ನವದೆಹಲಿ: ಕಳೆದ ಕೆಲವು ತಿಂಗಳಿನಿಂದ ಕೆಲವು ಎಟಿಎಂಗಳಲ್ಲಿ ಬರೇ 2000 ಸಾವಿರ ರೂಪಾಯಿ ನೋಟುಗಳೇ ಹೆಚ್ಚಾಗಿ ಯಾಕೆ ಬರುತ್ತಿದೆ ಎಂದು ಅಚ್ಚರಿಗೊಳಗಾಗಿದ್ದೀರಾ? ಹಾಗಾದರೆ ಅದಕ್ಕೆ ಉತ್ತರ ಈಗ ಸಿಕ್ಕಿದೆ. ಯಾಕೆಂದರೆ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ಮುದ್ರಣವನ್ನು ನಿಲ್ಲಿಸಿರುವುದಾಗಿ ಆರ್ ಟಿ ಐ ಅರ್ಜಿಗೆ ನೀಡಿರುವ ಆರ್ ಬಿಐ ಉತ್ತರದಲ್ಲಿ ಬಹಿರಂಗಗೊಂಡಿದೆ!
ದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಆರ್ ಟಿಐ ಅರ್ಜಿಯಡಿ ಕೇಳಿದ ಪ್ರಶ್ನೆಗೆ ಆರ್ ಬಿಐ ಈ ಮಾಹಿತಿ ನೀಡಿರುವುದಾಗಿ ತಿಳಿಸಿದೆ. ಪ್ರಸಕ್ತ ಸಾಲಿನಲ್ಲಿ 2000 ರೂಪಾಯಿ ಮುಖಬೆಲೆಯ ಒಂದೇ ಒಂದು ನೋಟನ್ನು ಮುದ್ರಿಸಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ್ ಪ್ರೈವೇಟ್ ಲಿಮಿಟೆಡ್ ತಿಳಿಸಿದೆ.
ದುಬಾರಿ ಮುಖಬೆಲೆಯ ನೋಟುಗಳ ಮುದ್ರಣ ನಿಲ್ಲಿಸುವ ಮೂಲಕ ಕಪ್ಪು ಹಣದ ವಹಿವಾಟಿಗೆ ಕಡಿವಾಣ ಹಾಕಲು ನೆರವಾಗಲಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. 2000 ಮುಖಬೆಲೆಯ ನೋಟುಗಳನ್ನು ಚಲಾವಣೆಯಲ್ಲಿ ಕಡಿಮೆಯಾಗುವ ಮೂಲಕ ಹೆಚ್ಚಿನ ಕಪ್ಪು ಹಣದ ವಹಿವಾಟಿಗೆ ಕಷ್ಟವಾಗಲಿದೆ. ನೋಟು ಮುದ್ರಣ ನಿಲ್ಲಿಸುವ ಕ್ರಮ, ನೋಟು ನಿಷೇಧಕ್ಕಿಂತ ಉತ್ತಮವಾದದ್ದು. ಇದರಿಂದ ನಮಗೆ ಯಾವುದೇ ತೊಂದರೆಯಾಗುವುದಿಲ್ಲ, ಕೇವಲ ನೋಟಿನ ಚಲಾವಣೆ ಕಡಿಮೆಯಾಗಲಿದೆ ಎಂದು ಆರ್ಥಿಕ ತಜ್ಞ ನಿತಿನ್ ದೇಸಾಯಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಬಹುಶಃ ಜನರು ಹೆಚ್ಚು, ಹೆಚ್ಚು ನಗದನ್ನು ಕೂಡಿಡುವುದು ಅಥವಾ ಕಪ್ಪು ಹಣವನ್ನು ಹೊಂದುವುದನ್ನು ತಡೆಯಲು ಈ ಕ್ರಮಕ್ಕೆ ಮುಂದಾಗಿರಬೇಕೆಂದು ಮತ್ತೊಬ್ಬ ಆರ್ಥಿಕ ತಜ್ಞ, ಲೇಖಕ ಶೇರ್ ಸಿಂಗ್ ತಿಳಿಸಿದ್ದಾರೆ. ಅಲ್ಲದೇ ನಗದು ವಹಿವಾಟಿಗಿಂತ ಜನರು ಹೆಚ್ಚು, ಹೆಚ್ಚು ಡಿಜಿಟಲ್ ವ್ಯವಹಾರಕ್ಕೆ ಹೆಚ್ಚು ಒತ್ತು ಕೊಡಲು ಸರಕಾರ ಚಿಂತಿಸುತ್ತಿದೆ ಎಂದರು.
2016ರ ನವೆಂಬರ್ ನಲ್ಲಿ ಕೇಂದ್ರ ಸರಕಾರ ಏಕಾಏಕಿ 1000 ರೂ. ಮುಖಬೆಲೆಯ ಹಾಗೂ 500 ರೂ. ನೋಟುಗಳನ್ನು ನಿಷೇಧಿಸಿತ್ತು. ನಂತರ ಆರ್ ಬಿಐ 2000 ರೂ. ಮುಖಬೆಲೆಯ ಹೊಸ ನೋಟುಗಳನ್ನು ಪರಿಚಯಿಸಿತ್ತು.
2016-17ನೇ ಸಾಲಿನಲ್ಲಿ 3,542.991 ಮಿಲಿಯನ್ ನಷ್ಟು 2000 ರೂ. ಮುಖಬೆಲೆಯ ನೋಟುಗಳನ್ನು ಮುದ್ರಿಸಿರುವುದಾಗಿ ಆರ್ ಬಿಐ ನೀಡಿರುವ ಉತ್ತರದಲ್ಲಿ ತಿಳಿಸಿದೆ. 2017-18ನೇ ಸಾಲಿನಲ್ಲಿ 111.507 ಮಿಲಿಯನ್ (2000 ಮುಖಬೆಲೆಯ) ನೋಟುಗಳನ್ನು ಮುದ್ರಿಸಲಾಗಿತ್ತು. 2018-19ನೇ ಸಾಲಿನಲ್ಲಿ ಕೇವಲ 46.690 ಮಿಲಿಯನ್ (2000 ಮುಖಬೆಲೆಯ) ನೋಟುಗಳನ್ನಷ್ಟೇ ಮುದ್ರಿಸಲಾಗಿತ್ತು ಎಂದು ವಿವರಿಸಿದೆ.