ರಕ್ತದೊತ್ತಡ ಮತ್ತಿತರ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ನೌಕರರಿಗೆ ರಜೆ ನೀಡಲಾಗಿದೆ. ಪ್ರತಿದಿನ ಕರ್ತವ್ಯಕ್ಕೆ ಹಾಜರಾಗುವ ಎಲ್ಲಾ ಸಿಬ್ಬಂದಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ವಿಭಾಗೀಯ ಕಚೇರಿ, ವಿಭಾಗೀಯ ಕಾರ್ಯಾಗಾರ, ಬಸ್ ಘಟಕಗಳು, ಬಸ್ಸುಗಳು ಮತ್ತು ಬಸ್ ನಿಲ್ದಾಣಗಳಲ್ಲಿ ಎಲ್ಲಾ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ.
ಸಾರಿಗೆ ಸಿಬ್ಬಂದಿ ಅದರಲ್ಲೂ ಮುಖ್ಯವಾಗಿ ಚಾಲಕರು ಮತ್ತು ನಿರ್ವಾಹಕರು ಕರ್ತವ್ಯದ ಸಮಯದಲ್ಲಿ ಪ್ರತಿದಿನವೂ ವಿವಿಧ ಸ್ತರದ ಹಲವಾರು ಜನರ ಸಂಪರ್ಕಕ್ಕೆ ಬರುವ ಅನಿವಾರ್ಯತೆ ಇರುತ್ತದೆ. ಆದ್ದರಿಂದ ಎಲ್ಲಾ ಸುರಕ್ಷತಾ ಕ್ರಮ ಅನುಸರಿಸುವಂತೆ ತಿಳಿವಳಿಕೆ ನೀಡಲಾಗಿದೆ. ಕಿಮ್ಸ್ ಮತ್ತು ಕೋವಿಡ್ ಚಿಕಿತ್ಸಾ ಕೇಂದ್ರಗಳಲ್ಲಿನ ವೈದ್ಯರು ಹಾಗೂ ನರ್ಸ್‌ಗಳು ನಿರಂತರವಾಗಿ ಸೋಂಕಿತ ಸಿಬ್ಬಂದಿಗಳ ಆರೋಗ್ಯ ತಪಾಸಣೆ ಮಾಡುತ್ತ, ಯೋಗಕ್ಷೇಮ ವಿಚಾರಿಸಿ ನಿಯಮಿತವಾಗಿ ಸೂಕ್ತ ಚಿಕಿತ್ಸೆ ನೀಡಿದ್ದಾರೆ. ಜತೆಗೆ ಉತ್ತಮ ಊಟೋಪಚಾರ ಹಾಗೂ ಪ್ರಾರಂಭದಿಂದಲೇ ಧೈರ್ಯ ಹೇಳಿ ಅವರಲ್ಲಿನ ಭಯ ನಿವಾರಿಸಿ ಆತ್ಮವಿಶ್ವಾಸ ತುಂಬಿದ್ದರಿಂದ ಎಲ್ಲರೂ ಶೀಘ್ರ ಗುಣಮುಖರಾಗಲು ಕಾರಣವಾಗಿದೆ. ಸಕಾಲಿಕ ನೆರವು ನೀಡಿದ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಹಾಗೂ ಕಿಮ್ಸ್ ನ ಹಿರಿಯ ಅಧಿಕಾರಿಗಳಿಗೆ ವಾಕರಸಾ ಸಂಸ್ಥೆಯ ವತಿಯಿಂದ ಕೃತಜ್ಞತೆ ಸಲ್ಲಿಸಲಾಗುವುದು ಎಂದು ರಾಮನಗೌಡರ ತಿಳಿಸಿದ್ದಾರೆ.