ಕ್ಯಾನ್ ಬೆರಾ: ಕ್ರಿಕೆಟ್ ತಂಡಗಳು ಆಸ್ಟ್ರೇಲಿಯಾದಲ್ಲಿ ಐಸಿಸಿ ಟಿ20 ವಿಶ್ವಕಪ್ ನಲ್ಲಿ ತೊಡಗಿದ್ದರೆ, ಅತ್ತ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯು ತಮ್ಮ ಏಕದಿನ ತಂಡಕ್ಕೆ ನೂತನ ನಾಯಕನನ್ನು ಆಯ್ಕೆ ಮಾಡಿದೆ. ಆ್ಯರೋನ್ ಫಿಂಚ್ ರಾಜೀನಾಮೆ ನೀಡಿದ ಬಳಿಕ ಅವರ ಜಾಗಕ್ಕೆ ವೇಗಿ ಪ್ಯಾಟ್ ಕಮಿನ್ಸ್ ರನ್ನು ನೇಮಿಸಿ ಅಚ್ಚರಿ ಮೂಡಿಸಿದೆ.
ಪ್ಯಾಟ್ ಕಮಿನ್ಸ್ ಈಗಾಗಲೇ ಟೆಸ್ಟ್ ತಂಡದ ನಾಯಕತ್ವದ ಅನುಭವವನ್ನು ಹೊಂದಿದ್ದಾರೆ. ಮುಂದಿನ ಏಕದಿನ ವಿಶ್ವಕಪ್‌ಗೆ ಒಂದು ವರ್ಷ ಬಾಕಿ ಇರುವಾಗ, ಕ್ರಿಕೆಟ್ ಆಸ್ಟ್ರೇಲಿಯಾ ಮಂಗಳವಾರ ಪ್ರಕಟಿಸಿದ ನಿರ್ಧಾರವು ಬಹಳಷ್ಟು ಮಹತ್ವವನ್ನು ಹೊಂದಿದೆ.
“ನಾನು ಫಿಂಚ್ ನಾಯಕತ್ವದಡಿಯಲ್ಲಿ ಆಡುವುದನ್ನು ಸಂಪೂರ್ಣವಾಗಿ ಆನಂದಿಸಿದ್ದೇನೆ. ಅವರ ನಾಯಕತ್ವದಿಂದ ಬಹಳಷ್ಟು ಕಲಿತಿದ್ದೇನೆ. ನಾನು ದೊಡ್ಡ ಜಾಗವನ್ನು ತುಂಬಬೇಕಿದೆ. ಆದರೂ ಈ ಪ್ರಮಾಣದ ಅನುಭವವಿರುವ ಏಕದಿನ ತಂಡವನ್ನು ಮುನ್ನಡೆಸಲು ಅತ್ಯಂತ ಸಂತಸವಾಗುತ್ತಿದೆ” ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಬಿಡುಗಡೆ ಮಾಡಿದ ಮಾಧ್ಯಮ ಹೇಳಿಕೆಯಲ್ಲಿ ಕಮಿನ್ಸ್ ಹೇಳಿದ್ದಾರೆ.
ಇದನ್ನೂ ಓದಿ:ದಾವಣಗೆರೆ ಬೆಣ್ಣೆದೋಸೆ ಸವಿದ ಸ್ಯಾಂಡಲ್‌ವುಡ್‌ನ ಮೋಹಕ ತಾರೆ ರಮ್ಯ
ನೇಮಕಾತಿಯ ಕುರಿತು ಪ್ರತಿಕ್ರಿಯಿಸಿದ ಆಯ್ಕೆ ಸಮಿತಿ ಅಧ್ಯಕ್ಷ ಜಾರ್ಜ್ ಬೈಲಿ, “ಕಮಿನ್ಸ್ ಅವರು ಟೆಸ್ಟ್ ತಂಡದ ನಾಯಕತ್ವವನ್ನು ವಹಿಸಿಕೊಂಡ ನಂತರ ಅತ್ಯುತ್ತಮ ಕೆಲಸ ಮಾಡಿದ್ದಾರೆ. 2023 ರ ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ಗೆ ಏಕದಿನ ತಂಡವನ್ನು ಮುನ್ನಡೆಸುವುದನ್ನು ನಾವು ಎದುರು ನೋಡುತ್ತಿದ್ದೇವೆ” ಎಂದರು.
ಹಿರಿಯ ಆಟಗಾರ ಡೇವಿಡ್ ವಾರ್ನರ್ ಅವರೇ ಮುಂದಿನ ನಾಯಕರಾಗುತ್ತಾರೆ ಎನ್ನಲಾಗಿತ್ತು. ಬಾಲ್ ಟ್ಯಾಂಪರಿಂಗ್ ಪ್ರಕರಣದ ಬಳಿಕ ವಾರ್ನರ್ ಆಸೀಸ್ ನಲ್ಲಿ ನಾಯಕತ್ವ ಹುದ್ದೆ ಹೊಂದುವಂತಿಲ್ಲ. ಆದರೆ ಈ ನಿಷೇಧವನ್ನು ರದ್ದು ಮಾಡಿ ಫಿಂಚ್ ಜಾಗಕ್ಕೆ ವಾರ್ನರ್ ನೇಮಕ ಮಾಡಲಾಗುತ್ತದೆ ಎಂದು ವರದಿಯಾಗಿತ್ತು. ಈ ಕುರಿತು ವಾರ್ನರ್ ಕೂಡಾ ಅಭಿಲಾಷೆ ವ್ಯಕ್ತಪಡಿಸಿದ್ದರು. ಆದರೆ ವಾರ್ನರ್ ಗೆ ನಿರಾಸೆಯಾಗಿದೆ.
ಆಸ್ಟ್ರೇಲಿಯಾವು ನವೆಂಬರ್ 17 ರಿಂದ ಪ್ರಾರಂಭವಾಗುವ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಇದು ಪ್ಯಾಟ್ ಕಮಿನ್ಸ್ ಗೆ ಮೊದಲ ಸವಾಲಾಗಲಿದೆ. ಬಳಿಕ ಜನವರಿಯಲ್ಲಿ ದಕ್ಷಿಣ ಆಫ್ರಿಕಾವನ್ನು ತವರಿನಲ್ಲಿ ಎದುರಿಸಲಿದೆ.